ಶೋಷಿತರ ಪರವಾಗಿ ನಿಲ್ಲುವ ಚಿಂತನೆ ಇಂದಿನ ಅಗತ್ಯ: ಮುನಿಯಪ್ಪ
ಕುಂದಾಪುರ, ನ.17: ಜಾತಿ ಬೇಧ, ಅಸಮಾನತೆ ಹೋಗಲಾಡಿಸಿ ಗಾಂಧೀ, ಬುದ್ದ, ಬಸವಣ್ಣ, ಅಂಬೇಡ್ಕರ್ ತತ್ವಾ ದರ್ಶಗಳು ಅನುಷ್ಠಾನವಾಗಲು ಸಮಾಜದಲ್ಲಿ ಉಳ್ಳವರು ಬಡವರ ಪರ ಕೆಲಸ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಬೆಂಗಳೂರು ಪ್ರಾಯೋಜಿತ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಾರ್ದಳ್ಳಿ-ಮಂಡಳ್ಳಿ ಗ್ರಾಪಂ ವ್ಯಾಪ್ತಿಯ ಜನ್ನಾಡಿ, ಮಣಿಗೇರೆಯ ಕೊರಗ ಕಾಲನಿಯಲ್ಲಿ ಅಂದಾಜು 2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 14 ಸುಸಜ್ಜಿತ ಮನೆಗಳ ಗೃಹಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರವಿವಾರ ಅವರು ಮಾತನಾಡುತ್ತಿದ್ದರು.
ಶೋಷಿತರ ಪರವಾಗಿ ನಿಲ್ಲುವ ಚಿಂತನೆ ಅಗತ್ಯ. ಆಗ ಮಾತ್ರ ರಾಮರಾಜ್ಯದ ಕನಸು ನನಸಾಗುತ್ತದೆ. ಬಡವರ ಬದುಕಿಗೆ ನೆಲೆ ನೀಡುವುದು ಸಮಾಜ ಸುಧಾರಣೆಯ ಅಡಿಗಲ್ಲು. ನಂಬಿಕೆಯ ತಳಹದಿ ಇರುವಲ್ಲಿ ಸಮಾಜ ಪರಿವರ್ತನೆ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಡಾ.ಎಚ್.ಎಸ್ ಶೆಟ್ಟಿ ಮಾತನಾಡಿದರು. ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗೃಹಪೂಜೆ ನೆರವೇರಿಸಿದರು. ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಮತ್ತು ಕೇರಳ ರಾಜ್ಯ ಅಧ್ಯಕ್ಷೆ ಸುಶೀಲಾ ನಾಡ, ಸಮಾಜ ಸೇವಕ ದಿನೇಶ್ ಹೆಗ್ಡೆ ಮೊಳಹಳ್ಳಿ, ಹಾರ್ದಳ್ಳಿ-ಮಂಡಳ್ಳಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಮೊಳಹಳ್ಳಿ ಗ್ರಾಪಂ ಅಧ್ಯಕ್ಷ ಮರತ್ತೂರು ಚಂದ್ರಶೇಖರ ಶೆಟ್ಟಿ, ಹಾಲಾಡಿ ಗ್ರಾಪಂ ಮಾಜಿ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ, ಕೊರಗಾಭಿವೃದ್ಧಿ ಸಂಸ್ಥೆಗಳ ಕುಂದಾಪುರ ವಲಯದ ಅಧ್ಯಕ್ಷ ಕುಮಾರದಾಸ್, ಉದ್ಯಮಿ ಎಚ್.ಶಂಕರ್ ಹೆಗ್ಡೆ, ಗುರುನಾಥ ದಾನಪ್ಪ ಶಿರಹಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಮುರುಳಿ ಕಡೆಕಾರು ಸ್ವಾಗತಿಸಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.