ನಾರಾಯಣಗುರು ನಿಗಮ ಮಂಡಳಿಗೆ 500ಕೋಟಿ ಅನುದಾನಕ್ಕೆ ಪ್ರಯತ್ನ: ಸಚಿವ ಮಧು ಬಂಗಾರಪ್ಪ
ಬ್ರಹ್ಮಾವರ, ಸೆ.17: ನಾರಾಯಣ ಗುರುಗಳ ನಿಗಮ ಮಂಡಳಿಗೆ ರಾಜ್ಯ ಸರಕಾರದಿಂದ 500ಕೋಟಿ ರೂ. ಅನುದಾನ ಬಿಡುಗಡೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಅವರಲ್ಲಿ ಬೇಡಿಕೆ ಸಲ್ಲಿಸಲಾ ಗುವುದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬ್ರಹ್ಮಾವರದ ಬಿಲ್ಲವರ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಾವರದಲ್ಲಿ ರವಿವಾರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಶಿಲಾನ್ಯಾಸ ನೇರವೇರಿಸಿ ಅವರು ಮಾತನಾಡುತ್ತಿದ್ದರು. ಪಕ್ಷಬೇಧ ಮರೆತು ಸಮಾಜದ ಏಳಿಗೆ, ಅನುದಾನ ಮತ್ತು ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ. ನಾರಾಯಣಗುರು ಜಯಂತಿ, ಅಧ್ಯಯನ ಪೀಠ ಸ್ಥಾಪನೆ ಮತ್ತು ಪಠ್ಯ ಪುಸ್ತಕದಲ್ಲಿ ನಾರಾಯಣ ಗುರುಗಳ ಬಗ್ಗೆ ಪಾಠ ಹೀಗೆ ನಾರಾಯಣಗುರುಗಳ ತತ್ವ ಸಿದ್ಧಾಂತವನ್ನು ಮುಂದಿನ ಜನಾಂಗಕ್ಕೆ ಕೊಡಿಸುವ ಕೆಲಸ ಈ ಮೂಲಕ ಆಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ವಹಿಸಿದ್ದರು. ಸೋಲೂರು ಮಠ ಆರ್ಯ ಈಡಿಗ ಸಮಾಜದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಸಚಿವರಾದ ಸುನಿಲ್ ಕುಮಾರ್, ವಿನಯ ಕುಮಾರ ಸೊರಕೆ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ಗೋಪಾಲ ಪೂಜಾರಿ, ಪ್ರಮುಖರಾದ ಹರೀಶ ಅಮೀನ್, ರಾಜಶೇಖರ ಕೋಟ್ಯಾನ್, ಸಂಕಪ್ಪ ಎ., ಪ್ರವೀಣ ಪೂಜಾರಿ, ನವೀನ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯ ಅತ್ಯುತ್ತಮ ಶಿಕ್ಷಕ ಪುರಸ್ಕೃತ ಕೋಟ ವಿವೇಕ ಬಾಲಕಿಯರ ಪ್ರೌಢ ಶಾಲೆಯ ಅಧ್ಯಾಪಕ ನರೇಂದ್ರ ಕುಮಾರ್ ಕೋಟ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಸುನೀತ ಲೋಕನಾಥ ಕೋಟ್ಯಾನ್ ಅವರನ್ನು ಸನ್ಮಾನಿಸ ಲಾಯಿತು. ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಮಾಜ ಬಾಂಧವರನ್ನು ಗೌರವಿಸಲಾಯಿತು.