ಗೃಹರಕ್ಷಕರಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆ: ಉಡುಪಿ ಡಿಸಿ ಡಾ. ವಿದ್ಯಾಕುಮಾರಿ
ಉಡುಪಿ: ಪ್ರಕೃತಿ ವಿಕೋಪವೂ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ಗೃಹರಕ್ಷಕದಳದ ಸಿಬ್ಬಂದಿಗಳು ತಮ್ಮ ಜೀವವನ್ನು ಪಣಕಿಟ್ಟು ಜನರ ಸಂಕಷ್ಟಗಳಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಸಮಾಜಕ್ಕೆ ನಿಸ್ವಾರ್ಥ ಸೇವೆ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಶುಕ್ರವಾರ ನಗರದ ಜಿಲ್ಲಾ ಗೃಹರಕ್ಷಕ ದಳ ಕಚೇರಿ ಆವರಣದಲ್ಲಿ ಜಿಲ್ಲಾ ಗೃಹರಕ್ಷಕ ದಳ ಉಡುಪಿ ಜಿಲ್ಲೆ ವತಿಯಿಂದ ನಡೆದ ಅಖಿಲ ಭಾರತ ಗೃಹರಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆಯ ಜೊತೆಗೂಡಿ, ಅವರಿಗೆ ಸಹಕಾರ ನೀಡಿ, ಕರ್ತವ್ಯ ನಿರ್ವಸುತ್ತಿರುವ ಗೃಹರಕ್ಷಕ ದಳದ ಕಾರ್ಯ ಶ್ಲಾಘನೀಯ ಎಂದ ಅವರು, ಮುಂದಿನ ದಿನಗಳಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಗಳೂ ಇದೇ ರೀತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ನೀಡುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮಾತನಾಡಿ, ಗೃಹರಕ್ಷಕ ದಳವು ಪೊಲೀಸ್ ಇಲಾಖೆಯ ಒಂದು ಪ್ರಮುಖ ಅಂಗವಾಗಿದ್ದು, ಬೇರೆ ಇಲಾಖೆಯನ್ನು ಹೋಲಿಸಿದರೆ ಗೃಹ ರಕ್ಷಕದಳ ಇಲಾಖೆ ಪೊಲೀಸ್ ಇಲಾಖೆಯನ್ನು ಅತಿ ಸಮೀಪದಿಂದ ತಿಳಿದಿದೆ. ಯಾವುದೇ ಸಮಯದಲ್ಲೂ ಪೊಲೀಸ್ ಇಲಾಖೆಯ ಕೆಲಸಗಳಿಗೆ ಗೃಹರಕ್ಷಕರು ಸಹಕಾರ ನೀಡುತ್ತಿದ್ದಾರೆ ಎಂದರು.
ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟ ಡಾ.ರೋಶನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ವಾಚಿಸಿ ಮಾತನಾಡಿ, ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಮುಂದಿನ ದಿನಗಳಲ್ಲಿ ಬೀಚ್‌ಗಳಲ್ಲಿ ಪ್ರವಾಸಿಗರ ಜೀವರಕ್ಷಕರ ಸೇವೆಯಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗುವುದು ಎಂದರು.
ಕಾರ್ಯಕ್ರಮದ ಅಂಗವಾಗಿ ಗೃಹರಕ್ಷಕ ದಳ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕಾರ್ಕಳ ಘಟಕದ ಶಿವಪ್ರಸಾದ್, ಬ್ರಹ್ಮಾವರ ಘಟಕದ ಜಯ ಕುಮಾರ್, ಉಡುಪಿ ಘಟಕದ ಪೂರ್ಣಿಮಾ ಹಾಗೂ ಮಣಿಪಾಲ ಘಟಕದ ಲ್ಮಾ ಜ್ಯೋತಿ ರೊಡ್ರಿಗಸ್‌ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಅಧೀಕ್ಷಕ ರತ್ನಾಕರ್ ಎಂ ಸನ್ಮಾನಿತರನ್ನು ಪರಿಚಯಿಸಿದರು. ಸ್ಟೀವಸ್ ಪ್ರಕಾಶ್ ಲೂಸ್ ಕಾರ್ಯಕ್ರಮ ನಿರೂಪಿಸಿ, ಕಾರ್ಕಳ ಘಟಕದ ಪ್ಲಟೂನ್ ಕಮಾಂಡರ್ ಪ್ರಭಾಕರ ಸುವರ್ಣ ವಂದಿಸಿದರು.