ಅಮಿತ್ ಶಾ, ಸಿ.ಟಿ.ರವಿ ಅವಹೇಳನಕಾರಿ ಹೇಳಿಕೆ: ವಿವಿಧ ಸಂಘಟನೆಗಳಿಂದ ಉಡುಪಿ ಡಿಸಿ ಕಚೇರಿ ಎದುರು ಧರಣಿ
ಉಡುಪಿ, ಡಿ.24: ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಡಾ.ಅಂಬೇಡ್ಕರ್‌ಗೆ ಅವಮಾನ ಮಾಡಿ ಆಡಿದ ಮಾತುಗಳು ಮತ್ತು ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಸಿ.ಟಿ. ರವಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷೀ ಹೆಬ್ಬಾಳ್ಕರ್ ಕುರಿತಂತೆ ಆಡಿದ ಅಕ್ಷೇಪಾರ್ಹ ಮಾತುಗಳನ್ನು ಖಂಡಿಸಿ ದಲಿತ ಹಕ್ಕುಗಳ ಸಮಿತಿ ಹಾಗೂ ಜನವಾದಿ ಮಹಿಳಾ ಸಂಘಟನೆ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸ್ವತಹ ದಮನಿತ ಸಮುದಾಯದಿಂದ ಬಂದ ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದಲ್ಲಿ ದೇಶದ ಎಲ್ಲಾ ಜನರಿಗೆ ಸಮಾನ ಅವಕಾಶ, ಸಮಾನ ಅಧಿಕಾರ, ಘನತೆಯ ಬದುಕಿನ ಆಶ್ವಾಸನೆಗಳಿಗೆ. ಇದು ಜಾತಿ ವ್ಯವಸ್ಥೆಯನ್ನು ಖಾಯಂಗೊಳಿಸಿ, ಉಚ್ಛ-ನೀಚ, ಮೇಲು-ಕೀಳನ್ನು ಪ್ರತಿಪಾದಿಸುವ ಮನುವಾದವನ್ನು ಒಪ್ಪುವ ಅಮಿತ್ ಶಾ ಮತ್ತವರ ಬಿಜೆಪಿ ಪಕ್ಷಕ್ಕೆ ಸಹನೀಯವಲ್ಲ.
ಹೀಗಾಗಿಯೇ ಅವರು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸತ್ತಿನಲ್ಲಿ ನಿಂತು ಅಂಬೇಡ್ಕರ್ ಅವರನ್ನು ಅವಮಾನಿಸುವ ಮೂಲಕ ಸಂವಿಧಾನ ಹಾಗೂ ದೇಶದ ಅಸಂಖ್ಯಾತ ದುಡಿಯುವ ಜನರನ್ನು ಅಪಮಾನಿ ಸಿದ್ದಾರೆ. ಅಮಿತ್ ಶಾರನ್ನು ಸಮರ್ಥಿಸಿಕೊಂಡಿರುವ ಪ್ರಧಾನಮಂತ್ರಿಗಳ ನಡೆಯೂ ವಿವೇಚನಾರಹಿತವಾಗಿದೆ ಎಂದು ಅವರು ನುಡಿದರು.
ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಅಮಿತ್ ಶಾಗೆ ಸಚಿವರಾಗಿ ಮುಂದುವರಿಯುವ ಯಾವ ನೈತಿಕತೆಯೂ ಇಲ್ಲ, ಅವರು ತಕ್ಷಣವೇ ತಮ್ಮ ಸಚಿವ ಪದಕ್ಕೆ ರಾಜಿನಾಮೆ ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರ್ನಾಟಕದ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಶಾಸಕ ಸಿ.ಟಿ.ರವಿ ರಾಜ್ಯದ ಮಹಿಳಾ ಸಚಿವರನ್ನು ಉದ್ದೇಶಿಸಿ ಆಡಿದ ಅತ್ಯಂತ ಅಕ್ಷೇಪಾರ್ಹ ಮಾತು ಗಳನ್ನು ನಾವು ಖಂಡಿಸುತ್ತೇವೆ.ಸಡಿಲ ನಾಲಗೆಯ ಹಗುರ ಮಾತುಗಳನ್ನಾಡುವ ಚಾಳಿ ಯನ್ನು ಹೊಂದಿರುವ ಸಿ.ಟಿ. ರವಿ ಅವರನ್ನು ತಕ್ಷಣವೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದವರು ಆಗ್ರಹಿಸಿದರು.
ದೇಶದ ಸಂವಿಧಾನದ ಬೆಳಕಿನಲ್ಲಿ ಸರ್ವಸಮಾನತೆಯನ್ನು ಒಪ್ಪಿಕೊಂಡು, ಲಿಂಗ, ಜಾತಿ, ಮತ ಧರ್ಮ ಬೇಧವಿಲ್ಲದೇ ಬಾಳುವ ಆಶಯವನ್ನು ಹೊಂದಿರುವ ಬಹುತ್ವ ಭಾರತದ ಪ್ರಜೆಗಳಾಗಿ ನಾವೀ ಒತ್ತಾಯಗಳನ್ನು ಮಾಡುತ್ತಿದ್ದೇವೆ ಎಂದು ಜನವಾದಿ ಮಹಿಳಾ ಸಂಘಟನೆಯ ಸದಸ್ಯೆಯರು ನುಡಿದರು.
ಪ್ರತಿಭಟನಾ ಸಭೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಕುಂದಾಪುರ ಮಹಿಳಾ ಸಂಘದ ಅಧ್ಯಕ್ಷೆ ಬಲ್ಕೀಸ್, ಬೈಂದೂರು ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ನಾಡ, ಮುಖಂಡರಾದ ನಳಿನಿ ಎಸ್., ಗಿರಿಜಾ, ರವಿಕಲಾ, ಪದ್ದು, ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ಮುಖಂಡರಾದ ರವಿ ವಿ.ಎಂ ಕುಂದಾಪುರ, ರಾಮ ಕಾರ್ಕಡ ಸಾಲಿಗ್ರಾಮ, ರಂಗನಾಥ ಉಡುಪಿ, ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಕೋಶಾಧಿಕಾರಿ ಶಶಿಧರ ಗೊಲ್ಲ, ಉಪಾಧ್ಯಕ್ಷರಾದ ಎಚ್.ನರಸಿಂಹ, ಚಿಕ್ಕ ಮೊಗವೀರ, ಕಾರ್ಯದರ್ಶಿ ಚಂದ್ರಶೇಖರ, ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್.ಕಾಂಚನ್, ಮುಖಂಡರಾದ ಸುಭಾಸ್ ನಾಯಕ್, ಸದಾಶಿವ ಪೂಜಾರಿ, ಉಮೇಶ್ ಕುಂದರ್, ಮೋಹನ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಮುಂತಾದವರು ಉಪಸ್ಥಿತರಿದ್ದರು.