ಲಂಚ ಸ್ವೀಕಾರ ಆರೋಪ: ಕೋಟ ಎಸ್ಸೈ ಶಂಭುಲಿಂಗಯ್ಯ ಅಮಾನತು

Update: 2023-12-11 16:50 GMT

ಶಂಭುಲಿಂಗಯ್ಯ

ಉಡುಪಿ: ಕೋಟ ಪೊಲೀಸ್ ಠಾಣಾ ಉಪನಿರೀಕ್ಷಕ ಪ್ರಸ್ತುತ ಒಒಡಿ ಮೇಲೆ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಭುಲಿಂಗಯ್ಯ ಅವರನ್ನು ಲಂಚ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿಯೊಂದರ ಗಲಾಟೆಗೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತರೋರ್ವರು ವೀಡಿಯೋ ಮೂಲಕ ದೂರಿದ್ದರು. ಪ್ರಾಥಮಿಕ ಮಾಹಿತಿಯಂತೆ ಎಸ್ಸೈ ಅವರನ್ನು ಅಮಾನತುಗೊಳಿಸಲಾಗಿದ್ದು, ಮುಂದೆ ಇಲಾಖಾ ವಿಚಾರಣೆ ನಡೆಸಿ ಮುಂದಿನ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಅಚ್ಲಾಡಿಯ ಖಾಸಗಿ ಕಾಲೇಜಿನಲ್ಲಿ ಆಡಳಿತ ಮಂಡಳಿಯೊಳಗೆ ಗಲಾಟೆಗೆ ಸಂಬಂಧಿಸಿದಂತೆ ಮಧು ಭಾಸ್ಕರ್ ಹಾಗೂ ಮಹಿಮಾ ಮಧು ಭಾಸ್ಕರ್ ಪರಸ್ಪರ ದೂರು ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಮಧು ಭಾಸ್ಕರ್ ವಿರುದ್ದ ದೂರು ದಾಖಲಿಸಲು ಹಾಗೂ ಮಹಿಮಾ ವಿರುದ್ದದ ದೂರಿಗೆ ಬಿ.ರಿಪೋರ್ಟ್ ನೀಡುವುದಾಗಿ ಆಗ ಠಾಣಾಧಿಕಾರಿಯಾಗಿದ್ದ ಶಂಭುಲಿಂಗಯ್ಯ ಲಂಚ ಪಡೆದಿದ್ದರು ಎಂದು ದೂರಲಾಗಿದೆ.

ಅದರಲ್ಲೂ ಹತ್ತಿರದ ಸಂಬಂಧಿಯೋರ್ವರ ಖಾತೆಗೆ ಸ್ವಲ್ಪ ಮೊತ್ತದ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ಠಾಣಾಧಿಕಾರಿಗಳನ್ನು ತಕ್ಷಣ ಅಮಾನತು ಗೊಳಿಸಬೇಕು ಎಂದು ದಿನೇಶ್ ಗಾಣಿಗ ಕೋಟ ವೀಡಿಯೋ ಮೂಲಕ ಎಸ್ಪಿ ಅವರನ್ನು ಮನವಿ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿತ್ತು. ಶಂಭುಲಿಂಗಯ್ಯ ಅವರನ್ನು ಈ ಹಿಂದೆ ಅಶಿಸ್ತಿನ ಕಾರಣಕ್ಕೆ ಒಒಡಿ ಮೇಲೆ ಕೋಟದಿಂದ ಕಾರ್ಕಳಕ್ಕೆ ವರ್ಗಾಯಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News