ಉಡುಪಿ ಜಿಲ್ಲೆಯ ಎಲ್ಲಾ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ: ಜಿಲ್ಲಾಧಿಕಾರಿ ವಿದ್ಯಾಕುಮಾರಿ

Update: 2024-09-25 16:13 GMT

ಉಡುಪಿ, ಸೆ.25: ಜಿಲ್ಲೆಯಲ್ಲಿರುವ ಎಲ್ಲಾ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿ.ಸಿ.ಟಿ.ವಿ ಆಳವಡಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕೆಸ್ವಾನ್ ವೀಡಿಯೋ ಕಾನ್ಸ್‌ರೆನ್ಸ್ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೋಟ್ಪಾ-2003 ಕಾಯ್ದೆ ಕುರಿತ ಎರಡನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಯುವಜನತೆಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಅವುಗಳಿಂದ ದೂರ ಉಳಿಯು ವಂತೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ಯುವಜನತೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತುಗಳಿಗೆ ಮಾರು ಹೋಗಿ ಶಿಕ್ಷಣದಿಂದ ವಂಚಿತರಾಗುವ ಜೊತೆಗೆ ತಮ್ಮ ಅರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಅಲ್ಲದೇ ಸಮಾಜದಲ್ಲೂ ಅವರು ಗೌರವ ಕಳೆದುಕೊಳ್ಳುವ ಸಾಧ್ಯತೆ ಗಳು ಇರುತ್ತವೆ ಎಂದು ಡಿಸಿ, ಯುವಜನರಿಗೆ ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿಯುವಂತೆ ಅರಿವು ಮೂಡಿ ಸುವುದು ಪೋಷಕರು, ಶಾಲಾ-ಕಾಲೇಜಿನ ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರದ ಪ್ರತಿನಿಧಿಗಳಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಅಂಚೆ ಮೂಲಕ ಸಾಗಾಟದ ಶಂಕೆ: ಮಾದಕ ದ್ರವ್ಯ ವಸ್ತುಗಳು, ಮೆಡಿಸಿನ್ ಹಾಗೂ ಚಿಕ್ಕ ಪಾರ್ಸೆಲ್‌ನಲ್ಲಿ ಅಂಚೆ ಮೂಲಕ ಸಾಗಾಟವಾಗುತ್ತಿದ್ದು, ಅಂಚೆ ಇಲಾಖೆಯವರು ಸಹ ಈ ಬಗ್ಗೆ ಅನುಮಾನ ಬಂದಂತಹ ಪಾರ್ಸೆಲ್‌ಗಳನ್ನು ವಾರಸುದಾರರ ಸಮ್ಮುಖದಲ್ಲಿ ತೆರೆದು ನೋಡಿ, ವಾರಸುದಾರರಿಗೆ ಹಸ್ತಾಂತರಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.

ತಂಬಾಕು ಉತ್ಪನ್ನ ಮಾರಾಟ ನಿಷೇದ: ಶಾಲಾ-ಕಾಲೇಜುಗಳ ಆವರಣದ 100ಮೀ. ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ, ಆ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಗಳು ಬರುತ್ತಿವೆ. ಮಾರಾಟ ಮಾಡುತ್ತಿರುವ ಅಂಗಡಿಗಳ ಪರವಾನಿಗೆಯನ್ನು ರದ್ದು ಮಾಡಲು ಸ್ಥಳೀಯ ಸಂಸ್ಥೆ ಗಳಿಗೆ ಕೂಡಲೇ ಶಿಫಾರಸು ಮಾಡಿ, ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ಹಾಗೂ ಮುಖಂಡರ ಜೊತೆ ಕಾರ್ಮಿಕ ಇಲಾಖಾ ಅಧಿಕಾರಿ ಗಳು ಸಭೆ ಮತ್ತು ಕಾರ್ಯಾಗಾರಗಳನ್ನು ನಡೆಸಿ ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸ ಬೇಕು ಎಂದರು.

ಶಾಲಾ-ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಅನಧಿಕೃತವಾಗಿ ಆಗ್ಗಿಂದಾಗೆ ಗೈರು ಆಗುವುದು ಕಂಡು ಬಂದಲ್ಲಿ ಅವರ ಪೋಷಕರುಗಳಿಗೆ ತಿಳಿಸುವ ಜೊತೆಗೆ ಶಾಲಾ ಶಿಕ್ಷಕರು ಅವರ ಚಲನವಲನಗಳ ಬಗ್ಗೆ ಗಂಭೀರವಾಗಿ ಪರಿಶೀಲಿಸ ಬೇಕು. ಒಂದೊಮ್ಮೆ ವ್ಯಸನಕ್ಕೆ ಗುರಿಯಾಗಿದ್ದಲ್ಲಿ ಆಪ್ತ ಸಮಾಲೋಚನೆಯನ್ನು ಮಾಡುವುದರೊಂದಿಗೆ ಅವರ ಮನ ಪರಿವರ್ತನೆಗೆ ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಢಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಸರ್ಜನ್ ಡಾ. ಅಶೋಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿ.ಶಂಕರ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಅರಣ್ಯದ ಅಂಚಿನಲ್ಲಿರುವ ಕೆಲವು ತೋಟಗಳಲ್ಲಿ, ಕೃಷಿ ಭೂಮಿಗಳಲ್ಲಿ ಅಲ್ಲದೇ ಕಟ್ಟಡದ ಮೇಲ್ಛಾವಣಿಯ ಮೇಲೆ ಗಾಂಜಾ ಬೆಳೆಯಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾ ಖೆಯ ಅಧಿಕಾರಿಗಳು ನಿಗಾ ವಹಿಸಿ, ಅನುಮಾನ ಬಂದ ಕಡೆ ಆಗಾಗ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು. -ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ

ಮಣಿಪಾಲದಲ್ಲಿ 90 ಮಂದಿ ಮಾದಕ ವ್ಯಸನಿಗಳ ಪತ್ತೆ

ಜಿಲ್ಲೆಯಲ್ಲಿ ಯುವಜನತೆಯನ್ನು ಮಾದಕ ವಸ್ತುಗಳ ಸೇವನೆಯ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಒಟ್ಟು 97 ಮಂದಿ ಮಾದಕ ವ್ಯಸನ ಮಾಡಿರುವುದು ಕಂಡು ಬಂದಿದೆ. ಇವರಲ್ಲಿ 90 ಮಂದಿ ಮಣಿಪಾಲ ಭಾಗದವರೇ ಆಗಿದ್ದಾರೆ. ಉಳಿದ 7 ಮಂದಿ ಜಿಲ್ಲೆಯ ಇತರೆ ಭಾಗದವರಾಗಿದ್ದಾರೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಇಂತವರ ಮೇಲೆ ನಿರ್ದಾಕ್ಷಿಣ್ಯವಾದ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಲ್ಲಿ ಅಂಥವರನ್ನು ಶಿಕ್ಷಣ ಸಂಸ್ಥೆಯಿಂದ ಹೊರಗಿಡುವುದು ಸೂಕ್ತ ಎಂದರು.

ಇದೀಗ ಉತ್ತರದಿಂದ ಕೂಲಿ ಕಾರ್ಮಿಕರು ಜಿಲ್ಲೆಗೆ ಹೆಚ್ಚಾಗಿ ರೈಲುಗಳ ಮೂಲಕ ಆಗಮಿಸುತಿದ್ದು, ರೈಲ್ವೆ ಪೊಲೀಸ್ ಅಧಿಕಾರಿಗಳು ರೈಲಿನಲ್ಲಿ ಮಾದಕ ವಸ್ತುಗಳನ್ನು ತರುತ್ತಿರುವ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅಂತಹವರ ಬ್ಯಾಗ್‌ಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂದವರು ಸೂಚನೆ ನೀಡಿದರು.




Full View

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News