ಉಡುಪಿ: ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಮೌನ ಪ್ರತಿಭಟನೆ
ಉಡುಪಿ, ಜು.12: ರಾಹುಲ್ ಗಾಂಧಿಯನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಕೇಂದ್ರ ಬಿಜೆಪಿ ಸರಕಾರದ ಸೇಡಿನ ಹುನ್ನಾರವನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಬುಧವಾರ ಉಡುಪಿ ಅಜ್ಜರಕಾಡು ಭುಜಂಗ ಪಾರ್ಕಿನ ಗಾಂಧಿ ಕಟ್ಟೆಯ ಎದುರು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುವ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಪ್ಪು ಬಟ್ಟೆ ಹಾಗೂ ಕಪ್ಪು ಪಟ್ಟಿ ಧರಿಸಿ ಭಾಗವಹಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಮೋದಿ ಉಪನಾಮದ ಬಗ್ಗೆ ಮಾತನಾಡಿದ್ದಾರೆ ಎಂಬ ಕ್ಷುಲ್ಲಕ ವಿಚಾರ ಇಟ್ಟುಕೊಂಡು ಕೇಂದ್ರ ಸರಕಾರ ತನ್ನ ಕುಟೀಲ ರಾಜಕಾರಣದ ಮೂಲಕ ಅವರನ್ನು ತೇಜೋವಧೆ ಮಾಡುತ್ತಿದೆ. ದೇಶದ ಜನರ ಮಧ್ಯೆ ದ್ವೇಷ ಭಾವನೆ ದೂರ ಮಾಡಿ ಎಲ್ಲರನ್ನು ಒಗ್ಗೂಡಿಸಿ ಶಾಂತಿ ನೆಲೆಸುವಂತೆ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದು, ಇದರಿಂದ ಬೆದರಿದ ಬಿಜೆಪಿ ಅವರನ್ನು ಮಟ್ಟಹಾಕಲು ನೋಡುತ್ತಿದೆ ಎಂದು ಆಪಾದಿಸಿದರು.
ಅದಾನಿ ಮತ್ತು ಮೋದಿ ಸಂಬಂಧ ಬಯಲಿಗೆ ಎಳೆದ ಕೇವಲ ಏಕೈಕ ಕಾರಣಕ್ಕಾಗಿ ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವವನ್ನು ರದ್ದು ಮಾಡಿ ಕಿರುಕುಳ ನೀಡಲಾಗುತ್ತಿದೆ. ಇದರ ವಿರುದ್ಧ ಇವತ್ತು ನಾವು ಮೌನ ಪ್ರತಿಭಟನೆ ಮಾಡುತ್ತಿದ್ದು, ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ರಮೇಶ್ ಕಾಂಚನ್, ವರೋನಿಕಾ ಕರ್ನೆಲಿಯೋ, ದೀಪಕ್ ಕೋಟ್ಯಾನ್, ಇಸ್ಮಾಯೀಲ್ ಆತ್ರಾಡಿ, ಹರೀಶ್ ಶೆಟ್ಟಿ ಪಾಂಗಾಳ, ವಿಶ್ವಾಸ್ ಅಮೀನ್, ಸೌರಭ್ ಬಲ್ಲಾಳ್, ಹರೀಶ್ ಕಿಣಿ, ಭಾಸ್ಕರ ರಾವ್ ಕಿದಿಯೂರು, ಕುಶಲ್ ಶೆಟ್ಟಿ, ಡಾ.ಸುನೀತಾ ಶೆಟ್ಟಿ, ಸರಳಾ ಕಾಂಚನ್, ಪ್ರಶಾಂತ್ ಜತ್ತನ್ನ, ಶಬ್ಬೀರ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.