ಒಂದೇ ದಿನ ಸೇವೆಯಿಂದ ನಿವೃತ್ತಿಯಾದ ದಂಪತಿಗೆ ಸನ್ಮಾನ
ಉಡುಪಿ, ಆ.7: ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ದಂಪತಿ ಅಪರೂಪದಲ್ಲಿ ಅಪರೂಪ ಎಂಬಂತೆ ಜು.31ರಂದು ಒಂದೇ ದಿನ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
ಕರ್ನಾಟಕ ಕರಾವಳಿ ಕಾವಲು ಪೊಲೀಸ್ ಮಲ್ಪೆ, ಉಡುಪಿಯ ಕಂಟ್ರೋಲ್ ರೂಂ ಉಪನಿರೀಕ್ಷಕ ಸೇರಿದಂತೆ ಇಲಾಖೆ ಯಲ್ಲಿ 31 ವರ್ಷ ಆರು ತಿಂಗಳ ಕಾಲ ಸೇವೆ ಸಲ್ಲಿಸಿದ್ದ ಬಿ.ಮನಮೋಹನ ರಾವ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಯವರ ಕಚೇರಿ ಕಾರ್ಕಳ ವಲಯ, ಕಾರ್ಕಳದಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಇಲಾಖೆಯಲ್ಲಿ ಸುಮಾರು 33 ವರ್ಷ 6 ತಿಂಗಳು ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಶೋಭಾ ಎನ್. ಅವರನ್ನು ಕರಾವಳಿ ಕಾವಲು ಪೊಲೀಸ್ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ದಂಪತಿಯನ್ನು ಗೌರವಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಸಿ.ಎಸ್.ಪಿ ಕೇಂದ್ರ ಸ್ಥಾನ ಪೊಲೀಸ್ ಉಪಾಧೀಕ್ಷಕ ಟಿ.ಎಸ್.ಸುಲ್ಪಿ, ಪೊಲೀಸ್ ನಿರೀಕ್ಷಕ ಸೋಮಪ್ಪನಾಯ್ಕ್, ಜಿ.ಎಚ್.ಎ. ಮಂಜುಳಾ ಗೌಡ, ಸ್ವಯಂ ನಿವೃತ್ತಿ ಹೊಂದಿದ ಮಂಜುಳಾ, ಕಾರವಾರ ಸಿ.ಎಸ್.ಪಿ ಠಾಣೆಯ ನಿವೃತ್ತ ಎಸ್ಸೈ ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.
ಕಚೇರಿ ಅಧೀಕ್ಷಕಿ ಸುಮಾ, ಕಂಟ್ರೋಲ್ ರೂಂ ಎಚ್.ಸಿ. ಸಂತೋಷ್, ಮಹಿಳಾ ಎಸ್ಸೈ ಸುಜಾತಾ ಸಾಲ್ಯಾನ್, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯ ಎಫ್.ಡಿ.ಎ ವಿದ್ಯಾ ಶುಭಕೋರಿದರು. ದಂಪತಿ ಪುತ್ರಿ ಡಾ.ಸುಮಾ ಕೃತಜ್ಞತೆ ಸಲ್ಲಿಸಿ ದರು. ವಾಹನ ವಿಭಾಗದ ಎಎಸ್ಸೈ ಭಾಸ್ಕರ ಶೆಟ್ಟಿಗಾರ್ ಸ್ವಾಗತಿಸಿದರು. ಗಣೇಶ್ ಸಂಕ್ಷಿಪ್ತ ಪರಿಚಯ ವಾಚಿಸಿದರು. ಕಂಟ್ರೋಲ್ ನಿರೀಕ್ಷಕ ಕರುಣಾ ಸಾಗರ್ ವಂದಿಸಿದರು. ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ಕಾರ್ಯಕ್ರಮ ನಿರೂಪಿಸಿದರು.