ಉಡುಪಿಯಲ್ಲಿ ಖಝಾಕಿಸ್ಥಾನದ ಮಹಿಳೆಯ ಅಂತ್ಯಸಂಸ್ಕಾರ

Update: 2024-06-11 06:23 GMT

ಉಡುಪಿ, ಜೂ.11: ಸುಮಾರು 35 ದಿನಗಳ ಹಿಂದೆ ಮೃತಪಟ್ಟ ರಷ್ಯಾದ ಖಝಾಕಿಸ್ಥಾನದ ಮಹಿಳೆ ಸುಲ್ತಾನೆಟ್ ಬೆಕ್ಟೆನೋವಾ(51) ಎಂಬವರ ಅಂತ್ಯ ಸಂಸ್ಕಾರವು ಉನ್ನತ ಮಟ್ಟದ ಕಾನೂನು ಪ್ರಕ್ರಿಯೆಗಳ ಬಳಿಕ ಉಡುಪಿಯ ಸಿ.ಎಸ್.ಐ ಚರ್ಚಿನ ದಫನ ಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಸೋಮವಾರ ನಡೆಯಿತು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯ ಮಾರ್ಗದರ್ಶನ ಹಾಗೂ ನಗರ ಪೋಲಿಸ್ ಠಾಣೆಯ ಎಸ್ಸೈ ಪುನೀತ್ ಕುಮಾರ್, ತನಿಖಾ ಸಹಾಯಕಿ ಸುಷ್ಮಾ, ಹಾಗೂ ಠಾಣೆಯ ಸಿಬ್ಬಂದಿಕಾನೂನು ಪ್ರಕ್ರಿಯೆ ನಡೆಸಿದ್ದು, ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ಚರ್ಚಿನ ಸಭಾಪಾಲಕ ರೆ.ಜೋಸ್ ಬೆನೆಡಿಕ್ಟ್ ಅಮ್ಮನ್ನ ನೇರವೆರಿಸಿದರು.

ಈ ಸಂದರ್ಭದಲ್ಲಿ ವಿಶ್ರಾಂತ ಸಭಾಪಾಲಕ ರೆ.ಐಸನ್ ಸುಕುಮಾರ ಪಾಲನ್ನ, ಪಾಸ್ಟರ್ ಅಬ್ರಹಾಂ, ಪಾಸ್ಟರ್ ಜೋಯ್ಸ್ ಕುರಿಯ ಕೋನ್, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಉಡುಪಿ ಚರ್ಚಿನ ಸದಸ್ಯರು ಹಾಜರಿದ್ದರು.

ಉಡುಪಿಯ ನಿವಾಸಿ ದಿ.ಕುಲಿನ್ ಮಹೇಂದ್ರ ಷಾ ಎಂಬವರೊಂದಿಗೆ ರಷ್ಯಾದ ಖಝಾಕಿಸ್ಥಾನದ ಪ್ರಜೆ ಸುಲ್ತಾನೆಟ್ ಬೆಕ್ಟೆನೋವಾ 2009ರಲ್ಲಿ ಮಣಿಪಾಲದ ಸಿಎನ್ಐ ಚರ್ಚಿನಲ್ಲಿ ವಿವಾಹವಾಗಿದ್ದರು. ಉಡುಪಿಯ ಪುತ್ತೂರಿನಲ್ಲಿ ಬಾಡಿಗೆ ಮನೆಮಾಡಿಕೊಂಡು 13 ವರ್ಷದ ಮಗಳು ರೆಬೆಕಾ ಕುಲಿನ್ ಷಾರೊಂದಿಗೆ ವಾಸವಾಗಿದ್ದರು. ಕಳೆದ ಮೇ 7ರಂದು ಸುಲ್ತಾನೆಟ್ ಬೆಕ್ಟೆನೋವಾ ಬಾತ್ ರೂಮ್ನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು. ಮೃತದೇಹವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು.

ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ಈ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ವಿದೇಶಿ ಮಹಿಳೆಯ ವಾರಸುದಾರರ ಪತ್ತೆ ಕಾರ್ಯವನ್ನು ನಗರ ಠಾಣೆಯ ಪೊಲೀಸರು ಭಾರತದ ರಾಯಭಾರಿ ಕಚೇರಿಯ ಸಹಕಾರದಿಂದ ನಡೆಸಿದರು. ವಿಷಯ ತಿಳಿದ ಮೃತರ ಮಗನಿಗೆ ತಾಯಿಯ ಮೃತದೇಹ ಪಡೆಯಲು ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರವನ್ನು ಉಡುಪಿ ಯಲ್ಲಿಯೇ ನಡೆಸಲು ರಾಯಭಾರಿ ಕಚೇರಿಯ ಮೂಲಕ ಮಣಿಪಾಲದ ಸಿ.ಎಸ್.ಐ. ಚರ್ಚಿಗೆ ಮನವಿಯ ಸಂದೇಶವನ್ನು ರವಾನಿಸಿದ್ದರು. ಅದರಂತೆ ಉಡುಪಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News