ಬಿಜೆಪಿ ಸೋಲಿಸಿ ಸಂವಿಧಾನ ಉಳಿಸಲು ದಸಂಸ ಮಹಾ ಒಕ್ಕೂಟ ಕರೆ

Update: 2024-04-23 11:46 GMT

ಉಡುಪಿ, ಎ.23: ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ವಿರೋಧಿಯಾಗಿರುವ ಬಿಜೆಪಿ, ಈ ದೇಶದ ಮೀಸಲಾತಿ ವ್ಯವಸ್ಥೆಯನ್ನು ಬುಡ ಮೇಲುಗೊಳಿಸಿದೆ. ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಯಾಗಿ, ಗುಪ್ತ ಕಾರ್ಯಸೂಚಿಯನ್ನು ಹೊಂದಿರುವ ಬಿಜೆಪಿಯನ್ನು ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಸೋಲಿಸಬೇಕಾಗಿದೆ. ಈ ಚುನಾವಣೆ ದಲಿತರು, ಶೋಷಿತ ಸಮುದಾಯ, ಬಡವರ ಹಾಗೂ ಮಹಿಳೆಯರ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಸಮಾನ ಮನಸ್ಥ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟದ ಉಡುಪಿ ಜಿಲ್ಲಾ ಸಂಚಾಲಕ ಮಂಜುನಾಥ್ ಗಿಳಿಯಾರು ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಮಹಾ ಒಕ್ಕೂಟದ ವತಿಯಿಂದ ಮನೆ ಮನಗಳಲ್ಲಿ ಅಂಬೇಡ್ಕರ್ ಅಭಿಯಾನವನ್ನು ಎ.21ರಿಂದ ಆರಂಭಿಸಲಾಗಿದೆ. ಅದರಂತೆ ದಲಿತರ ಕಾಲನಿಗಳಿಗೆ ಭೇಟಿ ನೀಡಿ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

2014ರಿಂದ ಕಳೆದ 10ವರ್ಷಗಳಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಹಲವು ಜನವಿರೋಧಿ ನೀತಿಗಳನ್ನು ಜಾರಿಗೆ ತಂದಿದೆ. ಕಳೆದ 10ವರ್ಷಗಳಿಂದ ದಲಿತರ ಕಲ್ಯಾಣಕ್ಕಾಗಿ ಒಂದೇ ಒಂದು ಯೋಜನೆ ರೂಪಿಸಿಲ್ಲ. ಈ ನೀತಿಗಳು ಸಾಮಾಜಿಕ ನ್ಯಾಯಕ್ಕೆ ಕವಡೆ ಕಾಸಿನ ಬೆಲೆ ನೀಡದೆ ತೀಲಾಂಜಲಿ ಇಡುತ್ತಿವೆ. ಸಂವಿಧಾನವನ್ನು ಒಪ್ಪದ ಇವರು ಪದೇ ಪದೇ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುತ್ತಿರುವುದು ಆತಂಕಕಾರಿಯಾಗಿದೆ. ಇವರ ಅವಧಿಯಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆದಿವೆ ಎಂದು ಅವರು ದೂರಿದರು.

ಅದೇ ರೀತಿ ಸರಕಾರಿ ಸೌಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಪರೋಕ್ಷವಾಗಿ ಮೀಸಲಾತಿಯನ್ನು ಕಿತ್ತು ಹಾಕುತ್ತಿದೆ. ಇದು ಶೋಷಿತ ಸಮುದಾಯಕ್ಕೆ ಬಹಳ ದೊಡ್ಡ ಆಘಾತವಾಗಿದೆ. ಆ ಮೂಲಕ ದಲಿತ ಸಮುದಾಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾಗಿದ್ದ ಲಕ್ಷಾಂತರ ಸರಕಾರಿ ಉದ್ಯೋಗವನ್ನು ಕಿತ್ತುಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿ ಕೊಳ್ಳದ ಬಿಜೆಪಿ, ಮೋದಿಯನ್ನು ಸರ್ವಾಧಿಕಾರಿಯನ್ನಾಗಿ ಬಿಂಬಿಸುತ್ತಿದೆ ಎಂದು ಅವರು ಆರೋಪಿಸಿದರು.

ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿದರೆ ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಾಯ ಒದಗುವುದು ಶತಸಿದ್ಧ. ಆದ್ದರಿಂದ ಪ್ರಜ್ಞಾವಂತ ಮತದಾರರು ಈ ಬಾರಿ ಸಂವಿಧಾನ ವಿರೋಧಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಬಾರದು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಹಾ ಒಕ್ಕೂಟದ ಪ್ರಮುಖರಾದ ವಾಸುದೇವ ಮುದೂರು, ಅಣ್ಣಪ್ಪ ನಕ್ರೆ ಕಾರ್ಕಳ, ವಿಶ್ವನಾಥ ಬೆಳ್ಳಂಪಳ್ಳಿ, ಶ್ಯಾಂ ಸುಂದರ್ ತೆಕ್ಕಟ್ಟೆ, ರಾಜು ಬೆಟ್ಟಿನಮನೆ, ಕುಮಾರ್ ಕೋಟ, ಸುರೇಶ್ ಹಕ್ಲಾಡಿ, ಶಿವಾನಂದ ಮೂಡಬೆಟ್ಟು, ಮೋಹನ್, ಚಂದ್ರಶೇಖರ್ ಉಡುಪಿ, ಕೀರ್ತಿ ಕುಮಾರ್, ಸಾವಿತ್ರಿ ಕಾರ್ಕಳ, ಸುಮಿತ್ರಾ ಕಾರ್ಕಳ ಉಪಸ್ಥಿತರಿದ್ದರು.

‘ಈ ದೇಶದ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ತಪ್ಪಿತಸ್ಥರಂತೆ ಬಿಂಬಿಸ ಲಾಗುತ್ತಿದೆ ಮತ್ತು ಅನುಮಾನದ ದೃಷ್ಠಿಯಲ್ಲಿ ನೋಡಲಾಗುತ್ತಿದೆ. ಆದುದ ರಿಂದ ಎಲ್ಲ ಧರ್ಮ, ಜಾತಿಯವರು ಸೌಹಾರ್ದತೆ ಹಾಗೂ ಶಾಂತಿಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅಭ್ಯರ್ಥಿಗೆ ಈ ಬಾರಿಯ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಬೇಕಾಗಿದೆ’

-ಮಂಜುನಾಥ್ ಗಿಳಿಯಾರು, ಸಂಚಾಲಕರು, ಮಹಾ ಒಕ್ಕೂಟ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News