ಬರ ಪರಿಹಾರ, ತೆರಿಗೆ ಪಾಲು ನೀಡದ ದಪ್ಪ ಚರ್ಮದವರಿಗೆ ಸೂಕ್ಷ್ಮತೆ ಇಲ್ಲ: ಕೆ.ಜೆ.ಜಾರ್ಜ್
ಉಡುಪಿ, ಎ.19: ಕೇಂದ್ರಕ್ಕೆ ತೆರಿಗೆ ಪಾವತಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಇದೆ. ಈ ವಿಚಾರದಲ್ಲಿಯೂ ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಈ ರೀತಿ ಅನ್ಯಾಯ ಮಾಡಿಯೂ ಕೂಡ ಅವರು ಕರ್ನಾಟಕಕ್ಕೆ ಬಂದು ಧೈರ್ಯದಿಂದ ಮತ ಕೇಳುತ್ತಿದ್ದಾರೆ. ಅವರು ದಪ್ಪ ಚರ್ಮದವರು. ಅವರಿಗೆ ಯಾವುದೇ ಸೂಕ್ಷ್ಮತೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಟೀಕಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಕರ್ನಾಟಕ ತೀವ್ರ ಬರಗಾಲದಿಂದ ತತ್ತರಿಸಿ ಹೋಗಿದೆ. ಬರಗಾಲದಿಂದ ಆಗಿರುವ ನಷ್ಟದ ವಿವರವನ್ನು ರಾಜ್ಯ ಸರಕಾರವು ಕಳೆದ ಆಗಸ್ಟ್ ತಿಂಗಳಲ್ಲಿಯೇ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ ಡಿಸೆಂಬರ್ನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು ಪರ ಪರಿಶೀಲನೆ ನಡೆಸಿದೆ. ಆದರೆ ಕೇಂದ್ರ ಈವರೆಗೆ ರಾಜ್ಯಕ್ಕೆ ಬರ ಸಂಬಂಧ ಒಂದು ರೂಪಾಯಿ ಕೂಡ ಪರಿಹಾರ ಕೊಡಲಿಲ್ಲ. ಇದು ಕೇಂದ್ರ ಸರಕಾರ ರಾಜ್ಯಕ್ಕೆ ಮಾಡಿರುವ ದೊಡ್ಡ ಅನ್ಯಾಯವಾಗಿದೆ ಎಂದರು.
ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಕೇವಲ ಅಧಿಕಾರಕ್ಕಾಗಿ ಕೇವಲ ಸುಳ್ಳು ಭರವಸೆ, ಧರ್ಮ ಜಾತಿಗಳನ್ನು ಎತ್ತಿ ಕಟ್ಟುತ್ತಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಾರೆಯೇ ಹೊರತು ಇವರಲ್ಲಿ ಕಳೆದ 10ವರ್ಷಗಳ ಅಧಿಕಾರದಲ್ಲಿ ಮಾಡಿದ ಸಾಧನೆ ಏನು ಇಲ್ಲ. ಇವರು ತಮ್ಮ ಪ್ರಣಾಳಿಕೆಯಲ್ಲಿದ್ದ 600 ಭರವಸೆಯಲ್ಲಿ ಕೇವಲ 50-60 ಮಾತ್ರ ಅನುಷ್ಠಾನ ಮಾಡಿದ್ದಾರೆ ಎಂದು ಅವರು ದೂರಿದರು.
28ರಲ್ಲಿ 28 ಗೆಲ್ಲಲು ಪ್ರಯತ್ನ
ರಾಜೀವ ಗಾಂಧಿ ಕಾಲದಲ್ಲಿ ನಾವು ಕೂಡ ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಗೆದ್ದಿದ್ದೇವೆ. ನಾವು ಈ ಬಾರಿ 28ರಲ್ಲಿ 28 ಗೆಲ್ಲಬೇಕೆಂದೇ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ನಾವು ಪೊಲೀಸ್ ಇಲಾಖೆಗೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಕೆ.ಜೆ.ಜಾರ್ಜ್ ಹೇಳಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರು ಜೊತೆಯಲ್ಲಿಯೇ ಇದ್ದು ಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆ ಬೇಡವೇ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್, ಶಾಸಕರು ತೀರ್ಮಾನ ಮಾಡುತ್ತಾರೆಯೇ ಹೊರತು ಯಾರೋ ಒಬ್ಬರೇ ಹೇಳಿದಾಗೆ ಆಗಲ್ಲ. ಕೆಲವರು ಮುಖಪುಟದಲ್ಲಿ ಸುದ್ದಿ ಬರಲು ಈ ರೀತಿಯ ಹೇಳಿಕೆ ಕೊಡುತ್ತಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಸಾದ್ ರಾಜ್ ಕಾಂಚನ್, ಸುಧೀರ್ ಕುಮಾರ್ ಮುರೊಳ್ಳಿ, ನವೀನ್ ಚಂದ್ರ ಶೆಟ್ಟಿ, ಕೆ.ಕೆ.ಮಂಜುನಾಥ್ ಕುಮಾರ್, ಶಬ್ಬೀರ್ ಉಡುಪಿ, ಮಹಾಬಲ ಕುಂದರ್, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.
-----------------------------------------
‘ಇತ್ತೀಚೆಗೆ ಮೈಸೂರಿನಲ್ಲಿ ಪ್ರಧಾನಿ ಮೋದಿ ತನ್ನ ಪಕ್ಕದಲ್ಲೇ ಯಡಿಯೂರಪ್ಪರನ್ನು ಕುಳ್ಳಿರಿಸಿಕೊಂಡು ನೆಹರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಇವರೊಂದಿಗೆ ಮೈತ್ರಿ ಮಾಡಿರುವ ದೇವೇಗೌಡರ ಇಡೀ ಕುಟುಂಬವೇ ಅವರ ಪಕ್ಷದಲ್ಲಿ ತುಂಬಿದೆ ಎಂದ ಅವರು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಒಬ್ಬ ಒಬ್ಬನೇ ವ್ಯಕ್ತಿ ಬಿಜೆಪಿಯಲ್ಲಿ ಇಲ್ಲ. ಯಾರು ಹುಡುಕಿದರೂ ಸಿಗಲ್ಲ. ಬಿಜೆಪಿಯವರು ವಲ್ಲಭಬಾಯಿ ಪಾಟೇಲ್ ಅವರನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ’
-ಕೆ.ಜೆ.ಜಾರ್ಜ್, ಸಚಿವರು