ಆಹಾರ ಸಂಸ್ಕರಣೆ ಉದ್ಯಮಕ್ಕೆ ಒತ್ತು; 800 ಕೋಟಿ ರೂ. ಮೀಸಲು: ಉಡುಪಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ

Update: 2023-12-09 11:52 GMT

ಉಡುಪಿ, ಡಿ.9: ಆಹಾರ ಸಂಸ್ಕರಣೆ ಉದ್ಯಮ (ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿ) ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಕಲ್ಪನೆ. ರೈತರ ಹಾಗೂ ಮೀನುಗಾರರ ಬದುಕನ್ನು ಹಸನು ಮಾಡಬೇಕೆಂಬ ಉದ್ದೇಶ ಇದರಲ್ಲಿದೆ. ರೈತರ ಆದಾಯ ಇಮ್ಮಡಿಯಾಗಬೇಕೆಂಬುದು ಸಹ ಪ್ರಧಾನಿ ಅವರ ಆಶಯ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣದೊಂದಿಗೆ ಹೊಸದಾಗಿ ಆಹಾರ ಸಂಸ್ಕರಣ ಉದ್ಯಮಗಳ ಇಲಾಖೆಯ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಇಂದು ಕೆಮ್ಮಣ್ಣು ಮತ್ತು ಕಲ್ಯಾಣಪುರ ಗ್ರಾಪಂಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ ಕೇಂದ್ರ ಸಚಿವೆ, ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ರೈತರ ಆದಾಯ ದ್ವಿಗುಣ ಆಗಬೇಕಾದರೆ ಕೃಷಿ ಉತ್ಪನ್ನ ಮತ್ತು ಮೀನುಗಾರಿಕಾ ಉತ್ಪನ್ನಗಳು ಸಂಸ್ಕರಣೆಗೊಂಡು ಹೊರದೇಶಗಳಿಗೆ ರಫ್ತುಗೊಳ್ಳ ಬೇಕಾಗುತ್ತದೆ. ನಮ್ಮ ದೇಶದ ಒಳಗೆ ಉಳಿದರೆ ಅಷ್ಟೊಂದು ಬೆಲೆ ಸಿಗುವುದಿಲ್ಲ. ಸಂಸ್ಕರಣೆ ಮಾಡಿ, ಗುಣಮಟ್ಟವನ್ನು ಹೆಚ್ಚಿಸಿ ತಿನ್ನುವ ಕೈಗಳಿಗೆ ಕೊಡಬೇಕು ಎಂಬುದು ಅವರ ಅಪೇಕ್ಷೆ ಎಂದು ಶೋಭಾ ನುಡಿದರು.

ಫುಡ್ ಪ್ರೋಸೆಸಿಂಗ್ ಇಂಡಸ್ಟ್ರಿ ಖಾತೆಯನ್ನು ಸೃಷ್ಟಿಸಿ ಅದಕ್ಕೆ ಕೇಂದ್ರ ಸರಕಾರ ಒತ್ತು ಕೊಡುತ್ತಿದೆ. ಪ್ರಾರಂಭದಲ್ಲಿ ಸರಕಾರ ಈ ಇಲಾಖೆಗೆ 800 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಹೊಸದಾಗಿ ಆಹಾರ ಸಂಸ್ಕರಣ ಉದ್ಯಮ ವನ್ನು ಆರಂಭಿಸುವವರಿಗೆ ಈ ಹಣವನ್ನು ಮೀಸಲು ಇಡಲಾಗಿದೆ ಎಂದವರು ವಿವರಿಸಿದರು.

ಸಂಶೋಧನಾ ಕೇಂದ್ರ ಸ್ಥಾಪನೆ: ಇದಕ್ಕಾಗಿ ಹೊಸ ಸಂಶೋಧನಾ ಕೇಂದ್ರವನ್ನು ಕೂಡಾ ದೇಶದಲ್ಲಿ ಸ್ಥಾಪನೆ ಮಾಡಲಾ ಗಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಫುಡ್ ಪಾರ್ಕ್‌ಗಳನ್ನು ಆರಂಭ ಮಾಡಲಾಗಿದೆ. ಕೃಷಿ ಇಲಾಖೆ ಮತ್ತು ಫುಡ್ ಪ್ರೋಸೆಸಿಂಗ್ ಇಂಡಸ್ಟ್ರಿ ಒಂದಾಗಬೇಕೆಂಬುದು ನನ್ನ ಅನಿಸಿಕೆಯೂ ಆಗಿತ್ತು. ರೈತರ ಆದಾಯ ದ್ವಿಗುಣ ಆಗಬೇಕಾದರೆ ಎರಡು ಇಲಾಖೆಗಳು ಜೊತೆಯಾಗಿ ಸಾಗಬೇಕು ಎಂದು ಶೋಭಾ ಹೇಳಿದರು.

ನಾವು ಚರ್ಚೆ ಮಾಡಿದ ವಿಚಾರ ಇಂದು ಸಾಕಾರಗೊಳ್ಳುವ ದಿನ ಬಂದಿದೆ. ನಮಗೆ ತೀರಾ ಕಡಿಮೆ ಅವಧಿ ಸಿಕ್ಕಿದೆ. ಎರಡು ತಿಂಗಳಲ್ಲಿ ಕೆಲವಾರು ಕೆಲಸ- ಚರ್ಚೆಗಳನ್ನು ನಡೆಸಬೇಕಾಗಿದೆ. ಆನಂತರ ಚುನಾವಣೆ ಬರುತ್ತದೆ. ಹೀಗಾಗಿ ಈ ಇಲಾಖೆಯ ಬಗ್ಗೆ ನಾನು ಹೆಚ್ಚಿನ ಒತ್ತು ಕೊಡುತ್ತೇನೆ. ಎಲ್ಲೆಲ್ಲಿ ಆಹಾರ ಸಂಸ್ಕರಣೆ ಮಾಡಲು ಸಾಧ್ಯವೋ, ರಫ್ತು ಮಾಡಲು ಸಾಧ್ಯವೋ ಚರ್ಚಿಸುತ್ತೇವೆ ಎಂದರು.

ಕೊರೋನಾ ಕಾಲದಲ್ಲಿ ಯುವಕನೊಬ್ಬ ಅಮೆರಿಕದಿಂದ ಬಂದು ಮಾವಿನ ಹಣ್ಣನ್ನು ಸಂಸ್ಕರಣೆ ಮಾಡಿ 40 ಕೋಟಿ ರೂ. ಸಂಪಾದನೆ ಮಾಡಿದ ಉದಾಹರಣೆ ನಮ್ಮ ಕಣ್ಣ ಮುಂದೆ ಇದೆ. ಇದು ನಮಗೆ ಸ್ಪೂರ್ತಿಯಾಗಿರುತ್ತದೆ. ಪ್ರಧಾನಿ ಅವರ ಅಪೇಕ್ಷೆ ಈಡೇರಿಸಲು ಒತ್ತು ಕೊಟ್ಟು ಕೆಲಸ ಮಾಡುತ್ತೇನೆ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News