‘ನೈತಿಕತೆಯೇ ಸ್ವಾತಂತ್ರ್ಯ’ ಅಭಿಯಾನ ಆರಂಭ

Update: 2024-09-02 11:52 GMT

ಉಡುಪಿ: ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರಸಕ್ತ ಸ್ಥಿತಿಯಲ್ಲಿ ಸುಧಾರಣೆ ತರಲು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ದೇಶದಾದ್ಯಂತ ಸೆ.1ರಿಂದ 30ರವರೆಗೆ ನೈತಿಕತೆಯೇ ಸ್ವಾತಂತ್ರ್ಯ ಎಂಬ ಧೈಯ ವಾಕ್ಯದಡಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಹಿಳಾ ವಿಭಾಗದ ಉಡುಪಿ ಜಿಲ್ಲಾ ಸಂಚಾಲಕಿ ಕುಲ್ಸೂಮ್ ಅಬೂಬಕರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದ ಪ್ರಯುಕ್ತ ’ಧರ್ಮದಲ್ಲಿ ನೈತಿಕತೆಯ ಕಲ್ಪನೆ’ ಶೀರ್ಷಿಕೆಯಡಿ ಅಂತ ರ್ಧರ್ಮೀಯ ವಿಚಾರಗೋಷ್ಠಿ, ಮಹಿಳಾ ಸಮಾವೇಶ, ಶಾಲಾ-ಕಾಲೇಜು ಗಳಲ್ಲಿ ಉಪ ನ್ಯಾಸ, ವೈಯಕ್ತಿಕ ಭೇಟಿ, ಡಿಸಿ, ಎಸ್ಪಿ ಭೇಟಿ, ಸಮಾಜದ ಇತರ ಗಣ್ಯ ವ್ಯಕ್ತಿಗಳ ಸಂದರ್ಶನ ನಡೆಸಲಾಗುವುದು. ಅದರ ಪ್ರಮುಖ ಅಂಶಗಳನ್ನು ಆಯ್ದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲಾಗುವುದು. ಲೇಖನ, ಭಾಷಣ ಸ್ಪರ್ಧೆ, ಪೋಸ್ಟರ್ ಡಿಸೈನಿಂಗ್, ಕಥೆ ಮುಂತಾದವುಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದರು.

ಪ್ರಸಕ್ತ ಕಾಲದಲ್ಲಿ ನಮ್ಮ ಸಮಾಜವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು ಬಹಳ ಕಳವಳಕಾರಿಯಾಗಿವೆ. ಹೆಚ್ಚುತ್ತಿರುವ ನಗ್ನತೆ, ಜೂಜು, ಮಧ್ಯಪಾನ, ಮಾದಕ ವ್ಯಸನ, ಲಿವಿಂಗ್ ರಿಲೇಶನ್ಶಿಪ್, ಸಲಿಂಗ ಕಾಮ ಹಾಗೂ ವೇಶ್ಯಾವಾಟಿಕೆಗಳಂತಹ ಕೆಡುಕುಗಳು ಒಂದೆಡೆ ಸಮಾಜದ ಹದಗೆಡುತ್ತಿರುವ ನೈತಿಕ ಮಟ್ಟಕ್ಕೆ, ಕೈಗನ್ನಡಿಯಾಗಿದ್ದರೆ ಇನ್ನೊಂದೆಡೆ ನೈತಿಕ ಸಾಮಾಜಿಕ ಮತ್ತು ಜೈವಿಕ ಮಟ್ಟದಲ್ಲಿ ಅಸಂಖ್ಯ ಸಮಸ್ಯೆಗಳನ್ನು ಹುಟ್ಟು ಹಾಕಿವೆ ಎಂದು ಅವರು ಹೇಳಿದರು.

ಬಂಡವಾಳಶಾಹಿ ಶಕ್ತಿಗಳ ಯೋಜನೆಗಳು ಸಮಾನತೆ ಮತ್ತು ಸ್ವಾತಂತ್ರ್ಯದ ಜಾಡಿನಲ್ಲಿ ಆಧುನಿಕ ಯುಗವನ್ನು ದಾರಿ ತಪ್ಪಿಸಿದೆ. ಈ ಅಭಿಯಾನದ ಮೂಲಕ ಮಾನವ ಜೀವನದ ಸುಭಿಕ್ಷೆ ಮತ್ತು ಮನೋಹರತೆಯು ನೈತಿಕ ಕಟ್ಟಳೆಗಳನ್ನು ಪಾಲಿಸುವುದರಿಂದಲೇ ಸಾಧ್ಯ ಎಂಬ ಪ್ರಜ್ಞೆಯನ್ನು ಬೆಳೆಸುವ ಸಂಕಲ್ಪವನ್ನು ತೊಟ್ಟಿದೆ. ಯುವ ಪೀಳಿಗೆಯನ್ನು ಸ್ವಾತಂತ್ರ್ಯದ ತಪ್ಪು ಕಲ್ಪನೆಯಿಂದ ಜಾಗೃತಗೊಳಿಸುವುದು ಮತ್ತು ಅದರಿಂದ ರಕ್ಷಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ವರ್ತುಲ ಸ್ಥಾನೀಯ ಸಂಚಾಲಕಿ ವಾಜಿದಾ ತಬಸ್ಸುಮ್, ಸಹ ಸಂಚಾಲಕಿಯರಾದ ಫರ‌್ಹತ್ ದಾವೂದ್, ಶಾಹಿಲ ಹನೀಫ್, ಕಾಪು ವರ್ತುಲ ಸ್ಥಾನೀಯ ಸಂಚಾಲಕಿ ಶಹನಾಝ್, ತೋನ್ಸೆ ವರ್ತುಲ ಸ್ಥಾನೀಯ ಸಂಚಾಲಕಿ ಜಮೀಲಾ ಸದೀದಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News