ಸಣ್ಣ ನೀರಾವರಿ ಇಲಾಖೆಯಲ್ಲಿ ತ್ವರಿತಗತಿಯ ಕಾಮಗಾರಿಗೆ ಸಚಿವ ಎನ್.ಎಸ್. ಬೋಸರಾಜು ಸೂಚನೆ

Update: 2023-09-08 14:46 GMT

ಶಿವಪುರ(ಹೆಬ್ರಿ), ಸೆ.8:ಸಣ್ಣ ನೀರಾವರಿ ಇಲಾಖೆ ಮೂಲಕ ರಾಜ್ಯಾದ್ಯಂತ ಕೈಗೊಂಡಿರುವ 15,000 ಕೋಟಿ ರೂ ಮೊತ್ತದ ಕಾಮಗಾರಿಗಳನ್ನು 2024ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.

ಹೆಬ್ರಿ ತಾಲೂಕಿನ ಚಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಮ್ ಕಿಂಡಿ ಅಣೆಕಟ್ಟು ಕಾಮಗಾರಿ ಪ್ರದೇಶ ಮತ್ತು ಶಿವಪುರ ದೇವಸ್ಥಾನಬೆಟ್ಟು ಎಂಬಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯಾದ್ಯಂತ ಅಂತರ್ಜಲ ಮಟ್ಟದ ವೃದ್ದಿಗಾಗಿ ರಾಜ್ಯ ಸರಕಾರ ಸಣ್ಣ ನೀರಾವರಿ ಇಲಾಖೆಯ ಮೂಲಕ ಚೆಕ್ ಡ್ಯಾಂ, ಕಿಂಡಿ ಅಣೆಕಟ್ಟು, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ, ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣದ ಕಾಮಗಾರಿಗಳನ್ನು ನಡೆಸುತ್ತಿದೆ ಎಂದರು.

ಸದ್ಯ ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ 2696 ಕಾಮಗಾರಿಗಳು ಸುಮಾರು 12,600 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿದೆ. ಹಣಕಾಸಿನ ಬಿಕ್ಕಟ್ಟಿನ ಹೊರತಾಗಿಯೂ ಸರಕಾರ ಈ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಲು ನಿರ್ಧರಿಸಿದು, ಈಗಾಗಲೇ ಆದ್ಯತೆಯ ಮೇರೆಗೆ ಶೇ.60ರಿಂದ 70ರಷ್ಟು ಹಲವು ಕಾಮಗಾರಿಗಳು ಮುಕ್ತಾಯಗೊಂಡಿವೆ. ಈ ಕಾಮಗಾರಿ ಗಳು ಸೇರಿದಂತೆ ಬಾಕಿ ಇರುವ 15,000 ಕೋಟಿ ರೂ ಮೊತ್ತದ ಕಾಮಗಾರಿಗಳನ್ನು 2024ರ ಮಾರ್ಚ್ ಅಂತ್ಯದೊಳಗೆ ಪ್ರಥಮಾದ್ಯತೆಯಲ್ಲಿ ಮುಕ್ತಾಯಗೊಳಿಸಲಾಗುವುದು ಎಂದು ಸಚಿವ ಬೋಸರಾಜು ನುಡಿದರು.

ಸಣ್ಣ ನೀರಾವರಿ ಇಲಾಖೆಯಿಂದ ರಾಜ್ಯದಲ್ಲಿ ಕುಡಿಯುವ ನೀರು ಲಭ್ಯತೆ ಹಾಗೂ ಅಂರ್ತಜಲದ ಹೆಚ್ಚಳಕ್ಕಾಗಿ ಕಾಮಗಾರಿ ಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಕೃಷಿ ಬಳಕೆಗೆ ಹಾಗೂ ಜನತೆಗೆ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಲಾಗುವುದು. ಇಡೀ ರಾಜ್ಯದಲ್ಲಿ ಅಂರ್ತಜಲ ವೃದ್ಧಿ ಇಲಾಖೆಯ ಪ್ರಮುಖ ಗುರಿಯಾಗಿದೆ ಎಂದರು.

2000 ಕೋಟಿ ರೂ.ಗಳ ಕಾಮಗಾರಿಗೆ ಪ್ರಸ್ತಾವನೆ: ಇದೀಗ ಈಗಿನ ಸರಕಾರದ ಮುಂದೆ ಸಣ್ಣ ನೀರಾವರಿ ಇಲಾಖೆಯ ಸುಮಾರು 2000 ಕೋಟಿ ರೂ.ಗಳ ಹೊಸ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಇವುಗಳಿಗೆ ಆದ್ಯತೆ ಆಧಾರದಲ್ಲಿ ಅನುಮೋದನೆ ನೀಡಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಸಚಿವರು ತಿಳಿಸಿದರು.

ಈ ಭೇಟಿಯ ಸಂದರ್ಭದಲಿ ಸಚಿವರೊಂದಿಗೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ, ಸಣ್ಣ ನೀರಾವರಿ ಇಲಾಖೆಯ ಹಿರಿಯ ಹಾಗೂ ಕಿರಿಯ ಇಂಜಿನಿಯರ್‌ಗಳು, ಅಧಿಕಾರಿಗಳು, ಚಾರ ಮತ್ತು ಶಿವಪುರ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News