ಜನಾರ್ದನ ಹಾವಂಜೆಗೆ ‘ಜಯಂಟ್ಸ್ ಲಲಿತಕಲಾರತ್ನ’ ಪ್ರಶಸ್ತಿ
ಉಡುಪಿ, ಅ.7: ಜಯಂಟ್ಸ್ ಇಂಟರ್ ನ್ಯಾಶನಲ್ ಗ್ರೂಪ್ ಆಫ್ ಗಾರ್ಡನ್ಸ್ ಸಿಟಿ ಬೆಂಗಳೂರು ಇವರು ಕೊಡಮಾಡುವ ರಾಜ್ಯ ಮಟ್ಟದ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಪ್ರಶಸ್ತಿಗಳಲ್ಲೊಂದಾದ ‘ಜಯಂಟ್ಸ್ ಲಲಿತಕಲಾರತ್ನ’ ಪ್ರಶಸ್ತಿಯನ್ನು ಉಡುಪಿಯ ಚಿತ್ರ ಕಲಾವಿದ ಡಾ. ಜನಾರ್ದನ ಹಾವಂಜೆ ಅವರಿಗೆ ನೀಡಿ ಗೌರವಿಸಲಾಗಿದೆ.
ಕೊಂಕಣ ಕರಾವಳಿಯ ಕಾವಿ ಕಲೆಯ ಮೇವೆ ವಿಶೇಷ ಅಧ್ಯಯನ ನಡೆಸಿ ಅಳಿವಿನಂಚಿನಲ್ಲಿರುವ ದೇಶೀಯ ಕಲಾ ಪ್ರಕಾರ ವೊಂದರ ಉಳಿವಿಗಾಗಿ ನಡೆಸಿದ ವಿಶೇಷ ಪ್ರಯತ್ನಗಳಿಗಾಗಿ ಜನಾರ್ದನ ಹಾವಂಜೆ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮುಂಬೈನ ಜಯಂಟ್ಸ್ ವೆಲ್ಫೇರ್ ಪೌಂಡೇಶನ್‌ನ ಉಪಾಧ್ಯಕ್ಷರಾದ ನೂರುದ್ದಿನ್ ಸೇವಾವಾಲ ಹಾಗೂ ದೂರದರ್ಶನದ ಕನ್ನಡ ಕ್ವಿಜ್ ಮಾಸ್ಟರ್ ಡಾ.ನಾ. ಸೋಮೇಶ್ವರ ಅವರು ಬೆಂಗಳೂರಿನಲ್ಲಿ ಶ್ರೀಕೃಷ್ಣ ದೇವರಾಯ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಸಮಿತಿಯ ಸದಸ್ಯರಾದ ಜಿ.ಎಸ್. ನಾಯಕ್, ಬೆಂಗಳೂರು ಜಯಂಟ್ಸ್ ಗ್ರೂಪ್‌ನ ಅಧ್ಯಕ್ಷ ಹೆಚ್.ವೆಂಕಟೇಶ್ ಹಾಗೂ ಅಧಿಕಾರಿಗಳಾದ ವಿವೇಕಾನಂದ ಕಿಣಿ ಮತ್ತಿತರರು ಉಪಸ್ಥಿತರಿದ್ದರು.