ಹೆನ್ನಾಬೈಲ್: ಸಂಭ್ರಮದ ಈದ್ ಮಿಲಾದ್ ಆಚರಣೆ

Update: 2023-09-29 07:09 GMT

ಕುಂದಾಪುರ: ಪ್ರವಾದಿ ಮುಹಮ್ಮದ್ ಪೈಗಂಬರ್ ರವರ 1498 ನೇ  ಜನ್ಮದಿನಾಚರಣೆ ಈದ್ ಮಿಲಾದನ್ನು ಹೆನ್ನಾಬೈಲ್ ಮಸೀದಿ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉಡುಪಿ ಜಲ್ಲಾ ಟೀಚರ್ಸ್ ಬ್ಯಾಂಕಿನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಚೋನಾಳಿಯವರು" ಪ್ರವಾದಿ ಮುಹಮ್ಮದರ ಚಿಂತನೆಗಳು ಸಾರ್ವಕಾಲಿಕ ಅನ್ವಯವಾಗುವಂತದ್ದು. ಅವರ ಚರಿತ್ರೆಯನ್ನು ಓದಿದರೆ ಅವರು ಲೋಕದ ಪಾಲಿನ ಅನುಗ್ರಹ ಎಂಬ ದೈವೀಕ ವಾಣಿ ಸತ್ಯವೆನಿಸುತ್ತದೆ. ಹಿಂದೂ ಮುಸ್ಲಿಮರು ಒಂದಾಗಿ ಬದುಕಿದಾಗಲೇ ದೇಶ ತಲುಪಬೇಕಾದ ಎತ್ತರವನ್ನು ತಲುಪುತ್ತದೆ" ಎಂಬ ಸಂದೇಶ ನೀಡಿದರು.

ವಿಶ್ವದ ಅತ್ಯಂತ ದೊಡ್ಡ ಸಮುದಾಯಗಳು ಎಲ್ಲ ಭಿನ್ನತೆಗಳನ್ನು ಮರೆತು ಒಂದಾಗುವುದು ಅಸಾಧ್ಯವೇನಲ್ಲ. ಆದರೆ ಅದಕ್ಕೆ ಪ್ರಬುದ್ಧ ಚಿಂತಕರ ಸಮೂಹ ಬೇಕಿದೆ. ಪ್ರವಾದಿ ಮುಹಮ್ಮದರು ಸೇರಿದಂತೆ ಎಲ್ಲ ಕಾಲದಲ್ಲೂ ಬಂದ ದೇವದೂತರು, ದಾರ್ಶನಿಕರು, ಋಷಿ ಮುನಿಗಳ ಬದುಕು ಮತ್ತು ಸಂದೇಶಗಳ ಅಧ್ಯಯನ ನಿಷ್ಪಕ್ಷಪಾತವಾಗಿ ನಡೆದರೆ ಸಮಾಜ ಪ್ರಬುದ್ಧವಾಗಿ ಉನ್ನತ ಚಿಂತನೆಯು ಖಂಡಿತ ಮೂಡಿ ಸಾಮಾಜಿಕ ಸೌಹಾರ್ದ ನೆಲೆಯಾಗುತ್ತದೆ ಎಂದರು.

ಸೌಹಾರ್ದದ ತುಡಿತ ಈ ಕಾಲದ ಅಗತ್ಯ. ಸೌಹಾರ್ದವಿಲ್ಲದ ಸಮಾಜ ಸರಾಗವಾಗಿ ಉಸಿರಾಡಿದ ಉದಾಹರಣೆ ಕಾಲಾತೀತ, ದೇಶಾತೀತ, ಧರ್ಮಾತೀತವಾಗಿ ಇಲ್ಲವೆಂದೇ ಹೇಳಬಹುದು. ಈದ್ ಮಿಲಾದ್ ಕಾರ್ಯಕ್ರಮಗಳು ಪ್ರವಾದಿ ಚಿಂತನೆಯನ್ನು ಸರ್ವರೂ ಅರಿಯುವ ಮತ್ತು ಅರಿಯಿಸುವ ವೇದಿಕೆಗಳಾಗಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News