ಮುಂಜಾಗ್ರತೆ ಮೂಲಕ ಎಚ್‌ಐವಿ ಸೋಂಕಿನಿಂದ ದೂರ ಇರಲು ಸಾಧ್ಯ: ಉಡುಪಿ ಡಿಸಿ ವಿದ್ಯಾಕುಮಾರಿ
ಉಡುಪಿ, ಡಿ.1: ಏಡ್ಸ್ ಒಂದು ಮಾರಕ ಕಾಯಿಲೆಯಾಗಿದ್ದು, ಸೂಕ್ತ ಮುಂಜಾಗ್ರತೆ ವಹಿಸುವುದರಿಂದ ಈ ಕಾಯಿಲೆಯಿಂದ ದೂರವಿರಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಶುಕ್ರವಾರ ನಗರದ ಅಂಬಲಪಾಡಿಯ ಪ್ರಗತಿ ಸೌಧ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿದ್ಯಾರತ್ನ ಸ್ಕೂಲ್ ಕಾಲೇಜ್ ಆಫ್ ನರ್ಸಿಂಗ್, ಶ್ರೀ ಆದರ್ಶ ಕಾಲೇಜ್ ಆಫ್ ನರ್ಸಿಂಗ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಪ್ರಗತಿ ಸೌಧ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾದ್ಯಾಲಯ ಉದ್ಯಾವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಯ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತಮ್ಮದಲ್ಲದ ತಪ್ಪಿನಿಂದಾಗಿ ಹಲವರು ಏಡ್ಸ್ ರೋಗಕ್ಕೆ ತುತ್ತಾಗುತಿದ್ದಾರೆ. ಅಸುರಕ್ಷಿತ ಲೈಂಗಿಕತೆ, ಸೋಂಕಿತರ ರಕ್ತವನ್ನು ಪರೀಕ್ಷೆ ಮಾಡದೇ ಪಡೆಯು ವುದರಿಂದ, ಆಸ್ಪತ್ರೆಗಳಲ್ಲಿ ಸಂಸ್ಕರಣೆ ಮಾಡದ ಸಿರಿಂಜ್ ಬಳಕೆ, ಸೋಂಕಿತ ತಾಯಿಯಿಂದ ಮಗುವಿನ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲಿನ ಮೂಲಕ ರೋಗ ಹರಡುತ್ತದೆ. ಜಿಲ್ಲೆಯಲ್ಲಿಯೂ ಸಹ ಏಡ್ಸ್ ರೋಗಿಗಳಿದ್ದು, ಅವರುಗಳು ಮಾನಸಿಕ ಹಿಂಸೆಗೆ ಒಳಗಾಗುತ್ತಾರೆ. ಅವರನ್ನು ದೂರ ತಳ್ಳದೇ ನಮ್ಮಲ್ಲಿ ಒಬ್ಬರನ್ನಾಗಿ ನೋಡಬೇಕು. ಕಾಯಿಲೆ ಖಚಿತವಾದ ನಂತರ ಸರಿಯಾದ ಚಿಕಿತ್ಸೆ ಪಡೆದು, ಆತ್ಮವಿಶ್ವಾಸದಿಂದ ರೋಗ ವನ್ನು ಎದುರಿಸಬೇಕು ಎಂದರು.
ಯುವ ಜನತೆ ಕ್ಷಣಿಕ ಸುಖಕ್ಕಾಗಿ ಮಾರಕ ರೋಗಕ್ಕೆ ಬಲಿಯಾಗಬಾರದು. ಏಡ್ಸ್ ರೋಗದ ಕುರಿತು ಅರಿವು ಹೊಂದುವು ದರ ಜೊತೆಗೆ ಸಾರ್ವಜನಿಕರಿಗೆ, ರೋಗಿಗಳಿಗೆ ಏಡ್ಸ್ ರೋಗ ಹರಡುವ ಕುರಿತು ಹಾಗೂ ತಡೆಗಟ್ಟಲು ಇರುವ ಮುನ್ನೆಚ್ಚ ರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಅವರುಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್ ಮಾತನಾಡಿ, ಎಚ್‌ಐವಿ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಹಲವು ರೋಗಗಳಿಗೆ ಒಳಗಾಗುತ್ತಾರೆ. ಎಚ್‌ಐವಿ ಸೋಂಕಿತರು ನಮ್ಮಂತೆಯೇ ಮನುಷ್ಯರು. ಅವರು ಗಳಿಗೂ ಬದುಕುವ ಅರ್ಹತೆ ಇದೆ. ಅಸ್ಪಶ್ಯರಂತೆ ಅವರನ್ನು ಕಾಣದೇ ಸಮಾಜದ ಮುಖ್ಯ ವಾಹಿನಿಗೆ ಅವರನು ತಂದು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಪ್ರಾಸ್ತಾವಿಕ ವಾಗಿ ಮಾತನಾಡಿ, ಜಿಲ್ಲೆಯಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮ್ಯಾರಥಾನ್, ಕ್ವಿಜ್, ಪ್ರಬಂಧ ಸ್ಪರ್ಧೆ, ನಾಟಕ ಹಾಗೂ ರೀಲ್ಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಎಚ್‌ಐವಿ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆಯುವಂತೆ ಹಾಗೂ ಸಂದೇಹಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ:1097 ಅನ್ನು ಸಂಪರ್ಕಿಸಿ, ಪರಿಹಾರ ಕಂಡುಕೊಳ್ಳಬಹುದು ಎಂದರು.
ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಗಣನೀಯ ಸೇವೆ ಸಲ್ಲಿಸಿದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಮಿತಾ, ಮಣಿಪಾಲ ಐಸಿಟಿಸಿ ಆಪ್ತ ಸಮಾಲೋಚಕಿ ಅನುರಾಧ ಜಿ, ಜಿಲ್ಲಾ ಆಸ್ಪತ್ರೆಯ ಎ.ಆರ್.ಟಿ ಪ್ಲಸ್ ಕೇಂದ್ರದ ಹಿರಿಯ ಆಪ್ತ ಸಮಾಲೋಚಕಿ ಮಂಜುಳಾ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞೆ ಪ್ರತಿಮಾ, ನೊಂದ ಹೆಚ್.ಐ. ಸಮುದಾಯಕ್ಕೆ ವಿಶೇಷ ಕಾಳಜಿ ವಹಿಸಿದ ಲಯನ್ಸ್ ಕ್ಲಬ್ ಮಣಿಪಾಲ ಅಧ್ಯಕ್ಷ ಡಾ. ಹೆಚ್ ಗಣೇಶ್ ಪೈ, ಸಂತೆಕಟ್ಟೆ ಪರಿವಾರ ಸಮಾಜ ಕೇಂದ್ರ ಗೊರಟ್ಟೆ ಆಸ್ಪತ್ರೆಯ ಸಿಸ್ಟರ್ ಮೇಲಾನಿಯಾ ಡಿ ಸೋಜಾ ಹಾಗೂ ವಂಡ್ಸೆ ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಜೀವ್ ವಂಡ್ಸೆ, ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ರಾಜೇಂದ್ರ ಕೆ, ಎಂಜಿಎಂ ಕಾಲೇಜಿನ ಸುಚಿತ್ ಕೋಟ್ಯಾನ್ ಮತ್ತು ಬಂಟಕಲ್ ಶ್ರೀಮದ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ವಿಭಾಗೀಯ ಆರೋಗ್ಯ ಮತ್ತು ಕು.ಕ ಸೇವೆಗಳ ನಿರ್ದೇಶನಾಲಯದ ಉಪನಿರ್ದೇಶಕಿ ಡಾ. ಮಲ್ಲಿಕಾ ಬಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಜಿಲ್ಲಾ ಸರ್ಜನ್ ಡಾ. ವೀಣಾ ಕುಮಾರಿ, ರಾ. ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಉಲ್ಲಾಸ್ ಮೆಸ್ತಾ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷ ಧನುಶ್ ಕೆ. ಉಪಸ್ಥಿತರಿದ್ದರು. ಮಂಜುನಾಥ ಗಾಣಿಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.
ಜಾಗೃತಿ ಜಾಥಾ: ಕಾರ್ಯಕ್ರಮದಂಗವಾಗಿ ಬೋರ್ಡ್ ಹೈಸ್ಕೂಲ್‌ನಿಂದ ಅಂಬಲಪಾಡಿಯ ಪ್ರಗತಿ ಸೌಧ ಸಭಾಂಗಣ ದವರೆಗೆ ನಡೆದ ಏಡ್ಸ್ ಕುರಿತ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಚಾಲನೆ ನೀಡಿದರು.