ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ಬಂಜೆತನ ಚಿಕಿತ್ಸಾಲಯ ಉದ್ಘಾಟನೆ

Update: 2023-10-19 13:47 GMT

ಉಡುಪಿ: ಉಡುಪಿ ಲೋಂಬಾರ್ಡ್ ಸ್ಮಾರಕ(ಮಿಷನ್) ಆಸ್ಪತ್ರೆ ಯಲ್ಲಿ ಆರಂಭಿಸಲಾದ ಫರ್ಟಿಲಿಟಿ ಕ್ಲಿನಿಕ್(ಬಂಜೆತನ ಚಿಕಿತ್ಸಾಲಯ)ನ್ನು ಸಿಎಸ್‌ಐ ಕರ್ನಾಟಕ ದಕ್ಷಿಣ ಪ್ರಾಂತದ ಬಿಷಪ್ ಅ.ವಂ.ಹೇಮಚಂದ್ರ ಕುಮಾರ್ ಗುರುವಾರ ಉದ್ಘಾಟಿಸಿದರು.

ಆಸ್ಪತ್ರೆಯ ಚಾಪೆಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಷಪ್ ಮಾತನಾಡಿ, ಕನಸು ಕಾಣುವುದು ಮುಖ್ಯ ವಲ್ಲ. ಅದನ್ನು ನನಸು ಮಾಡಲು ಚಿಂತನೆ ಅತೀ ಅಗತ್ಯ. ಯಾವುದೇ ಸಾಧನೆ ಮಾಡಲು ಛಲ ಮತ್ತು ಅದಕ್ಕೆ ಬೇಕಾದ ಚಿಂತನೆ ಬೇಕಾಗುತ್ತದೆ. ಯಾವುದೇ ಕ್ಷೇತ್ರದಲ್ಲೂ ಪರಿಣಿತನಿಂದ ಮಾತ್ರ ಪರಿಪೂರ್ಣ ಫಲಿತಾಂಶ ಬರಲು ಸಾಧ್ಯ ಎಂದರು.

ಬಂಜೆತನ ನಿವಾರಣೆಗೆ ಈ ಕ್ಲಿನಿಕ್ ಅತೀ ಅಗತ್ಯ. ಇಂದು ಜನ ವೇಗದ ಬದುಕಿನ ಜೊತೆ ಹಣ ಸಂಪಾದನೆ ಮಾಡುತ್ತಿ ದ್ದಾರೆ. ಒತ್ತಡದ ಬದುಕಿನಲ್ಲಿ ಸಮಯವೇ ಇಲ್ಲವಾಗಿದೆ. ಇದರಿಂದ ಮಕ್ಕಳು ಆಗಲು ವಿಳಂಬವಾಗುತ್ತಿದೆ. ಇದಕ್ಕೆಲ್ಲ ನಮ್ಮ ಈ ಕ್ಲಿನಿಕ್ ಆಶಾಕಿರಣವಾಗಿ ಮೂಡಿ ಬರಲಿದೆ ಎಂದು ಅವರು ಹೇಳಿದರು.

ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ ಮಾತನಾಡಿ, ನಮ್ಮ ಆಸ್ಪತ್ರೆ 100ವರ್ಷಗಳಿಂದ ಜನರ ಸೇವೆ ಮಾಡುತ್ತಿದೆ. ಹೆರಿಗೆ ಹಾಗೂ ಸ್ತ್ರೀ ರೋಗ ಚಿಕಿತ್ಸೆಯಲ್ಲಿ ನಮ್ಮ ಆಸ್ಪತ್ರೆ ಪ್ರಮುಖ ಸ್ಥಾನ ಪಡೆದಿದೆ. ಇದೀಗ ಫರ್ಟಿಲಿಟಿ ಕ್ಲಿನಿಕ್ ಸ್ಥಾಪಿಸಿರುವುದು ನಮ್ಮ ಹೆಮ್ಮೆಯಾಗಿದೆ. ಬಂಜೆತನ ನಿವಾರಣೆ ಯಲ್ಲಿ ಹೊಸ ಮೈಲುಗಲ್ಲು ಆಗಿದೆ ಎಂದು ತಿಳಿಸಿದರು.

ರಿಪ್ರೊಡಕ್ಟಿವ್ ಮೆಡಿಸಿನ್ ಸಲಹೆಗಾರ, ಮಂಗಳೂರು ಡಾ.ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐಪಿಎಫ್ ಸೆಂಟರಿನ ಡಾ.ನವೀನ್ ಚಂದ್ರ ಆರ್. ನಾಯಕ್, ಆಸ್ಪತ್ರೆಯ ಸ್ತ್ರೀರೋಗ ತಜ್ಞರುಗಳಾದ ಡಾ.ಪವಿತ್ರ ಹಾಗೂ ಡಾ.ಅಕ್ಷತಾ ರಾವ್ ಮಾತನಾಡಿದರು.

ರೆ.ಐವನ್ ಡಿ.ಸೋನ್ಸ್, ನಾಯಕ್ಸ್ ಕ್ಲಿನಿಕ್‌ನ ಡಾ.ಸ್ವಾತಿ ನಾಯಕ್, ಮಾರ್ಕೆಟಿಂಗ್ ಕನ್ಸ್‌ಲೆಂಟ್ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಪಿಆರ್‌ಓ ರೋಹಿ ರತ್ನಾಕರ್ ಸ್ವಾಗತಿಸಿದರು. ಲಿಯೋನ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News