ಉಡುಪಿ ಪತ್ರಿಕಾ ಭವನದ ಪಾರ್ಕಿಂಗ್-ರೂಫಿಂಗ್ ವ್ಯವಸ್ಥೆ ಉದ್ಘಾಟನೆ

Update: 2023-10-10 15:07 GMT

ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಜತ ಮಹೋತ್ಸವ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿರುವ ಉಡುಪಿ ಪತ್ರಿಕಾ ಭವನದ ನೂತನ ಪಾರ್ಕಿಂಗ್ ಮತ್ತು ರೂಫಿಂಗ್ ವ್ಯವಸ್ಥೆಯ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು.

ನೂತನ ಪಾರ್ಕಿಂಗ್ ಮತ್ತು ರೂಫಿಂಗ್ ವ್ಯವಸ್ಥೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಬಳಿಕ ನಡೆದ ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗೆ ನನ್ನ ವಿರೋಧ ಇಲ್ಲ. ಸರಕಾರದ ಸಾಮಾಜಿಕ ಕಲ್ಯಾಣ ಯೋಜನೆಗೆ ನನ್ನ ಸ್ವಾಗತವಿದೆ. ಆದರೆ ಯಾರಿಗೆ ಅಗತ್ಯವಿದೆಯೋ ಅವರಿಗೆ ಕೊಡಬೇಕಾದದ್ದನ್ನು ಕಡಿತ ಮಾಡಿ ಇನ್ನೊಬ್ಬರಿಗೆ ನೀಡುವುದು ಒಳ್ಳೆಯದಲ್ಲ. ಇದರಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ವಿರೋಧ ಪಕ್ಷ ಮತ್ತು ಅಡಳಿತ ಪಕ್ಷಎಂಬ ಭೇದವಿಲ್ಲದೆ ಪ್ರತಿ ಶಾಸಕರಿಗೆ ಎಂಎಲ್‌ಎ ಅನುದಾನ ಹಂಚಿಕೆಯಾಗುತ್ತದೆ. ಆದರೆ ಜಿಲ್ಲೆಯ ಯಾವುದೇ ಶಾಸಕರಿಗೆ ಸರಕಾರ ಅಧಿಕಾರಕ್ಕೆ ಬಂದು ೪ ತಿಂಗಳಾದರೂ ಅನುದಾನ ಬಂದಿಲ್ಲ ಎಂದ ಅವರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಟಿಕೆಟ್ ಸಿಗದಿದ್ದರೂ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇತರ ಜಿಲ್ಲೆಗೆ ಹೋಲಿಕೆ ಮಾಡಿದರೆ ಉಡುಪಿ ಜಿಲ್ಲೆಯ ಪತ್ರಕರ್ತರು ಎಲ್ಲರಿಗೂ ಮಾದರಿಯಾಗಿದ್ದಾರೆ. ಆದುದರಿಂದ ತಾವು ಈವರೆಗೆ ಕಾಪಾಡಿ ಕೊಂಡು ಬಂದಿರುವ ವಸ್ತುನಿಷ್ಠ ಪತ್ರಿಕಾ ಧರ್ಮವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಪತ್ರಿಕಾ ಭವನಕ್ಕೆ ಪರಿಕರ ಕೊಡುಗೆ ನೀಡಿದ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರಬೆಟ್ಟು ಅವರಿಗೆ ಗೌರವ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್, ಪತ್ರಿಕಾ ಭವನದ ಸಂಚಾಲಕ ಅಜಿತ್ ಆರಾಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ಪ್ರಕಾಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News