ಕಾರ್ಕಳ | ಯುವತಿಯ ಅಪಹರಣ, ಅತ್ಯಾಚಾರ ಪ್ರಕರಣ; ಇಬ್ಬರು ಆರೋಪಿಗಳ ಬಂಧನ, ವಾಹನಗಳು ವಶಕ್ಕೆ

Update: 2024-08-24 15:35 GMT

ಕಾರ್ಕಳ: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಜೋಡುರಸ್ತೆಯ ನಿವಾಸಿ ಅಲ್ತಾಫ್(34) ಹಾಗೂ ಸವೇರಾ ರಿಚರ್ಡ್ ಕ್ವಾಡ್ರಸ್(35) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಕ್ಕುಂದೂರು ಗ್ರಾಪಂ ವ್ಯಾಪ್ತಿಯ 21ರ ಹರೆಯದ ಸಂತ್ರಸ್ತ ಯುವತಿಗೆ ಮೂರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಅಲ್ತಾಫ್ ಪರಿಚಯವಾಗಿದ್ದನು. ಅಲ್ತಾಫ್ ಶುಕ್ರವಾರ ಮಧ್ಯಾಹ್ನ ವೇಳೆ ಸಂತ್ರಸ್ತೆಗೆ ಕರೆ ಮಾಡಿ ಒಂದು ಕಡೆಗೆ ಬರಲು ತಿಳಿಸಿದ್ದನು. ಅದರಂತೆ ಅಲ್ಲಿಗೆ ಹೋದ ಸಂತ್ರಸ್ತೆಯನ್ನು ಆತ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿರುವುದಾಗಿ ದೂರಲಾಗಿದೆ

ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿಗೆ ಅಲ್ತಾಫ್‌ನ ಸ್ನೇಹಿತರಾದ ಸವೇರಾ ರಿಚಮದ್ಯದ ಬಾಟಲಿಯನ್ನು ತಂದು ಕೊಟ್ಟಿದ್ದರು. ನಂತರ ಅಲ್ತಾಫ್ ಡ್ರಿಂಕ್ಸ್‌ನಲ್ಲಿ ಮತ್ತು ಬರಿಸುವ ಪದಾರ್ಥ ಬೆರೆಸಿ ಆಕೆಗೆ ಕುಡಿಸಿ, ಅತ್ಯಾಚಾರ ಎಸಗಿದ್ದನು ಎಂದು ದೂರಲಾಗಿದೆ.

ಕೃತ್ಯ ಎಸಗಿದ ಬಳಿಕ ಆರೋಪಿ ಅಲ್ತಾಫ್ ತನ್ನ ಕಾರಿನಲ್ಲಿ ಸಂತ್ರಸ್ತ ಯುವತಿ ಯನ್ನು ಆಕೆಯ ಮನೆ ಬಳಿ ಬಿಟ್ಟು ಹೋಗಿ ದ್ದನು. ಇದನ್ನು ಗಮನಿಸಿದ ಮನೆ ಯವರು ಆಕೆಯನ್ನು ಕೂಡಲೇ ಕಾರ್ಕಳ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

ಈ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂತ್ರಸ್ತೆಯ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ 145/24 ಕಲಂ. 138,64 ಜೊತೆಗೆ 3(5) ಬಿಎನ್‌ಎಸ್‌ರಂತೆ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ಎಸ್ಪಿ

ಈ ಪ್ರಕರಣದ ದೂರಿನ ಪ್ರಕಾರ ಸಾಮೂಹಿಕ ಅತ್ಯಾಚಾರ ನಡೆದಿಲ್ಲ. ಓರ್ವ ಮಾತ್ರ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿದೆ. ಅದೇ ರೀತಿ ವೈದ್ಯಕೀಯ ವರದಿಯಲ್ಲೂ ಅದು ಕಂಡು ಬಂದಿಲ್ಲ. ತಾಯಿ ಕೊಟ್ಟ ದೂರಿನಲ್ಲಿ ಓರ್ವ ಅತ್ಯಾಚಾರ ಎಸಗಿದ್ದು, ಮತ್ತೆ ಇಬ್ಬರು ಮದ್ಯ ತಂದು ಕೊಟ್ಟಿದ್ದಾರೆ ಎಂದು. ಆದರೆ ಯುವತಿ ಹೇಳಿಕೆಯಲ್ಲಿ ಒಬ್ಬ ಅತ್ಯಾಚಾರ ಎಸಗಿದ್ದು, ಮತ್ತೋರ್ವ ಮದ್ಯ ತಂದು ಕೊಟ್ಟಿದ್ದಾರೆ ಎಂಬುದು. ಇದು ಮುಂದಿನ ತನಿಖೆಯಲ್ಲಿ ಸ್ಪಷ್ಟನೆ ಸಿಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ತಿಳಿಸಿದ್ದಾರೆ.

ಅತ್ಯಾಚಾರ ಎಸಗಿದ ಆರೋಪಿ ಅಲ್ತಾಫ್‌ನನ್ನು ಬಂಧಿಸಿ, ಆತನ ವಾಹನ ಹಾಗೂ ಮದ್ಯ ತಂದು ಕೊಟ್ಟ ಆರೋಪಿ ಮತ್ತು ಆತನ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಕಾನೂನು ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ

 ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ: ಎಸ್ಪಿ

ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಎಚ್ಚರಿಕೆ ನೀಡಿದ್ದಾರೆ.

ಸಂತ್ರಸ್ತೆ ಯುವತಿ ನೀಡಿದ ದೂರು ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಇಲ್ಲದೇ ಇರುವ ಮಾಹಿತಿಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಯುವತಿಗೆ ಡ್ರಗ್ಸ್ ನೀಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆ: ಐಜಿಪಿ ಅಮಿತ್ ಸಿಂಗ್

ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಡ್ರಗ್ಸ್ ಸೇವನೆಯ ಕುರಿತು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ ರುವ ಸಂತ್ರಸ್ತೆಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದರ ವರದಿ ಇನ್ನಷ್ಟೇ ಬರಬೇಕಾಗಿದೆ. ಅದರಿಂದ ಆಕೆಗೆ ಯಾವ ಮಾದರಿಯ ಡ್ರಗ್ಸ್ ನೀಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.

ಕಾರ್ಕಳ ಯುವತಿಯ ಅತ್ಯಾಚಾರದ ಹಿನ್ನೆಲೆಯಲ್ಲಿ ಕಾರ್ಕಳ ನಗರ ಠಾಣೆಗೆ ಇಂದು ಭೇಟಿ ನೀಡಿದ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಆರೋಪಿ ಡ್ರಗ್ಸ್ ಎಲ್ಲಿಂದ ತಂದಿದ್ದ ಎಂಬುದರ ಬಗ್ಗೆಯೂ ತನಿಖೆ ನಡೆಸ ಲಾಗುತ್ತಿದೆ ಎಂದು ಹೇಳಿದರು.

ಅಲ್ತಾಫ್ ಅತ್ಯಾಚಾರ ಎಸಗಿದ್ದು, ಇಬ್ಬರು ಮದ್ಯ ಖರೀದಿಸಿ ತಂದು ಕೊಟ್ಟಿದ್ದಾರೆ ಎಂಬುದು ದೂರಿನಲ್ಲಿ ತಿಳಿಸಲಾಗಿದೆ. ಮೂವರಲ್ಲಿ ಇನ್ನೊಬ್ಬ ಯಾರು ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಅಥವಾ ಮದ್ಯವನ್ನು ಒಬ್ಬನೇ ತಂದು ಕೊಟ್ಟಿದ್ದಾನೆಯೇ ಎಂಬುದರ ಕುರಿತು ಪರಿಶೀಲನೆ ನಡೆಸ ಲಾಗುತ್ತಿದೆ. ದೂರಿನಲ್ಲಿ ಗ್ಯಾಂಗ್ ರೇಪಿನ ಉಲ್ಲೇಖ ಇಲ್ಲ. ಸದ್ಯ ಸಂತ್ರಸ್ತೆ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಆಕೆಯ ಹೇಳಿಕೆ ನೀಡಿದ ಬಳಿಕ ಎಲ್ಲವೂ ಸ್ಪಷ್ಟ ವಾಗುತ್ತದೆ ಎಂದರು.

ಡ್ರಗ್ಸ್ ಹಾವಳಿ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಮಣಿಪಾಲದಲ್ಲಿ ಹಲವು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಸ್ಪಿ ನೇತೃತ್ವದಲ್ಲಿ ಹಲವು ಕಡೆ ದಾಳಿ ಕೂಡ ಕೂಡ ಮಾಡಲಾಗಿದೆ. ಅದರ ಬಗ್ಗೆ ನಾವು ಕಠಿಣ ಕಾನೂನು ಕ್ರಮ ಜರಗಿಸುತ್ತೇವೆ. ಇದರೊಂದಿಗೆ ಜಾಗೃತಿ ಕೂಡ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಈ ಸಂದರ್ಭ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News