ಕಾರ್ಕಳ: ಕುಡಿಯುವ ನೀರಿಗೆ ಹಾಹಾಕಾರ , ಅಕ್ರಮ ಕಾಮಗಾರಿಗೆ ಯಥೇಚ್ಛ ನೀರು ಬಳಕೆ: ಆರೋಪ
ಕಾರ್ಕಳ: ಕಾರ್ಕಳ ನಗರ ಪ್ರದೇಶಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ರಾಮಸಮುದ್ರಕ್ಕೆ ಅಕ್ರಮವಾಗಿ ಪಂಪ್ ಅಳವಡಿಸಿ ಬೇರೆ ಯಾವುದೋ ಜಿಲ್ಲೆಯ ಕಾಮಗಾರಿಯನ್ನು ವಹಿಸಿಕೊಂಡ ಗುತ್ತಿಗೆದಾರನೊಬ್ಬ ತನ್ನ ಕಾಮಗಾರಿಗಳಿಗೆ ಯಥೇಚ್ಛವಾಗಿ ನೀರು ಬಳಸುತ್ತಿದ್ದು ಅದನ್ನು ತಕ್ಷಣ ನಿಲ್ಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಪುರಸಭಾ ಸದಸ್ಯ ಶುಭದರಾವ್ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.
ಕಾರ್ಕಳ ಪುರಸಭೆಯ ಎಲ್ಲಾ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ದಿನದಿಂದ ದಿನಕ್ಕೆ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ. ಸಾರ್ವಜನಿಕರು ನೀರಿಲ್ಲದೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕಾರ್ಕಳ ಪುರಸಭೆಯ ಕೆಲವು ವಾರ್ಡ್ ಗಳಲ್ಲಿ ಸಾರ್ವಜನಿಕರ ದೈನಂದಿನ ಬಳಕೆ ಹಾಗೂ ಕುಡಿಯುವ ನೀರಿಗೂ ಕೊರತೆ ಉಂಟಾಗಿದೆ. ಜನರು ನೀರಿಗಾಗಿ ಪರಿತಪಿಸುವ ಈ ಕಠಿಣ ಸಂದರ್ಭದಲ್ಲಿ ಈ ಅಕ್ರಮ ಕಾಮಗಾರಿಯ ಬಗ್ಗೆ ಜಲಮಂಡಳಿಯ ಅಧಿಕಾರಿಗಳು, ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಲ್ಲಿ ಸಾರ್ವಜನಿಕರು ಎಷ್ಟೇ ದೂರು ಸಲ್ಲಿಸಿದರೂ ಅವರ ನಿರ್ಲಕ್ಷ್ಯ ಮತ್ತು ಮೌನ ಅನೇಕ ಸಂಶಯಗಳಿಗೆ ಅವಕಾಶ ಮಾಡಿಕೊಟ್ಟಿದೆ. ಪುರಸಭಾ ವ್ಯಾಪ್ತಿಯ ನೀರಿನ ಸಮಸ್ಯೆಯ ಗಂಬೀರತೆಯ ಬಗ್ಗೆ ಸಂಪುರ್ಣ ಮಾಹಿತಿ ಇದ್ದರೂ ಅಕ್ರಮ ಕಾಮಗಾರಿಯನ್ನು ನಡೆಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸುವುದರ ಜೊತೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶುಭದ ರಾವ್ ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ.