ಕಾರ್ಕಳ: ಆಮೆನಡಿಗೆಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ
ಮುಹಮ್ಮದ್ ಶರೀಫ್ ಕಾರ್ಕಳ
ಕಾರ್ಕಳ: ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಕಾರ್ಕಳ ಬೈಪಾಸ್ ರಸ್ತೆಯಿಂದ ಮಾಳ ಗೇಟ್ ವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗಿದೆ. ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
167 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದ್ದು, ಎರಡು ವರ್ಷಗಳಿಂದ ನಿರಾತಂಕವಾಗಿ ಕಾಮಗಾರಿ ನಡೆಯುತ್ತಿದೆ. ಸಾರ್ವಜನಿಕ ರಸ್ತೆಗಳನ್ನು ಅಗಲೀಕರಣದ ನೆಪದಲ್ಲಿ ಅಗೆದು ಹಾಕಿದ್ದು, ವಾಹನ ಸವಾರರು ತಮ್ಮ ಮನೆಗಳಿಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿದು ಬರುವ ನೀರು ಮನೆಯಂಗಳಕ್ಕೆ ನುಗ್ಗಿ ತಗ್ಗು ಪ್ರದೇಶದ ಬಾವಿಗಳು, ಕೃಷಿ ಭೂಮಿಗಳು ನಾಶವಾಗುತ್ತಿದೆ. ರಸ್ತೆಗಿಂತ ಎತ್ತರಕ್ಕೆ ಕಾಂಕ್ರಿಟ್ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಂಗಡಿ ಮುಂಗಟ್ಟು ಮನೆಗಳಿಗೆ ವಾಹನ ಸಂಚಾರ ಅಸಾಧ್ಯವಾಗಿದ್ದು, ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ.
ರಾಷ್ಟೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಹಲವಾರು ಕಡೆ ಅಗೆದು ತಗ್ಗುಗೊಳಿಸಲಾಗಿದ್ದರೆ, ಕೆಲವೆಡೆ ಮಣ್ಣು ಹಾಕಿ ಎತ್ತರಗೊಳಿಸಲಾಗಿದೆ. ರಸ್ತೆಗೆ ಡಾಂಬರು ಹಾಕಿದ್ದರೂ ರಸ್ತೆಯ ಮೇಲ್ಮೈ ಮಾತ್ರ ಉಬ್ಬು ತಗ್ಗಾಗಿದ್ದು ಕಂಡುಬರುತ್ತಿದೆ. ಈ ಹಿಂದೆ ಅಪಘಾತ ವಲಯ ಎಂದು ಕುಖ್ಯಾತಿ ಪಡೆದ ತಿರುವು ರಸ್ತೆಗಳನ್ನು ನೇರಗೊಳಿಸದೆ ಅಗಲಗೊಳಿಸಿರುವುದರಿಂದ ಅಪಘಾತದ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಲವಾರು ಕಡೆ ಅವಕಾಶಗಳಿದ್ದರೂ ಸರಕಾರಿ ಭೂಮಿ ಲಭ್ಯವಿದ್ದರೂ ಇಂಜಿನಿಯರ್ಗಳ ದೂರ ದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆ. ಹೆದ್ದಾರಿಗೆ ಮುಖ್ಯರಸ್ತೆಗಳು ಕೂಡುವಲ್ಲಿ ಕೂಡು ರಸ್ತೆಗಳು ಬಾಟಲ್ ನೆಕ್ ತರಹ ನಿರ್ಮಾಣವಾಗಿದ್ದು, ಹೊಸ ಅಪಘಾತ ವಲಯಗಳಾಗಿ ಮಾರ್ಪಡಾಗುತ್ತಿದೆ ಅರ್ಧಂಬರ್ಧ ಡಾಂಬರು ಕಾಮಗಾರಿ ನಡೆಸಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸದೆ ಕಾಮಗಾರಿ ನಿರ್ವಹಿಸುತ್ತಿದ್ದು, ಅಪಘಾತಕ್ಕೆ ಎಡೆ ಮಾಡಿಕೊಟ್ಟಿದೆ.
ಚರಂಡಿ ನಿರ್ಮಾಣಕ್ಕೆ ಬಳಸುತ್ತಿರುವ ಕಾಂಕ್ರಿಟ್ ಮಿಕ್ಸ್ಗೆ ಸರಿಯಾಗಿ ಜಲ್ಲಿ ಸಿಮೆಂಟ್ ಬಳಸದೆ ಕೇವಲ ಜಲ್ಲಿ ಹುಡಿಗಳನ್ನು ಬಳಸಲಾಗುತ್ತಿದೆ. ಮಾತ್ರವಲ್ಲದೆ ಕಾಂಕ್ರಿಟ್ ಸ್ಲ್ಯಾಬ್ಗಳಿಗೆ ಕಬ್ಬಿಣವು ಸರಿಯಾಗಿ ಅಳವಡಿಕೆಯಾಗಿಲ್ಲ. ಕೆಲ ದಿನಗಳ ಹಿಂದೆ ಕಾಂಕ್ರಿಟ್ ಚರಂಡಿಯ ಮೇಲೆ ಮಿನಿ ಲಾರಿಯೊಂದು ರಿವರ್ಸ್ ತೆಗೆಯಲು ಹೋಗಿ ಪೂರ್ತಿ ಕಾಂಕ್ರಿಟ್ ಸ್ಲ್ಯಾಬ್ ಕುಸಿದು ಬಿದ್ದು ಲಾರಿ ಮೊರಿಯೊಳಗೆ ಸಿಕ್ಕಿ ಹಾಕಿಕೊಂಡ ಸಂದರ್ಭ ಅಸಲೀಯತ್ತು ಬೆಳಕಿಗೆ ಬಂದಿದೆ. ಕಾಂಕ್ರಿಟ್ ಸ್ಲ್ಯಾಬ್ ಮರಳಿನಂತೆ ಹುಡಿ ಹುಡಿಯಾಗುವುದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
---------------------------------------------------
ಎರಡೇ ವಾರಗಳಲ್ಲಿ ಕಾಂಕ್ರಿಟ್ ಚರಂಡಿಯ ಸ್ಲ್ಯಾಬ್ ನೆಲಕಚ್ಚಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಇನ್ನು ಪ್ರತಿಭಟನೆಯೇ ದಾರಿ. ಸಾರ್ವಜನಿಕರ ಹಣ ಈ ರೀತಿ ಪೋಲಾಗುತ್ತಿರುವುದನ್ನು ಪ್ರತಿಭಟನೆ ಮೂಲಕ ಇಲಾಖೆ ಹಾಗೂ ಲೋಕಾಯುಕ್ತರ ಗಮನಕ್ಕೆ ತರಬೇಕಾದ ಅನಿವಾರ್ಯತೆ ಇದೆ.
-ಡೇನಿಯಲ್ ರೇಂಜರ್,
ಅಧ್ಯಕ್ಷ, ಆಮ್ ಆದ್ಮಿ ಪಾರ್ಟಿ, ಕಾರ್ಕಳ
--------------------------------------------------
ಕಾಮಗಾರಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಬಿಟ್ಟರೆ ಬೇರೇನೂ ಆಗಿಲ್ಲ. ಕೆಲಸ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ನಮ್ಮ ಮನೆಗಳಿಗೆ ಹೋಗಲು ನಾವೇ ಪರದಾಡಬೇಕಾಗಿದೆ. ಇಂತಹ ಬೇಜವಾಬ್ದಾರಿಯುತ ಅಧಿಕಾರಿ, ಗುತ್ತಿಗೆದಾರರ ನಡೆ ಖಂಡನೀಯ.
ಸತೀಶ್ ಕುಮಾರ್, ಮೀಯಾರು