ಉಡುಪಿ ಜಿಲ್ಲಾಸ್ಪತ್ರೆಯಿಂದಲೇ ಡಯಾಲಿಸಿಸ್ ಘಟಕದ ನಿರ್ವಹಣೆ; 10 ಸಿಬ್ಬಂದಿಗಳ ನೇಮಕ

Update: 2023-10-07 17:29 GMT

ಉಡುಪಿ, ಅ.7: ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿರುವ ಎಲ್ಲ 11 ಯಂತ್ರಗಳ ಕಾರ್ಯ ಕಳೆದ ಒಂದು ವಾರಗಳಿಂದ ಸ್ಥಗಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಜಿಲ್ಲಾಧಿಕಾರಿ ಅಧ್ಯಕ್ಷತೆ ಯಲ್ಲಿರುವ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯೇ ಈ ಘಟಕವನ್ನು ನಿರ್ವಹಿಸಲು ಮುಂದಾಗಿದೆ.

ಉಡುಪಿ ಸೇರಿದಂತೆ ರಾಜ್ಯದ 122 ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕದ ನಿರ್ವಹಣೆಯನ್ನು ಎಸ್.ಕೆ.ಸಂಜೀವಿನಿ ಏಜೆನ್ಸಿ ವಹಿಸಿಕೊಂಡಿತ್ತು. ಕ್ರಮೇಣ ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಯಂತ್ರಗಳು ನಿರ್ವಹಣೆ ಇಲ್ಲದೆ ಸ್ಥಗಿತ ಗೊಳ್ಳುತ ಬಂತು. ಅ.1ರಿಂದ ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲ 11 ಯಂತ್ರಗಳು ಕೂಡ ಹಾಳಾಗಿ ಕಾರ್ಯವನ್ನು ಸ್ಥಗಿತಗೊಳಿಸಿವೆ.

ಏಜೆನ್ಸಿ ಸಂಸ್ಥೆ ಕೂಡ ಈ ಯಂತ್ರಗಳನ್ನು ರಿಪೇರಿಗೆ ಮುಂದಾಗದೆ ಕೈಕಟ್ಟಿ ಕುಳಿತಿದೆ. ಇದರಿಂದ ಈ ಘಟಕವನ್ನು ನಂಬಿದ್ದ ಉಡುಪಿಯ ಸುಮಾರು 43 ಬಡ ರೋಗಿಗಳು ಸರಿಯಾದ ರೀತಿಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

ಸಮಿತಿಯಿಂದ ನಿರ್ವಹಣೆ: ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ತನ್ನ ಅಧ್ಯಕ್ಷತೆಯಲ್ಲಿ ರುವ ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯಿಂದಲೇ ಈ ಘಟಕವನ್ನು ನಿರ್ವಹಿಸಲು ಜಿಲ್ಲಾ ಸರ್ಜನ್‌ಗೆ ಸೂಚನೆ ನೀಡಿದ್ದಾರೆ. ಅದರಂತೆ ಈ ಎಲ್ಲ ಯಂತ್ರಗಳನ್ನು ದುರಸ್ತಿ ಮಾಡಲು ಸಮಿತಿ ಮುಂದಾಗಿದೆ.

ಈ ಘಟಕಕ್ಕೆ ಬೇಕಾದ ಸಿಬ್ಬಂದಿಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಹೆಲ್ತ್ ಸೊಸೈಟಿ ಒದಗಿಸುತ್ತಿದೆ. ಅದರಂತೆ ಐವರು ತಂತ್ರಜ್ಞರು, ಮೂವರು ಗ್ರೂಪ್ ಡಿ ನೌಕರರನ್ನು ನೇಮಕ ಮಾಡಲಾಗಿದೆ. ಅಲ್ಲದೆ ಇಬ್ಬರು ಸ್ಟಾಫ್ ನರ್ಸ್‌ಗಳನ್ನು ಈ ಘಟಕಕ್ಕೆ ಒದಗಿಸಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ವೀಣಾ ಶೆಟ್ಟಿ ತಿಳಿಸಿದರು.

ಸಚಿವೆ ಶೋಭಾ ಭೇಟಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಡಯಾಲಿಸಿಸ್ ಘಟಕವನ್ನು ಪರಿಶೀಲಿಸಿದರು.

ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಕೆಲ ದಿನಗಳಿಂದ ಡಯಾಲಿಸಿಸ್ ಚಿಕಿತ್ಸೆ ಸ್ಥಗಿತಗೊಳಿಸಲಾಗಿದ್ದು ಇದರಿಂದ ರೋಗಿಗಳು ಚಿಕಿತ್ಸೆ ಇಲ್ಲದೆ ಪರ ದಾಡುವಂತಾಗಿದೆ. ಯಾವುದೇ ಮಾಹಿತಿ ನೀಡದೆ ಡಯಾಲಿಸಿಸ್ ಚಿಕಿತ್ಸೆ ಸ್ಥಗಿತಗೊಳಿ ಸಿದ ಏಜೆನ್ಸಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಜಿಲ್ಲಾ ಪ್ರಭಾರ ಸರ್ಜನ್ ಡಾ.ವೀಣಾ ಶೆಟ್ಟಿ ಹಾಗೂ ವೈದ್ಯಾಧಿಕಾರಿ ಗಳು ಉಪಸ್ಥಿತರಿದ್ದರು.

‘ಎಲ್ಲ 11 ಡಯಾಲಿಸೀಸ್ ಯಂತ್ರಗಳು ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಹೊಸ ಯಂತ್ರ ನೀಡುತ್ತಿಲ್ಲ ಮತ್ತು ಹಳೆಯ ಯಂತ್ರ ರಿಪೇರಿ ಕಾರ್ಯ ಆಗುತ್ತಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ನಡೆಯುತ್ತಿಲ್ಲ. ಆರೋಗ್ಯ ಇಲಾಖೆ ಆಯುಕ್ತರಿಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಈ ವಿಚಾರದಲ್ಲಿ ರಾಜ್ಯ ಸರಕಾರ ಮನವಿ ಮಾಡಿದರೆ ಕೇಂದ್ರ ಸಹಕಾರ ಮಾಡುತ್ತದೆ. ಕೇಂದ್ರ ಸರ್ಕಾರ ಹಣ ಕೊಡಲು ಸಿದ್ಧ ವಿದೆ. ಹೊಸ ಯಂತ್ರಗಳು ಮತ್ತು ತರಬೇತಿಯನ್ನು ಕೇಂದ್ರ ಸರಕಾರ ಕೊಡುತ್ತದೆ’

-ಶೋಭಾ ಕರಂದ್ಲಾಜೆ, ಸಚಿವರು

‘ಎಲ್ಲ ಡಯಾಲಿಸಿಸ್ ಯಂತ್ರಗಳ ದುರಸ್ತಿಗೆ ಈಗಾಗಲೇ ಕೊಟೇಷನ್ ಪಡೆದು ಕೊಳ್ಳಲಾಗಿದೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಯಂತ್ರಗಳು ದುರಸ್ತಿಯಾಗಿ ರೋಗಿಗಳ ಚಿಕಿತ್ಸೆಗೆ ಲಭ್ಯ ಇರುತ್ತದೆ. ಇದಕ್ಕೆ ಬೇಕಾದ ಹಣವನ್ನು ಸಮಿತಿಯೇ ಭರಿಸಲಿದೆ. ಅದೇ ರೀತಿ ಡಯಾಲಿಸಿಸ್‌ಗೆ ಬೇಕಾದ ಔಷಧಿಗಳನ್ನು ಸಮಿತಿಯೇ ನೋಡಿಕೊಳ್ಳಲಿದೆ’

-ಡಾ.ವೀಣಾ ಶೆಟ್ಟಿ, ಜಿಲ್ಲಾ ಸರ್ಜನ್

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News