ಮಣಿಪಾಲ: ಕೇರಳದ ಕಲಾಮೇಳ್ತ್ ಕಲಾಪ್ರಕಾರದ ಪ್ರಾತ್ಯಕ್ಷಿಕೆ

Update: 2023-10-17 15:57 GMT

ಮಣಿಪಾಲ, ಅ.17: ಕೇರಳದ ಕಲಾಪ್ರಕಾರವಾದ ’ಕಲಾಮೇಳ್ತ್’ ಇದರ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸವನ್ನು ತ್ರಿಶೂರಿನ ಹಿರಿಯ ಕಲಾವಿದರಾದ ವೇಣುಗೋಪಾಲ್ ಇವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ನಡೆಸಿಕೊಟ್ಟರು.

ಬಿಳಿ, ಹಸಿರು, ಕಪ್ಪು, ಹಳದಿ, ಕಡು ಕಂದು- ಈ ಐದು ನೈಸರ್ಗಿಕ ಬಣ್ಣಗಳನ್ನು ಬಳಸಿ, ‘ಭದ್ರಕಾಳಿ’ಯ ಚಿತ್ರವನ್ನು ಮೂಡಿ ಸುವ ಮೂಲಕ ತಮ್ಮ ಪ್ರಾತ್ಯಕ್ಷಿಕೆಯನ್ನು ಕಲಾವಿದ ವೇಣುಗೋಪಾಲ್ ಪ್ರಸ್ತುತ ಪಡಿಸಿದರು. ಹಾಗೆಯೇ ಕೇರಳದ ದೇವಸ್ಥಾನ ಗಳಲ್ಲಿ ಪ್ರಚಲಿತ ಇರುವ ಈ ಕಲೆಯ ಸಂದರ್ಭ ಹಾಗೂ ಒಟ್ಟು ಸ್ವರೂಪವನ್ನು ವಿವರಿಸಿದರು.

ಕೇರಳದಲ್ಲಿ ಕೈಬೆರಳುಗಳ ಸಹಾಯದಿಂದಲೇ ನೈಸರ್ಗಿಕ ಪುಡಿಗಳಿಂದ ನೆಲದ ಮೇಲೆ ದೇವದೇವತೆಗಳ ಆಕೃತಿಗಳನ್ನು ಬಿಡಿಸುವ ಪದ್ಧತಿಯೇ ಕಲಾಮೇಳ್ತ್. ಕಲಾಮೇಳ್ತ್ ಗೋಡೆಯ ಚಿತ್ರಕಲೆಯ ಮೊದಲ ರೂಪ ಎಂದು ಹೇಳಲಾಗುತ್ತದೆ. ಕಲಾಮೆಳ್ತ್ ಪಟ್ಟ್, ಮುದಿಯೆಟ್, ಭದ್ರಕಾಳಿಯಾಟ್, ಅಯ್ಯಪ್ಪನ್ ಥೇಯಟ್, ಕೋಲಂ ತುಳ್ಳಲ್ ಮತ್ತು ಸರ್ಪಂತುಳ್ಳಲ್ ಮುಂತಾದ ಎಲ್ಲಾ ಧಾರ್ಮಿಕ ಕಲೆಗಳಲ್ಲಿ ಇದು ಅನಿವಾರ್ಯವಾಗಿದೆ.

ಕಾಳಿ, ದುರ್ಗೆ, ಅಯ್ಯಪ್ಪನ್, ಯಕ್ಷಿ, ಗಂಧರ್ವ, ನಾಗ ಮುಂತಾದ ದೇವರನ್ನು ಈ ಕಲಾ ಪ್ರಕಾರದಲ್ಲಿ ಪ್ರಮುಖವಾಗಿ ಚಿತ್ರಿಸಲಾಗುತ್ತದೆ. ಪಂಚವರ್ಣಂ ಎಂಬ - ಬಿಳಿ, ಕಪ್ಪು, ಹಸಿರು, ಹಳದಿ ಮತ್ತು ಕೆಂಪು- ಐದು ವಿಧದ ನೈಸರ್ಗಿಕ ಪುಡಿ ಗಳನ್ನು ಇಲ್ಲಿ ಬಳಸಲಾಗುತ್ತದೆ ಎಂದು ಕಲಾವಿದ ವೇಣುಗೋಪಾಲ್ ವಿವರಿಸಿದರು.

ನಂತರ ನಡೆದ ಚರ್ಚೆಯಲ್ಲಿ ಕಲಾವಿದ ಡಾ.ಜನಾರ್ದನ್ ಹಾವಂಜೆ, ಡಾ. ರೆಸ್ಮಿ ಭಾಸ್ಕರನ್, ಡಾ.ರವೀಂದ್ರನಾಥನ್, ಡಾ ವಾಣಿ ರಾಮಕುಮಾರ್, ಅಪರ್ಣಾ ಪರಮೇಶ್ವರನ್, ಜಾನಪದ ತಜ್ಞ ಕೃಷ್ಣಯ್ಯ, ಪ್ರೊ.ವರದೇಶ್ ಹಿರೇಗಂಗೆ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News