ದೇಶದ ಸಂಪತ್ತು ಸೃಷ್ಠಿ ಮಾಡುವ ಕಾರ್ಮಿಕರಿಗೆ ಸಿಗಬೇಕಾಗಿದೆ: ಪ್ರೊ.ಫಣಿರಾಜ್
ಉಡುಪಿ: ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ರಾಜಕೀಯ ಮಾಡಬೇಕಾಗಿದೆ. ದೇಶದ ಸಂಪತ್ತು ಸೃಷ್ಠಿ ಮಾಡುವವರಿಗೆ ಸಿಗಬೇಕಾಗಿದೆ. ಅಂತಹ ಅರಿವು ಪಡೆದಾಗ ಕಾರ್ಮಿಕರು ಮೇ ದಿನದ ಮಹತ್ವ ಮೂಡಲು ಸಾಧ್ಯ ಎಂದು ಹಿರಿಯ ಚಿಂತಕ ಪ್ರೊ. ಫಣಿರಾಜ್ ಹೇಳಿದ್ದಾರೆ.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಉಡುಪಿ ಹಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯಿಂದ ಅಜ್ಜರಕಾಡು ಹುತಾತ್ಮ ಚೌಕದ ವರೆಗೆ ಇಂದು ನಡೆದ ಮೇ ದಿನಾಚರಣೆ ಮೆರವಣಿಗೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕಾರ್ಪೋರೇಟ್ -ಕೋಮುವಾದ ಮೈತ್ರಿಯಿಂದ ಕಾರ್ಮಿಕರನ್ನು ಬಂಡವಾಳಗಾರರ ಗುಲಾಮರಾಗಿ ಮಾಡಿ ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ಮಾತ್ರವಲ್ಲ ಜಾತಿ ಮತ ಧರ್ಮ ಆಧಾರದಲ್ಲಿ ಕಾರ್ಮಿಕರನ್ನು ಎತ್ತಿ ಕಟ್ಟಿ ಕೋಮುವಾದದ ಅಡಿಯಾಳಾಗಿ ಮಾಡುವ ಬಿಜೆಪಿ ಅಪಾಯಕಾರಿ ನೀತಿಯ ವಿರುದ್ಧ ರೈತರು ಕಾರ್ಮಿಕರು ಕೂಲಿಕಾರರು ನೌಕರರು ಒಂದಾಗಿ ವರ್ಗ ಹೋರಾಟವನ್ನು ತೀವ್ರಗೊಳಿಸ ಬೇಕು ಎಂದು ಹೇಳಿದರು.
ಕೊರೋನದ ಸಂಕಷ್ಟದ ದಿನಗಳಲ್ಲಿ ಕೇಂದ್ರ ಸರ್ಕಾರದ ಮಂತ್ರಿಮಂಡಲದಲ್ಲಿ 44 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ 4 ಸಂಹಿತೆ ತಂದು ಸೌಲಭ್ಯಗಳನ್ನು ಕಸಿದು ಕೊಳ್ಳಲಾಗಿದೆ. ಕನಿಷ್ಠ ವೇತನ ರೂ 31000/- ನೀಡಲು ಕಾರ್ಮಿಕ ವರ್ಗ ಹೋರಾಟ ನಡೆಸುತ್ತಿದ್ದಾರೆ ಆದರೆ ಮೋದಿಯವರು ತಳಮಟ್ಟದ ಕನಿಷ್ಠ ವೇತನ ರೂ 178/- ಕಾನೂನುಬದ್ಧ ಗೊಳಿಸಿರುವುದು ಕಾರ್ಮಿಕ ವರ್ಗದ ಬಗ್ಗೆ ಬಿಜೆಪಿ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಮುಖಂಡರಾದ ಶೇಖರ ಬಂಗೇರ ವಹಿಸಿದ್ದರು. ವಿಮಾ ನೌಕರರ ಸಂಘದ ಉಡುಪಿ ವಿಭಾಗ ಕಾರ್ಯದರ್ಶಿ ಪ್ರಭಾಕರ್ ಕುಂದರ್, AIBEA ಕಾರ್ಯದರ್ಶಿ ನಾಗೇಶ್ ನಾಯಕ್,AITUC ಮುಖಂಡರಾದ ಶಿವನಂದ,INTUC ಜಿಲ್ಲಾ ಅಧ್ಯಕ್ಷ ಕಿರಣ್ ಹೆಗ್ಡೆ ಉಪಸ್ಥಿತರಿದ್ದರು.
ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್. ಎಸ್ ಕಾಂಚನ್ ಸ್ವಾಗತ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಕಟ್ಟಡ ಸಂಘದ ಜಿಲ್ಲಾ ಕಾರ್ಯದರ್ಶಿ ಶಶಿಧರ ಗೊಲ್ಲ ವಂದಿಸಿದರು.