ನಾಲ್ಕು ವರ್ಷಗಳಿಂದ ಬಡ ಮಹಿಳೆಯ ಮನೆಗೆ ‘ಬೆಳಕು’ ಯೋಜನೆಯಲ್ಲಿ ಸಂಪರ್ಕ ನೀಡದೇ ಸತಾಯಿಸುತ್ತಿರುವ ಮೆಸ್ಕಾಂ

Update: 2023-08-08 13:31 GMT

ಉಡುಪಿ: ಆರ್ಥಿಕವಾಗಿ ತೀರಾ ಹಿಂದುಳಿದವರಿಗಾಗಿ ಕರ್ನಾಟಕ ಸರಕಾರ ರೂಪಿಸಿರುವ ‘ಬೆಳಕು’ ಯೋಜನೆಯಡಿ ಗುರುತಿಸಲ್ಪಟ್ಟು, ಮನೆಯ ವಯರಿಂಗ್ ಮಾಡಿಸಿ ನಾಲ್ಕು ವರ್ಷ ಕಳೆದರೂ ಮೆಸ್ಕಾಂ ಅಧಿಕಾರಿಗಳು ಫಲಾನುಭವಿ ಬಡ ಮಹಿಳೆಯೋರ್ವರಿಗೆ ವಿದ್ಯುತ್ ಸಂಪರ್ಕ ನೀಡದೇ ಸತಾಯಿಸುತ್ತಿರುವ ಶಿಕ್ಷಾರ್ಹ ಪ್ರಕರಣವೊಂದು ಕುಂದಾಪುರ ತಾಲೂಕಿನ ಸೌಕೂರು ಎಂಬ ತೀರಾ ಗ್ರಾಮೀಣ ಪ್ರದೇಶದಿಂದ ವರದಿಯಾಗಿದೆ.

ಇಡೀ ಪ್ರಕರಣದಲ್ಲಿ ಆಶ್ಚರ್ಯದ ವಿಷಯವೆಂದರೆ, ಜಿಲ್ಲಾಧಿಕಾರಿಗಳು ಸೇರಿದಂತೆ ಮೂರು ನ್ಯಾಯಾಧಿಕರಣಗಳು ತನಿಖೆ ನಡೆಸಿ ಆದೇಶ ನೀಡಿದ ಮೇಲೂ ಪಕ್ಕದ ಮನೆಯವರ ತಕರಾರು ಇದೆ ಎಂಬ ಕ್ಷುಲ್ಲಕ ಕಾರಣ ನೀಡಿ ಮೆಸ್ಕಾಂ ಅಧಿಕಾರಿಗಳು ಸೌಕೂರಿನ ಮಾಲತಿ ದೇವಾಡಿಗರಿಗೆ ವಿದ್ಯುತ್ ಸಂಪರ್ಕವನ್ನು ನಿರಾಕರಿಸಿದ್ದಾರೆ.

ಇದೀಗ ಈ ಪ್ರಕರಣವನ್ನು ಕೈಗೆತ್ತಿಕೊಂಡು ಸಂತ್ರಸ್ಥ ಬಡ ಮಹಿಳೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ದೃಢ ಸಂಕಲ್ಪ ಮಾಡಿರುವ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನ್‌ಭಾಗ್ ಅವರು, ಪ್ರಕರಣದಲ್ಲಿ ರಾಜ್ಯ ಸರಕಾರದ ಕಲ್ಯಾಣ ಯೋಜನೆಯೊಂದರ ಅನುಷ್ಠಾನದಲ್ಲಿ ನಿರ್ಲಕ್ಷ ತೋರಿಸುವು ದರೊಂದಿಗೆ ನ್ಯಾಯಾಂಗ ನಿಂದನೆಯನ್ನೂ ಮಾಡಿರುವುದಕ್ಕಾಗಿ ಸಂಬಂಧಿತ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಸಂತೃಸ್ಥೆಗೆ ಸಂಪೂರ್ಣ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ.

ಸಂತ್ರಸ್ಥೆ ಮಾಲತಿ ದೇವಾಡಿಗ ಹಾಗೂ ಅವರ ಪತಿ ರಿಕ್ಷಾ ಚಾಲಕ ಗಣೇಶ್ ದೇವಾಡಿಗರ ಉಪಸ್ಥಿತಿಯಲ್ಲಿ ಇಂದು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಡಾ. ರವೀಂದ್ರನಾಥ ಶಾನ್‌ಭಾಗ್ ಅವರು, ಸರಕಾರವೊಂದು ಬಡವರಿಗಾಗಿ ತರುವ ಯೋಜನೆಯೊಂದು ‘ಅಧಿಕಾರಿ’ಯೊಬ್ಬರ ಸ್ವೇಚ್ಛಾಚಾರಕ್ಕೆ ಸಿಕ್ಕಿ ಹೇಗೆ ಅರ್ಹ ಜನರಿಗೆ ನಿರಾಕರಿಸ್ಪಡುತ್ತಿದೆ ಎಂಬುದನ್ನು ಎಳೆಎಳೆಯಾಗಿ ತೆರೆದಿಟ್ಟರು.

ಪ್ರಕರಣದ ಹಿನ್ನೆಲೆ: ಹಿಂದೆ ರಿಕ್ಷಾ ಚಾಲಕರಾಗಿದ್ದು, ವಯಸ್ಸಿನ ಕಾರಣಕ್ಕೆ ಈಗ ಕೆಲಸ ಮಾಡಲು ಅಶಕ್ತರಾಗಿರುವ ಗಣೇಶ್ ದೇವಾಡಿಗ ಹಾಗೂ ಮಾಲತಿಯವರು ಕುಂದಾಪುರ ತಾಲೂಕಿನ ತೀರಾ ಹಿಂದುಳಿದ ಪ್ರದೇಶವಾದ ಮಲೆನಾಡು ತಪ್ಪಲಿನ ಸೌಕೂರಿನ ನಿವಾಸಿಗಳು. ಇಬ್ಬರು ಹಿರಿಯ ನಾಗರಿಕರಾಗಿರುವ ಬಿಪಿಎಲ್ ಕುಟುಂಬವಿದು. ಸುಮಾರು 50 ವರ್ಷಗಳ ಹಿಂದೆ ಮಾಲತಿಯ ತಾಯಿ ಸುಬ್ಬು ದೇವಾಡಿಗರ ಪಾಲಿಗೆ ಈ ಹಿರಿಯರ ಮನೆ ಬಂದಿತ್ತು. ಊರಿಗೆಲ್ಲಾ ಕರೆಂಟು ಬಂದಿದ್ದರೂ ವಿದ್ಯುತ್ ಸಂಪರ್ಕ ಪಡೆಯುವ ತಾಕತ್ತು ಸುಬ್ಬಮ್ಮನವರಿಗೆ ಇರಲಿಲ್ಲ. 2010ರಲ್ಲಿ ಸಾಯುವವರೆಗೂ ಸುಬ್ಬಮ್ಮನವರ ಜೀವನ ಕತ್ತಲಲ್ಲಿಯೇ ಕಳೆಯಿತು. ಆಕೆಯ ಮರಣ ನಂತರ ಮನೆ ಅವರ ಮಗಳಾದ ಮಾಲತಿ ಪಾಲಿಗೆ ಬಂತು.

ಅದುವರೆಗೂ ಮುಂಬೈಯಲ್ಲಿ ಕೂಲಿನಾಲಿ ಮಾಡಿಕೊಂಡಿದ್ದ ಮಾಲತಿಯ ಸಂಸಾರ 2019ರಲ್ಲಿ ಸೌಕೂರಿಗೆ ಬಂದಿಳಿಯಿತು. ಅದೇ ವರ್ಷ ಕರ್ನಾಟಕ ಸರಕಾರದ ಬೆಳಕು ಯೋಜನೆ ಅಡಿ ಫಲಾನುಭವಿಯಾಗಿ ಮಾಲತಿ ಆಯ್ಕೆಯಾದರು. ಮನೆಯ ಕಾಂಪೌಂಡ್ ಪಕ್ಕದಲ್ಲಿಯೇ ವಿದ್ಯುತ್ ಕಂಬವಿತ್ತು. ಸ್ವಂತ ಖರ್ಚಿನಲ್ಲಿ ವಿದ್ಯುತ್ ವಯರಿಂಗ್ ಮುಗಿಸಿ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ಅಧಿಕಾರಿಗಳು ಬಂದಾಗ ಪಕ್ಕದ ಮನೆಯ, ಇವರ ದಾಯಾದಿಗಳೇ ಆಗಿರುವ ವಾಸುದೇವ ದೇವಾಡಿಗರು ಆಕ್ಷೇಪ ವ್ಯಕ್ತಪಡಿಸಿದರು. ತನಗೆ ಸೇರಿದ ಜಮೀನಿನ ಒಂದು ಭಾಗದ ಮೇಲೆ ವಿದ್ಯುತ್ ತಂತಿ ಹಾದು ಹೋಗುತ್ತದೆ ಎಂಬ ಕಾರಣ ನೀಡಿ ಆಕ್ಷೇಪಣೆ ಸಲ್ಲಿಸಿದ ಕಾರಣ ವಿದ್ಯುತ್ ಸಂಪರ್ಕ ನೀಡಲು ಬಂದ ಅಧಿಕಾರಿಗಳು ಹಿಂದಿರುಗಿದರು.

ಜಿಲ್ಲಾಧಿಕಾರಿಗೆ ದೂರು: ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಹೊಣೆ ಹೊತ್ತ ಮೆಸ್ಕಾಂ ಅಧಿಕಾರಿಗಳು ಭಾರತೀಯ ವಿದ್ಯುತ್ ಕಾಯ್ದೆಯ 164 ಸೆಕ್ಷನ್ ಅಡಿಯಲ್ಲಿ ಉಡುಪಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ಸಮಸ್ಯೆ ಪರಿಹಾರಕ್ಕೆ ನಿರ್ದೇಶನ ಕೋರಿದರು.

ವಾದಿ ಪ್ರತಿವಾದಿಗಳೆಲ್ಲರಿಗೂ ನೋಟಿಸು ನೀಡಿ, ಲಿಖಿತ ಹೇಳಿಕೆ ಪಡೆದು ತನಿಖೆ ನಡೆಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ 2020ರ ಏಪ್ರಿಲ್ ತಿಂಗಳಲ್ಲಿ ಪ್ರತಿವಾದಿಗಳ ಎಲ್ಲಾ ಆಕ್ಷೇಪಗಳನ್ನು ವಜಾಗೊಳಿಸಿ ತೀರ್ಪು ನೀಡಿದರು. ಆಕ್ಷೇಪದಾರರ ಸ್ವತ್ತುಗಳಿಗೆ ಹಾನಿಯಾಗದಂತೆ ಎಚ್ಚರವಹಿಸಿ ಮಾಲತಿಯವರಿಗೆ ಸಂಪರ್ಕ ನೀಡಲು ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟವಾಗಿ ಆದೇಶಿಸಿದರು.

ನ್ಯಾಯಾಲಯದಲ್ಲಿ ಅಪೀಲು: ಜಿಲ್ಲಾಧಿಕಾರಿಗಳ ಆದೇಶ ಪಡೆದ ವಾಸುದೇವ ದೇವಾಡಿಗರು ಅದನ್ನು ಒಪ್ಪದೇ ವಿದ್ಯುತ್ ಸಂಪರ್ಕ ನೀಡಲು ತಡೆಯಾಜ್ಞೆ ಕೋರಿ ಕುಂದಾಪುರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ವಿಚಾರಣೆ ನಡೆಸಿದ ನ್ಯಾಯಾಲಯವು 2022ರ ಜು.16ರಂದು ತಡೆಯಾಜ್ಞೆ ಕೋರಿ ಸಲ್ಲಿಸಿದ ಈ ಅರ್ಜಿಯನ್ನೂ ತಿರಸ್ಕರಿಸಿತು. ಹಠಬಿಡದ ವಾಸುದೇವ ದೇವಾಡಿಗರು ಈ ಆದೇಶದ ಮೇಲೆ ಪುನಃ ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದರು. 2022ರ ಅಕ್ಟೋಬರ್ 14ರಂದು ಹಿರಿಯ ನ್ಯಾಯಾಲಯವೂ ಅವರ ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿತು.

ಸಂತ್ರಸ್ತೆ ಮಾಲತಿ ತನ್ನ ಪರವಾಗಿ ಬಂದಿದ್ದ ಈ ಮೇಲಿನ ಎಲ್ಲಾ ಮೂರು ಆದೇಶಗಳನ್ನು ಲಗ್ತೀಕರಿಸಿ 2022ರ ನವೆಂಬರ್ ತಿಂಗಳಲ್ಲಿ ಬರೆದ ಪತ್ರಕ್ಕೂ ಮೆಸ್ಕಾಂ ಅಧಿಕಾರಿಗಳು ಸ್ಪಂದಿಸಲಿಲ್ಲ.

ಪ್ರತಿಷ್ಠಾನಕ್ಕೆ ದೂರು: ಬೇರೆ ದಾರಿ ಕಾಣದೇ ಸಂತ್ರಸ್ಥೆ ಮಾಲತಿ ಅದೇ ಡಿಸೆಂಬರ್ ತಿಂಗಳಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ವನ್ನು ಆಶ್ರಯಿಸಿದರು. ಮಾಲತಿ ನೀಡಿದ ಎಲ್ಲಾ ದಾಖಲೆಗಳನ್ನು ಲಗ್ತೀಕರಿಸಿ ಮೆಸ್ಕಾಂನ ಕೆಳಗಿನ ಹಾಗೂ ಮೇಲಿನ ಅಧಿಕಾರಿಗಳಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ಇನ್ನಾವುದೇ ಸಬೂಬು ಹೇಳದೆ ಈ ಕೂಡಲೇ ಮಾಲತಿ ಅವರ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಪ್ರತಿಷ್ಠಾನ ಆಗ್ರಹಿಸಿತು. ಆದರೆ ಕಳೆದ 10 ತಿಂಗಳುಗಳಿಂದ ಮೆಸ್ಕಾಂನ ಮೇಲಿನ ಹಾಗೂ ಕೆಳಗಿನ ಅಧಿಕಾರಿಗಳು ಪರಸ್ಪರ ಪತ್ರಗಳ ಮೇಲೆ ಪತ್ರ ಬರೆದು ಕೈತೊಳೆದು ಕೊಳ್ಳುತ್ತಿದ್ದಾರೆಯೇ ಹೊರತು ಯಾರೂ ವಿದ್ಯುತ್ ಸಂಪರ್ಕ ನೀಡಲು ಮುಂದಾಗುತ್ತಿಲ್ಲ ಎಂದು ಡಾ.ಶಾನ್‌ಭಾಗ್ ದೂರಿದರು.

ಪರಿಹಾರಕ್ಕೆ ಕೋರಿಕೆ: ಈ ಅನ್ಯಾಯದ ವಿರುದ್ಧ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಹಾಗೂ ನ್ಯಾಯಾಂಗ ನಿಂದನಾ ದಾವೆ ಹೂಡಲು ಸಂತ್ರಸ್ತೆ ಮಾಲತಿ ಅವರಿಗೆ ಪ್ರತಿಷ್ಠಾನದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದ ಅವರು, ಇನ್ನು ಮುಂದೆ ಯಾವುದೇ ಅಧಿಕಾರಿ ಇಂತಹ ಅನ್ಯಾಯ ಮಾಡದಿರುವಂತೆ ನೋಡಿಕೊಳ್ಳಲು ಈ ಮೇಲಿನ ಮೂರು ದಾವೆಗಳಲ್ಲಿ ಮಾಲತಿ ದೇವಾಡಿಗ ಅನಾವಶ್ಯಕವಾಗಿ ವ್ಯಯಿಸಿದ ಪ್ರತಿಯೊಂದು ರೂಪಾಯಿಯನ್ನು ಇದಕ್ಕೆ ಕಾರಣೀಕರ್ತರಾದವರಿಂದ ವಸೂಲಿ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಪ್ರಜೆಗಳ ಪ್ರಶ್ನಾತೀತ ಹಕ್ಕು

ಕಳೆದ 43 ವರ್ಷಗಳಿಂದ ಪ್ರತಿಷ್ಠಾನ ಇಂತಹ ನೂರಾರು ಪ್ರಕರಣಗಳನ್ನು ಗಮನಿಸಿದೆ ಎಂದು ಡಾ.ಶಾನ್‌ಭಾಗ್ ತಿಳಿಸಿದರು. ನಮ್ಮ ಹಳ್ಳಿಗಳಲ್ಲಿ ಜಮೀನುಗಳು ಏರು-ತಗ್ಗುಗಳಿಂದ ಕೂಡಿರುವುದರಿಂದ ಅವನ್ನು ಪಾಲುಗಳನ್ನಾಗಿ ವಿಂಗಡಿಸುವಾಗ ಅಡ್ಡಾದಿಡ್ಡಿಯಾಗಿ ಭಾಗ ಮಾಡುವುದು ಅನಿವಾರ್ಯ. ಪಾಲು ಪಡೆದ ಪ್ರತಿಯೊಬ್ಬರಿಗೂ ವಿದ್ಯುತ್ ಸಂಪರ್ಕ ನೀಡುವಾಗ ಇತರರಿಗೆ ಸೇರಿದ ಜಮೀನಿನ ಅಲ್ಪಸ್ವಲ್ಪ ಭಾಗದ ಮೇಲೆ ವಿದ್ಯುತ್ ತಂತಿ ಹಾದು ಹೋಗುವುದು ಸಾಮಾನ್ಯ. ಇಂತಹ ಪ್ರಕರಣಗಳಲ್ಲಿ ಸಂಪರ್ಕ ನೀಡುವ ಮೊದಲು ನೆರೆಹೊರೆಯವರಿಂದ ಅನುಮತಿ ಪತ್ರ ಬೇಕೆಂದು ಶರತ್ತು ವಿಧಿಸುವುದೂ ಅಧಿಕಾರಿಗಳ ಕರ್ತವ್ಯ.

ಒಂದು ವೇಳೆ ತಕರಾರು ಬಂದಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ನಿರ್ದೇಶನ ಪಡೆಯಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ ತನಿಖೆ ಬಳಿಕ ನೀಡುವ ತೀರ್ಪೇ ಅಂತಿಮವಾಗಿರುತ್ತದೆ.ಒಮ್ಮೆ ನ್ಯಾಯಾಧೀಕರಣದ ತೀರ್ಪು ಪಡೆದ ಮೇಲೆ ಆ ತೀರ್ಪನ್ನು ಅಕ್ಷರಶ: ಪಾಲಿಸುವುದು ಅಧಿಕಾರಿಗಳ ಕರ್ತವ್ಯ.ಇಂತಹ ಆದೇಶಗಳನ್ನು ಪಾಲಿಸಿದಿದ್ದಲ್ಲಿ ಅದು ನ್ಯಾಯಾಂಗ ನಿಂದನೆ ಎನಿಸಿ ಸಂಬಂಧಿತ ಅಧಿಕಾರಿ ಶಿಕ್ಷಾರ್ಹ ರಾಗುವರು.

ಈ ಪ್ರಕರಣದಲ್ಲಿ ಸಂತ್ರಸ್ಥೆ ಮಾಲತಿ ಮೂರು ನ್ಯಾಯಾಲಯಗಳಲ್ಲಿ ತನ್ನ ಪರವಾಗಿ ತೀರ್ಪು ಪಡೆದಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಇದನ್ನು ಪಾಲಿಸದಿರುವುದು ನ್ಯಾಯಾಂಗ ನಿಂದನೆ ಎನಿಸಿಕೊಳ್ಳುತ್ತದೆ. ಅಲ್ಲದೇ ಸರಕಾರದ ಕಲ್ಯಾಣ ಕಾರ್ಯಕ್ರಮದ ಅನುಷ್ಠಾನದ ದಿವ್ಯ ನಿರ್ಲಕ್ಷ್ಯವೂ ಆಗಿದೆ.

ಸಚಿವ ಎಚ್.ಕೆ.ಪಾಟೀಲ್‌ಗೆ ವರದಿ

ಕಳೆದ ವಾರ ಉಡುಪಿಗೆ ಆಗಮಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಪ್ರತಿಷ್ಠಾನದ ಕಚೇರಿಗೆ ಭೇಟಿ ನೀಡಿದ್ದಾಗ, ಈ ಬಗ್ಗೆ ಅವರ ಗಮನ ಸೆಳೆಯಎಲಾಗಿತ್ತು. ಈ ಪ್ರಕರಣದ ಕುರಿತು ವಿವರವಾದ ವರದಿಯನ್ನು ನನಗೆ ಸಲ್ಲಿಸಿ ಎಂದವರು ಸೂಚಿಸಿದಂತೆ ಅವರಿಗೆ ಸಮಗ್ರ ವರದಿ ನೀಡಲಾಗಿದೆ ಎಂದು ಡಾ.ಶಾನ್‌ಭಾಗ್ ತಿಳಿಸಿದ್ದಾರೆ.

"ಈ ಪ್ರಕರಣದಲ್ಲಿ ಮೆಸ್ಕಾಂ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡುವುದು ಮಾತ್ರವಲ್ಲ, ಬಡ ಬಿಪಿಎಲ್ ಕುಟುಂಬದಿಂದ ಅನಾವಶ್ಯಕವಾಗಿ ನ್ಯಾಯಾಲಯದ ಖರ್ಚಿಗೆಂದು ಸಾವಿರಾರು ರೂ. ವ್ಯಯಿಸುವಂತೆ ಮಾಡಿದ ತಪ್ಪಿತಸ್ಥ ಅಧಿಕಾರಿಯೇ ಸಂಪೂರ್ಣ ಮೊತ್ತ ಪಾವತಿಸುವಂತೆ ಕೋರ್ಟಿಗೆ ಮನವರಿಕೆ ಮಾಡುವೆ. ಮುಂದೆ ಯಾವುದೇ ಅಧಿಕಾರಿ ಇಂಥ ತಪ್ಪು ಮಾಡಬಾರದು".

-ಡಾ.ರವೀಂದ್ರನಾಥ ಶಾನ್‌ಭಾಗ್, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರು




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News