ಹಿಂದುತ್ವ ಲೂಟಿಕೋರರ ವಿರುದ್ಧ ಕೋರೆಗಾಂವ್ ಮಾದರಿ ಹೋರಾಟ ಅಗತ್ಯ: ಜಯನ್ ಮಲ್ಪೆ

Update: 2024-01-01 10:25 GMT

ಉಡುಪಿ, ಜ.1: ಭಾರತದ ಇತಿಹಾಸವು ವರ್ಗ ಮತ್ತು ಜಾತಿ ಸಂಘರ್ಷಗಳಿಂದ ತುಳುಕಿದೆ. ಈ ಹಿನ್ನಲೆಯಲ್ಲಿ ಭೀಮಾನದಿ ತೀರದಲ್ಲಿ ನಡೆದ ಕೋರೆಗಾಂವ್ ಯುದ್ಧ ದಲಿತ ಲೋಕದ ವೀರರ ಹಬ್ಬ ಎಂದು ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ 206ನೇ ಶೌರ್ಯ ದಿನದ ವಿಜಯೋತ್ಸವ ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕೋರೆಗಾಂವ್ ಯುದ್ಧದ ಪೂರ್ತಿ ಸತ್ಯವನ್ನು ನಮ್ಮ ಇತಿಹಾಸದ ಪಠ್ಯಗಳು ಎಲ್ಲೂ ಹೇಳಲಾರವು. ಕಾರಣ ಇದು ಭಾರತದ ಮನುವಾದಿಗಳ ನಿಜ ಬಣ್ಣವನ್ನು ತಿಳಿಸುತ್ತದೆ. ಪ್ರಸಕ್ತ ದೇಶದಲ್ಲಿ ನಡೆಯುವ ಹಿಂದುತ್ವ ಲೂಟಿಕೋರರಿಂದ ಸೃಷ್ಟಿಯಾಗಿರುವ ಈ ಹೊಸ ಪೇಶ್ವೆಗಳ ವಿರುದ್ಧ ದಲಿತ ಯುವ ಜನಾಂಗ ಕೋರೆಗಾಂವ್ ಮಾದರಿಯಲ್ಲಿ ಹೋರಾಡಲೇ ಬೇಕಾಗಿದೆ ಎಂದು ಜಯನ್ ಮಲ್ಪೆ ಹೇಳಿದರು.

ಅಂಬೇಡ್ಕರ್ ಯುವಸೇನೆಯ ಕಾಪು ಅಧ್ಯಕ್ಷ ಲೋಕೇಶ್ ಪಡುಬಿದ್ರೆ ಮಾತನಾಡಿ, ಕೋರೆಗಾಂವ್ ಯುದ್ಧದ ಗೆಲುವು ಇತಿಹಾಸದಲ್ಲಿ ಬ್ರಾಹ್ಮಣಶಾಹಿಗಳು ದಲಿತರನ್ನು ನಡೆಸಿಕೊಂಡ ರೀತಿಗೆ ಸರಿಯಾದ ಉತ್ತರವಾಗಿದೆ. ಅದಲ್ಲದೆ ಭಾರತೀಯರನ್ನು ಹಾಳು ಮಾಡಿರುವುದು ನಮ್ಮ ದೇಶದ ಜಾತಿ ವ್ಯವಸ್ಥೆ, ಅಸ್ಪಶ್ಯತೆ, ಶೋಷಣೆಯನ್ನು ಪೋಷಿಸುತ್ತಿರುವ ಮೂಲಗಳಾಗಿವೆ ಎಂಬುದನ್ನು ದೃಢಪಡಿಸುತ್ತದೆ ಎಂದು ಹೇಳಿದರು.

ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿ, ಅಂಬೇಡ್ಕರ್ ಕೋರೆಗಾಂವ್ ನಲ್ಲೊಂದು ಸಮಾವೇಶ ಮಾಡಿಸಿ ದಲಿತರ ಸ್ವಾಭಿಮಾನ ಸೂಚಿಸುವ, ಅದರ ಕೆಚ್ಚೆದೆಯನ್ನು ತಿಳಿಸುವ ಯುದ್ಧವನ್ನು ನಮಗೆಲ್ಲ ಪರಿಚಯಿಸದೇ ಇದ್ದಿದ್ದರೆ ಇಂದು ನಮಗೆ ಇತಿಹಾಸದಲ್ಲಿನ ಒಂದು ದಿಗ್ವಿಜಯವನ್ನೇ ಮರೆತಂತಾಗುತ್ತಿತ್ತು ಎಂದು ತಿಳಿಸಿದರು.

ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಲ್ಯಾನ್ ಮಾತನಾಡಿ, ಈ ದೇಶದಲ್ಲಿ ಬ್ರಾಹ್ಮಣರು ತಲೆತಲಾಂತರದಿಂದ ಅಕ್ಷರವನ್ನು ಸಂಸ್ಕೃತ ಭಾಷೆಯಲ್ಲಿ ತಮಗೆ ಮಾತ್ರ ತಿಳಿಯುವಂತೆ ರಚಿಸಿಕೊಂಡು ಇತರರಿಗೆ ವೇದವನ್ನು ಓದಬಾರದು, ಕೇಳಬಾರದು, ಮನನ ಮಾಡಬಾರದು ಎಂದು ಕಟ್ಟಪ್ಪಣೆ ವಿಧಿಸಿ ಅದನ್ನು ಮೀರಿದರೆ ಕೊಲ್ಲುತ್ತ ಸಾಗಿದ್ದಾರೆ. ಇವರು ನಮ್ಮ ದೇಶದ ಇತಿಹಾಸವನ್ನು ಸಹ ಅವರಿಗೆ ಬೇಕಾದಂತೆ ಬರೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕೃಷ್ಣ ಬಂಗೇರ ಪಡುಬಿದ್ರೆ, ಸಂತೋಷ್ ಕಪ್ಪೆಟ್ಟು, ದಯಾಕರ್ ಮಲ್ಪೆ, ಮಾಧವ ಕರ್ಕೆರ ಪಾಳೆಕಟ್ಟೆ, ಸಾಧು ಚಿಟ್ಪಾಡಿ, ಕೃಷ್ಣ ಶ್ರೀಯಾನ್ ಮಲ್ಪೆ, ರವಿರಾಜ್ ಲಕ್ಷ್ಮೀನಗರ, ನವೀನ್ ಬನ್ನಂಜೆ, ವಿಶು ಪಾಳೆಕಟ್ಟೆ, ಪ್ರಸಾದ್ ಮಲ್ಪೆ, ವಿನಯ ಕೊಡಂಕೂರು, ವಸಂತ ಪಾದೆಬೆಟ್ಟು, ನಿಶಾನ್ ಲಕ್ಷ್ಮೀನಗರ, ರಿತೇಶ್ ಕೆಮ್ಮಣ್ಣು, ಕೌಶಿಕ್ ಪಡುಕುದ್ರು, ನವೀನ್ ಕುಂಜ್ಜಿಬೆಟ್ಟು, ಸುರೇಶ್ ಚಿಟ್ಪಾಡಿ, ಸುಕೇಶ್ ಪುತ್ತೂರು, ಸುರೇಶ್ ಎಂ. ನೆರ್ಗಿ, ವಸಂತ ಅಂಬಲಪಾಡಿ, ಅರುಣ್ ಸಾಲ್ಯಾನ್ ನೆರ್ಗಿ, ನಾಗೇಶ್ ಮಲ್ಪೆ, ದೀಪಕ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

ಸುಶೀಲ್ ಕುಮಾರ್ ಸ್ವಾಗತಿಸಿದರು, ಬಿ.ಎನ್.ಪ್ರಶಾಂತ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News