ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕರಾಗಿ ಡಾ.ಚೆರಿಯನ್ ವರ್ಗೀಸ್

Update: 2024-07-06 15:24 GMT

ಮಣಿಪಾಲ, ಜು.6: ಮಣಿಪಾಲದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ನೂತನ ನಿರ್ದೇಶಕ ಮತ್ತು ಪ್ರಾಧ್ಯಾಪಕರಾಗಿ ಡಾ. ಚೆರಿಯನ್ ವರ್ಗೀಸ್ ಅವರನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನಿಯುಕ್ತಿಗೊಳಿಸಿದೆ.

ಡಾ.ವರ್ಗೀಸ್ ಅವರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ (ಡಬ್ಲ್ಯುಎಚ್‌ಒ) ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದು, ಅಲ್ಲಿ ಅಸಾಂಕ್ರಾಮಿಕ ರೋಗಗಳು (ನಾನ್ ಕಮ್ಯುನಿಕೇಬಲ್ ಡಿಸೀಸ್) ಮತ್ತು ನಿರ್ಧಾರಕಗಳ ವಿಭಾಗದ ಸಂಚಾಲಕರಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಹೊಸದಿಲ್ಲಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿ ಯಲ್ಲಿ ಆರೋಗ್ಯವಂತ ಜನಸಮುದಾಯ ಮತ್ತು ಅಸಾಂಕ್ರಾಮಿಕ ರೋಗಗಳು ವಿಭಾಗದ ಪ್ರಭಾರ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು.

ಡಾ.ಚೆರಿಯನ್ ವರ್ಗೀಸ್ ಅಧಿಕಾರವಧಿಯಲ್ಲಿ ಹೃದಯದ ರಕ್ತನಾಳದ ರೋಗ ನಿಯಂತ್ರಣ ಕಾರ್ಯಕ್ರಮವಾದ ಸೀಹಾರ್ಟ್ಸ್ ಮತ್ತು ಈ ವಲಯದಲ್ಲಿ ಕ್ಯಾನ್ಸರ್ ರೋಗ ನಿಯಂತ್ರಣದ ಸೀಕ್ಯಾನ್‌ಗ್ರಿಡ್ ಕಾರ್ಯಕ್ರಮದ ಅಭಿವೃದ್ಧಿಗೆ ಪ್ರಯತ್ನಿಸಿದ್ದರು.

ಕೇರಳ ವಿಶ್ವವಿದ್ಯಾನಿಲಯದಲ್ಲಿ 1985ರಲ್ಲಿ ಎಂಬಿಬಿಎಸ್ ಪದವಿ ಪಡೆದ ಡಾ.ವರ್ಗೀಸ್, ಮೆಡಿಕಲ್ ರೇಡಿಯೋಥೆರಪಿಯಲ್ಲಿ ಡಿಪ್ಲೋಮಾ ಹಾಗೂ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಿಂದ ರೇಡಿಯೇಷನ್ ಆಂಕಾಲಜಿಯಲ್ಲಿ ಎಂಡಿ ಪದವಿ ಪಡೆದಿದ್ದರು. ಅವರು ಕೇಂಬ್ರಿಡ್ಜ್ ವಿವಿಯಿಂದ ಎಂಫಿಲ್ ಹಾಗೂ ಫಿನ್ಸೆಂಡಿನ ತಾಂಪರೆ ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿ ದ್ದರು. 1990ರಲ್ಲಿ ತಿರುವನಂತಪುರಂ ಪ್ರಾದೇಶಿಕ ಕ್ಯಾನ್ಸರ್ ಸೆಂಟರ್‌ನಲ್ಲಿ ತನ್ನ ವೃತಿ ಜೀವನ ಆರಂಭಿಸಿದ್ದ ಅವರು 2001ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು.

ಶೈಕ್ಷಣಿಕ ನಿಯತಕಾಲಿಕೆಗಳಲ್ಲಿ 90ಕ್ಕೂ ಅಧಿಕ ಪ್ರಕಟಣೆಗಳನ್ನು ಹೊಂದಿರುವ ಡಾ.ವರ್ಗೀಸ್ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಮತ್ತು ಫೆಲೋಶಿಪ್‌ಗಳಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News