ತೆಂಕನಿಡಿಯೂರು ಗ್ರಾಪಂ ಸಮಸ್ಯೆಗೆ ಬಿಜೆಪಿ ನೇರ ಹೊಣೆ: ಅಧ್ಯಕ್ಷೆ ಶೋಭಾ ನಾಯ್ಕ್ ಆರೋಪ

Update: 2024-07-06 16:09 GMT

ಉಡುಪಿ, ಜು.6: 2015ರಿಂದ ಎರಡು ಅವಧಿಗೆ ತೆಂಕನಿಡಿಯೂರು ಗ್ರಾಮ ಪಂಚಾಯತ್‌ನಲ್ಲಿ ಅಸ್ತಿತ್ವದಲ್ಲಿದ್ದ ಬಿಜೆಪಿ ಬೆಂಬಲಿತ ಆಡಳಿತವೇ ತೆಂಕನಿಡಿಯೂರು ಗ್ರಾಪಂನಲ್ಲಿ ವಿವಾದಕ್ಕೆ ಕಾರಣವಾಗಿರುವ ಎಸ್‌ಎಲ್‌ಆರ್‌ಎಂ ಘಟಕದ ನಿರ್ಮಾಣಕ್ಕೆ ಹೊಣೆಯಾಗಿದ್ದು, ತಾವು ಮಾಡಿದ ತಪ್ಪನ್ನು ಮುಚ್ಚಿಹಾಕಲು ಈಗ ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ವನ್ನು ಬಿಜೆಪಿ ಬೆಂಬಲಿತ ಸದಸ್ಯರು ಮಾಡುತಿದ್ದಾರೆ ಎಂದು ತೆಂಕ ನಿಡಿಯೂರು ಗ್ರಾಪಂ ಅಧ್ಯಕ್ಷ ಶೋಭಾ ಡಿ.ನಾಯ್ಕ್ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ನಾಯ್ಕ್, ಗ್ರಾಪಂ ಕಚೇರಿ ಎದುರು ಬಿಜೆಪಿ ಬೆಂಬಲಿತ ಸದಸ್ಯರು ಕೆಲ ಗ್ರಾಮಸ್ಥರೊಂದಿಗೆ ಸೇರಿ ಈ ಬಗ್ಗೆ ನಡೆಸಿದ ಪ್ರತಿಭಟನೆಯ ಕುರಿತು ಅವರು ಸ್ಪಷ್ಟೀಕರಣ ನೀಡುತಿದ್ದರು.

ತೆಂಕನಿಡಿಯೂರು ಗ್ರಾಪಂನಲ್ಲಿ 2015ರಿಂದ ಬಿಜೆಪಿ ಬೆಂಬಲಿತ ಆಡಳಿತವಿದೆ. ಇದಕ್ಕೆ ಮುನ್ನ ಇಲ್ಲಿ ಕಾಂಗ್ರೆಸ್ ಬೆಂಬಲಿತರ ಆಡಳಿತವಿತ್ತು. 2010ರಲ್ಲಿ ಗ್ರಾಪಂಗೆ ಗ್ರಾಮ ವಿಕಾಸ ಯೋಜನೆಯಡಿ 75 ಲಕ್ಷ ರೂ.ಅನುದಾನ ಮಂಜೂ ರಾಗಿದ್ದು, ಅದರಲ್ಲಿ ಶೇ.10ನ್ನು ತ್ಯಾಜ್ಯ ನಿರ್ವಹಣೆ ಗಾಗಿ ಮೀಸಲಿಡಲಾಗಿತ್ತು. 2013ರಲ್ಲಿ ಗ್ರಾಪಂ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ ಕೆಳಾರ್ಕಳಬೆಟ್ಟು ವಾರ್ಡಿನಲ್ಲಿ ಬೋರ್‌ವೆಲ್ ನಿರ್ಮಿಸಲಾಗಿತ್ತು ಎಂದು ವಿವರಿಸಿದರು.

2015ರಿಂದ ಆಡಳಿತ ನಡೆಸಿದ ಬಿಜೆಪಿ ಬೆಂಬಲಿತ ಆಡಳಿತ, 2019ರಲ್ಲಿ ಕೆಳಾರ್ಕಳಬೆಟ್ಟು ವಾರ್ಡ್‌ನಲ್ಲಿ ಸ್ಥಳೀಯ ಗ್ರಾಮಸ್ಥರ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ವಿರೋಧದ ಹೊರತಾಗಿಯೂ ತ್ಯಾಜ್ಯ ನಿರ್ವಹಣೆಯ ಎಸ್‌ಎಲ್‌ಆರ್‌ಎಂ ಘಟಕವನ್ನು ಬೋರ್‌ವೆಲ್ ಪಕ್ಕವೇ ನಿರ್ಮಿಸಿತ್ತು ಎಂದು ಕಳೆದ ಎಂಟು ತಿಂಗಳಿನಿಂದ ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಪರಿಶಿಷ್ಟ ಪಂಗಡದ ಶೋಭಾ ನಾಯ್ಕ್ ಆರೋಪಿಸಿದರು.

2019ರಿಂದ 2024ರ ಜು.2ರವರೆಗೆ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಜಮೆಯಾದ ತ್ಯಾಜ್ಯವನ್ನು ವಿಲೇವಾರಿ ಮಾಡದೇ ಕಾಲಹರಣ ಮಾಡಿದ ಬಿಜೆಪಿ ಬೆಂಬಲಿತರ ಕಿರುಕುಳದಿಂದ ಬೇಸತ್ತು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ನನ್ನ ವಿರುದ್ಧ ಅನಗತ್ಯವಾಗಿ ಆರೋಪ ಮಾಡುತಿದ್ದಾರೆ ಎಂದು ಮೀಸಲಾತಿಯ ಆಧಾರದಲ್ಲಿ ಅಧ್ಯಕ್ಷೆಯಾಗಿ ಮುಂದುವರಿದಿರುವ ಶೋಭಾ ನುಡಿದರು.

ತಾನು ಎಸ್‌ಟಿಗೆ ಸೇರಿದ ಮಹಿಳೆಯಾದ ಕಾರಣ ಹೇಗಾದರೂ ಮಾಡಿ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನದಲ್ಲಿ ತನ್ನ ವಿರುದ್ಧ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದ್ದಾರೆ. ಇದರ ವಿರುದ್ಧ ತಾನು ಮಲ್ಪೆ ಠಾಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿ ಅವರು ತಿಳಿಸಿದರು.

ಬೋರ್‌ವೆಲ್ ಇರುವ ಸ್ಥಳದ ಪಕ್ಕದಲ್ಲಿ ಎಸ್‌ಎಲ್‌ಆರ್‌ಎಂ ಘಟಕ ನಿರ್ಮಾಣ ಮಾಡಿದ್ದರಿಂದ ಅಲ್ಲಿನ ನೀರು ಕಲುಷಿತ ಗೊಂಡಿದ್ದು, ಕುಡಿಯಲು ಸಾಧ್ಯವಾಗದೇ ಜನರು ಬವಣೆ ಪಡುವಂತೆ ಮಾಡಿರುವುದು ಬಿಜೆಪಿ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಕೇವಲ ಪ್ರಚಾರಕ್ಕಾಗಿ ಪಕ್ಷದ ಕಾರ್ಯಕರ್ತರನ್ನು ಕೂರಿಸಿಕೊಂಡು ಪ್ರತಿಭಟನೆಯ ನಾಟಕವನ್ನು ಬಿಜೆಪಿ ಆಡುತ್ತಿದೆ ಎಂದವರು ಆರೋಪಿಸಿದರು.

ಇನ್ನು ಮುಂದೆ ಕಾಂಗ್ರೆಸ್‌ನ ಬೆಂಬಲದೊಂದಿಗೆ ತೆಂಕನಿಡಿಯೂರು ಗ್ರಾಮದ ಅಭಿವೃದ್ಧಿಗೆ ದುಡಿಯುತ್ತೇನೆ. ಈಗಾಗಲೇ ಗ್ರಾಮದ ತ್ಯಾಜ್ಯವನ್ನು ಬಡಗುಬೆಟ್ಟಿಗೆ ಕಳುಹಿಸಲಾಗುತ್ತಿದೆ. ಇಲ್ಲಿನ ಎಸ್‌ಎಲ್‌ಆರ್‌ಎಂ ಘಟಕದ ಸಮಸ್ಯೆಗೆ ಸೂಕ್ತ ಕ್ರಮಕೈಗೊಳ್ಳಲು ಬದ್ಧರಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತೆಂಕನಿಡಿಯೂರಿನ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರಾದ ಮಾಜಿ ಅಧ್ಯಕ್ಷ ಸುರೇಶ್ ನಾಯ್ಕ್, ಸತೀಶ್ ನಾಯ್ಕ್, ಶರತ್ ಶೆಟ್ಟಿ, ರವಿರಾಜ್, ವೆಂಕಟೇಶ ಕುಲಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News