ಮರೆಗುಳಿತನಕ್ಕೆ ವ್ಯಾಯಾಮದ ಕೊರತೆ, ಆಹಾರ ಪದ್ಧತಿ ಕಾರಣ: ಡಾ.ಪಿ.ವಿ.ಭಂಡಾರಿ

Update: 2024-09-21 12:27 GMT

ಉಡುಪಿ: ಇಂದು ಮರೆಗುಳಿತನ ಕಾಯಿಲೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ವ್ಯಾಯಾಮದ ಕೊರತೆ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆಯೇ ಈ ಕಾಯಿಲೆಗೆ ಮುಖ್ಯ ಕಾರಣ. ಹಿರಿಯ ನಾಗರಿಕರು ಕಾಡುವ ಪ್ರಮುಖ ಸಮಸ್ಯೆ ಇದಾಗಿದೆ. ಈ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ನಿಯಂತ್ರಣ ಮಾಡಬಹುದೇ ಹೊರತು ಸಂಪೂರ್ಣ ಗುಣಮುಖ ಮಾಡಲು ಸಾಧ್ಯವಿಲ್ಲ ಎಂದು ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಹಾಗೂ ಹಿರಿಯ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ಮುಂಬೈ ಕಮಲ್ ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್, ಉಡುಪಿ ಹಿರಿಯ ನಾಗರಿಕರ ಸಂಸ್ಥೆ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಉಡುಪಿ ಕರಾವಳಿ, ಮಣಿಪಾಲ ಲಯನ್ಸ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಬ್ರಹ್ಮಗಿರಿ ಐಎಂಎ ಭವನದಲ್ಲಿ ಆಯೋಜಿಸಲಾದ ವಿಶ್ವ ಅಲ್‌ ಝೈಮರ್ (ಮರೆಗುಳಿತನ) ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ.ರಾಜಲಕ್ಷ್ಮೀ ಮಾತನಾಡಿ, ಡಾ.ಅಲೈಸ್ ಅಲ್‌ಝೈಮರ್ ಎಂಬ ವೈದ್ಯರು ತನ್ನ ಮಹಿಳೆ ರೋಗಿಯಲ್ಲಿನ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಿಂದ ಈ ಮರೆ ಗುಳಿತನ ಕಾಯಿಲೆ ಯನ್ನು ಪತ್ತೆ ಹಚ್ಚಿದರು. ಹಾಗಾಗಿ ಇದಕ್ಕೆ ಅವರ ಹೆಸರನ್ನೇ ಇಡಲಾಗಿದ್ದು, ಪ್ರತಿವರ್ಷ ಈ ದಿನವನ್ನು ವಿಶ್ವ ಅಲ್‌ಝೈಮರ್ ದಿನವನ್ನಾಗಿ ಆಚರಿಸಲಾಗು ತ್ತದೆ. ಈ ಕಾಯಿಲೆಯಿಂದ ಹಿರಿಯ ನಾಗರಿಕರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ ಆ ಕುರಿತು ಮಾಹಿತಿ ಪಡೆದು ಜಾಗೃತ ರಾಗಬೇಕಾಗಿರುವುದು ಇಂದಿನ ಅಗತ್ಯ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಟಿ.ಎಂ.ಎ. ಪೈ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ.ಶಶಿಕಿರಣ್ ಯು., ಹಿರಿಯ ನಾಗರಿಕರ ಸಂಸ್ಥೆಯ ಕಾರ್ಯದರ್ಶಿ ಮುರಳೀಧರ್ ಕೆ., ಮಣಿಪಾಲ ಲಯನ್ಸ್ ಕ್ಲಬ್ ಅಧ್ಯಕ್ಷೆ ನೇತ್ರತಜ್ಞೆ ಡಾ.ಶಕೀಲಾ ಸಚಿನ್ ಮಾತನಾಡಿದರು.

ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಕೆ.ಸದಾನಂದ ಹೆಗ್ಡೆ ವಂದಿಸಿದರು. ಆಪ್ತ ಸಮಾಲೋಚಕಿ ಪದ್ಮ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

‘ಹಿರಿಯ ನಾಗರಿಕರು ನಮ್ಮ ದೇಶದ ಸಂಪತ್ತು. ಅವರೆಲ್ಲರೂ ಜ್ಞಾನದ ಗಣಿ ಗಳಾಗಿದ್ದಾರೆ. ಇವರ ಸೇವೆ ಕುಟುಂಬ ಹಾಗೂ ಸಮಾಜಕ್ಕೆ ಅತೀ ಅಗತ್ಯವಾಗಿದೆ. ಆದರೆ ಇಂದು ಮರೆಗುಳಿತನದಂತಹ ಕಾಯಿಲೆ ಹೆಚ್ಚಾಗುತ್ತಿರುವುದರಿಂದ ಹಿರಿಯ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರು ವ್ಯಾಯಾಮ, ಆಹಾರ ಮತ್ತು ನಿದ್ರೆ ಬಹಳ ಪ್ರಾಮುಖ್ಯತೆ ನೀಡಬೇಕು’

-ಡಾ.ಶಶಿಕಿರಣ್ ಯು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News