ಕಸ್ತೂರಿ ರಂಗನ್ ವರದಿ ವಿರೋಧ: ಚಿತ್ತೂರು ಗ್ರಾಪಂ ಸದಸ್ಯರಿಂದ ಉಪಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

Update: 2024-10-03 12:56 GMT

ಕುಂದಾಪುರ, ಅ.3: ಕಸ್ತೂರಿ ರಂಗನ್ ವರದಿ ವಿರೋಧಿಸಿ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮ ಪಂಚಾಯತ್‌ನ ಎಲ್ಲ 8 ಸದಸ್ಯರು ಅ.21ರಂದು ನಡೆಯಲಿರುವ ವಿಧಾನ ಪರಿಷತ್ ಉಪಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.

ಮತದಾನ ಬಹಿಷ್ಕರಿಸುವ ನಿರ್ಧಾರ ಮಾಡಿರುವ ಚಿತ್ತೂರು ಗ್ರಾಪಂ ಸದಸ್ಯರು, ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದು, ಪರಿಸರ ಸೂಕ್ಷ್ಮ ಪ್ರದೇಶ, ಬಫರ್ ಝೋನ್ ಶೂನ್ಯಕ್ಕೆ ಇಳಿಸುವುದು, ಈಗಾಗಲೇ ಪರಿಸರ ಸೂಕ್ಷ್ಮ ಪ್ರದೇ ಶದ ಬಗ್ಗೆ ಹೊರಡಿಸಿರುವ ಸುತ್ತೋಲೆಯನ್ನು ಮೂಕಾಂಬಿಕಾ ಅಭಯಾರಣ್ಯದ ಸೂಕ್ಷ್ಮಪ್ರದೇಶ ಎಂಬ ನೆಪದಿಂದ ಸಕ್ಷಮ ಪ್ರಾಧಿಕಾರದಿಂದ ವಾಣಿಜ್ಯ ಭೂಪರಿವರ್ತನೆಗೆ ಪೂರ್ವಾನುಮತಿಯನ್ನು(ಯೋಜನಾ ಪ್ರಾಧಿಕಾರ ಉಡುಪಿ) ಪಡೆಯುವ ಸೂಚನೆ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

ಚಿತ್ತೂರು ಗ್ರಾಪಂ ಅಧ್ಯಕ್ಷ ರವೀಂದ್ರ ಶೆಟ್ಟಿ ಸಹಿತ ಸದಸ್ಯರಾದ ಸುಬ್ಬು, ದಿವಾಕರ ಆಚಾರ್ಯ, ಚಂದ್ರ ಶೆಟ್ಟಿ, ಕಲಾವತಿ, ಸಿ.ಡಿ.ಮಂಜುನಾಥ್, ಜಯಂತಿ, ವಸಂತಿ ಗ್ರಾಮಸ್ಥರ ಹಿತದೃಷ್ಟಿಯಿಂದ ವಿಧಾನ ಪರಿಷತ್ ಉಪ ಚುನಾವಣೆ ಬಹಿಷ್ಕಾರದ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮನವೊಲಿಕೆಗೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಜನರಿಗೆ ಅನುಕೂಲ ಕಲ್ಪಿಸುವ ರೀತಿ ಕ್ರಮ ಅನುಸರಿಸುವ ಬಗ್ಗೆ ದೃಢವಾದ ಭರವಸೆ ನೀಡಿದಲ್ಲಿ ಮಾತ್ರ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಜನರ ಹಿತದೃಷ್ಟಿಯಿಂದ ಈ ನಿರ್ಣಯ ಮಾಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ರವೀಂದ್ರ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News