ಬಲೆಗೆ ಸಿಕ್ಕಿದ ತಿಮಿಂಗಿಲವನ್ನು ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರ ತಂಡಕ್ಕೆ ಗೌರವ

Update: 2024-10-05 11:57 GMT

ಮಲ್ಪೆ, ಅ.5: ಇತ್ತೀಚೆಗೆ ಸಮುದ್ರದಲ್ಲಿ ಮೀನುಗಾರಿಕಾ ಮಾಡುತ್ತಿದ್ದ ವೇಳೆ ಬೋಟಿನ ಬಲೆಗೆ ಅಕಸ್ಮಿಕವಾಗಿ ಸಿಲುಕಿದ ಅಳಿವಿನಂಚಿನಲ್ಲಿರುವ ವೇಲ್ ಶಾರ್ಕ್(ತಿಮಿಂಗಿಲ)ನ್ನು ಮರಳಿ ನೀರಿಗೆ ಬಿಡುಗಡೆ ಮಾಡಿದ ಮೀನುಗಾರ ತಂಡ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಈ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ಮಲ್ಪೆ ಬಂದರಿನಲ್ಲಿ ರುವ ಮೀನುಗಾರರ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.

ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರ(ಸಿಎಂಎಫ್ ಆರ್‌ಐ) ಮಂಗಳೂರು ಪ್ರಾದೇಶಿಕ ಕಚೇರಿ, ಮೀನುಗಾರಿಕೆ ಇಲಾಖೆ, ಮಂಗಳೂರು ಮೀನುಗಾರಿಕಾ ಕಾಲೇಜು ಹಾಗೂ ಕನಾರ್ಟಕ ರಾಜ್ಯ ಎಫ್‌ಐಪಿ- ಸ್ಮಾಲ್ ಪೆಲ್ಯಾಜಿಕ್ ಪರ್ಸಿನ್ ಫಿಶರೀಸ್ ಇವುಗಳ ಸಹಯೋಗ ದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಶ್ರೀದುರ್ಗಾಂಬಿಕ ಬೋಟಿನ ಕ್ಯಾಪ್ಚನ್ ಸದಾಶಿವ ಎಂ.ಮೆಂಡನ್ ಹಾಗೂ ಅವರ ತಂಡವನ್ನು ಅಭಿನಂದಿಸಲಾಯಿತು.

ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರ ಮಂಗಳೂರು ಪ್ರಾದೇಶಿಕ ಕಚೇರಿಯ ವಿಜ್ಞಾನಿ ಡಾ.ಸುಜಿತಾ ಥೋಮಸ್ ಮಾತನಾಡಿ, ಅಳಿವಿನಂಚಿನಲ್ಲಿರುವ ತಿಮಿಂಗಿಲ, ಶಾರ್ಕ್, ಕಡಲಾಮೆ ಸೇರಿದಂತೆ ವಿವಿಧ ಪ್ರಬೇಧಗಳ ಸಮುದ್ರ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡ ಲಾಗುತ್ತಿದೆ. ಈ ಜಾಗೃತಿಯ ಪರಿಣಾಮ ಇಂದು ಮಲ್ಪೆಯ ಮೀನುಗಾರರು ಅಳಿವಿನಂಚಿನಲ್ಲಿರುವ ತಿಮಿಂಗಿಲವನ್ನು ಸಮುದ್ರಕ್ಕೆ ಮರಳಿ ಬಿಟ್ಟಿದ್ದಾರೆ. ಇದು ಮಾದರಿಯಾದ ಕೆಲಸ ಆಗಿದೆ ಎಂದರು.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮಾತನಾಡಿ, ನಮ್ಮ ಮೀನುಗಾರರು ಬಲೆ ಸಿಕ್ಕಿದ ಮೀನನ್ನು ಮತ್ತೆ ಸಮುದ್ರಕ್ಕೆ ಬಿಡುವ ಮೂಲಕ ಇಡೀ ಮೀನುಗಾರ ಸಮುದಾಯಕ್ಕೆ ಗೌರವ ತಂದುಕೊಟ್ಟಿದ್ದಾರೆ. ಇದು ಇಂತಹ ಅಳಿವಿನಂಚಿನಲ್ಲಿರುವ ಮೀನುಗಳ ಬಗ್ಗೆ ಹಮ್ಮಿಕೊಳ್ಳುತ್ತ ಬರುತ್ತಿರುವ ಜನ ಜಾಗೃತಿಯ ಪರಿಣಾಮ ಎಂಬುದು ನಮಗೆ ಸಂತೃಪ್ತಿ ಮೂಡುತ್ತದೆ. ಇವರು ಎಲ್ಲರಿಗೂ ಸ್ಪೂರ್ತಿ ಹಾಗೂ ಮಾದರಿಯಾದ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಉಡುಪಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಅಂಜನಾ ದೇವಿ, ಮಲ್ಪೆ ಪರ್ಸಿನ್ ಮೀನುಗಾರಿಕಾ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಆಳಸಮುದ್ರ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಮಂಗಳೂರು ಮೀನುಗಾರಿಕಾ ಕಾಲೇಜಿನ ವಿಭಾಗ ಮುಖ್ಯಸ್ಥೆ ಡಾ.ಮೃದುಲ ರಾಜೇಶ್ ಉಪಸ್ಥಿತರಿದ್ದರು.

ಉಡುಪಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಡುಪಿ ಬಂದರು ಇಲಾಖೆಯ ಉಪನಿರ್ದೇಶಕಿ ಸವಿತಾ ಖಾದ್ರಿ ವಂದಿಸಿದರು. ಸಿಎಂಎಫ್‌ಆರ್‌ಐನ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಮೆಚ್ಚುಗೆ ಗಳಿಸಿದ ವೈರಲ್ ವಿಡಿಯೋ

ಮಲ್ಪೆ ಬಂದರಿನಿಂದ ಸುಮಾರು 15 ನಾಟೇಕಲ್ ಮೈಲು ದೂರದ 29 ಮಾರು ಆಳದ ಸಮುದ್ರದಲ್ಲಿ ಸೆ.29ರಂದು ಬೆಳಗ್ಗೆ ಪರ್ಸಿನ್ ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸುಮಾರು 2 ಟನ್ ತೂಕದ ಬೃಹತ್ ಆಕಾರದ ವೇಲ್ ಶಾರ್ಕ್ ಅಕಸ್ಮಿಕವಾಗಿ ಬಲೆ ಬಿತ್ತೆನ್ನಲಾಗಿದೆ. ಇದನ್ನು ತುಳುವಿನಲ್ಲಿ ಬೊಟ್ಟು ತ್ಯಾಟೆ, ನೀರ್ ಕುಲೈ ಎಂಬುದಾಗಿ ಕರೆಯಲಾಗುತ್ತದೆ.

ಬೋಟಿನಲ್ಲಿ ಒಟ್ಟು 34 ಮಂದಿ ಮೀನುಗಾರರಿದ್ದು, ಬಳಿಕ ಇವರೆಲ್ಲ ಸೇರಿ ಈ ಮೀನನ್ನು ಬಲೆಯಿಂದ ಬಿಡಿಸಿ ಮತ್ತೆ ವಾಪಾಸ್ಸು ಸಮುದ್ರಕ್ಕೆ ಬಿಟ್ಟರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಳಿವಿನಂಚಿನಲ್ಲಿರುವ ತಿಮಿಂಗಿಲಕ್ಕೆ ಯಾವುದೇ ತೊಂದರೆ ಮಾಡದೆ ಮತ್ತೆ ಅದರ ವಾಸಸ್ಥಾನಕ್ಕೆ ಕಳುಹಿಸಿದ ಮೀನುಗಾರರ ಈ ಕಾರ್ಯ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಕಾರ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

‘ನಿರುಪದ್ರವಿಯಾಗಿರುವ ಈ ಮೀನನ್ನು ಹಿಡಿಯುವುದು ನಮಗೆ ಸರಿ ಕಾಣಲಿಲ್ಲ. ಈ ಮೀನು ಇಷ್ಟು ದೊಡ್ಡದಾಗಿ ಬೆಳೆಯಲು ಎಷ್ಟು ಸಮಯ ಬೇಕಾಗಿತ್ತು. ಹೀಗೆಲ್ಲ ಮನಸ್ಸಿಗೆ ಬಂತು. ಹಾಗಾಗಿ ಅದನ್ನು ಬಲೆಯಿಂದ ಬಿಡಿಸಿ ಮತ್ತೆ ಸಮುದ್ರದ ನೀರಿಗೆ ಬಿಡುವ ಕಾರ್ಯವನ್ನು ನಾವೆಲ್ಲ ಮಾಡಿದೆವು. ಸಮುದ್ರಕ್ಕೆ ಪ್ಲಾಸ್ಟಿಕ್, ಕಸಗಳನ್ನು ಎಸೆಯಬಾರದು. ಇದರಿಂದ ಮೀನುಗಳಿಗೆ ತುಂಬಾ ಅಪಾಯ ಇದೆ. ಸಮುದ್ರವನ್ನು ಶುಚಿಯಾಗಿಟ್ಟರೆ ನಮಗೆ ಮೀನು ಕೂಡ ಧಾರಾಳವಾಗಿ ಸಿಗುತ್ತದೆ’

-ಸದಾಶಿವ ಎಂ.ಮೆಂಡನ್, ಬೋಟು ಮಾಲಕರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News