ಸುವರ್ಣ ಮಹೋತ್ಸವ ಪ್ರಶಸ್ತಿ ವಿಜೇತ ಯಕ್ಷಪಟು ಪೇತ್ರಿ ಮಂಜುನಾಥ ಪ್ರಭು

Update: 2024-10-30 16:39 GMT

ಉಡುಪಿ, ಅ.30: ಕರ್ನಾಟಕ ಸಂಭ್ರಮ-50ರ ಸಂಭ್ರಮದಲ್ಲಿ ರಾಜ್ಯದ 100 ಮಂದಿ ಸಾಧಕರಿಗೆ ನೀಡಲಾದ ‘ಸುವರ್ಣ ಮಹೋತ್ಸವ ಪ್ರಶಸ್ತಿ’ ವಿಜೇತರಲ್ಲಿ ಉಡುಪಿ ಜಿಲ್ಲೆಯ ಸಿ.ಮಂಜುನಾಥ ಪ್ರಭು ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಈ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಎಪ್ಪತ್ತರ ಹರೆಯದ ಮಂಜುನಾಥ ಪ್ರಭು ಯಕ್ಷಗಾನ ಹಿಮ್ಮೇಳವಾದಕರು ಹಾಗೂ ಯಕ್ಷಗಾನ ತರಬೇತುದಾರರು. ವಿಠಲ ಪ್ರಭು - ಗುಲಾಬಿ ಬಾಯಿ ದಂಪತಿ ಪುತ್ರರಾದ ಇವರು ಉಡುಪಿ ಜಿಲ್ಲೆಯ ಕುಂಜಾಲಿನವರು. ಬೇಳಿಂಜೆ ತಿಮ್ಮಪ್ಪ ನಾಯ್ಕ, ಹಿರಿಯಡ್ಕ ಗೋಪಾಲ ರಾವ್, ಕೋಟ ಮಹಾಬಲ ಕಾರಂತ, ಹಾರಾಡಿ ಕುಷ್ಠ ಗಾಣಿಗರಿಂದ ಮದ್ದಳೆ ವಾದನ ಮತ್ತು ಯಕ್ಷಗಾನ ನೃತ್ಯ ಅಭ್ಯಾಸ ಮಾಡಿದರು.

ಆರಂಭದಲ್ಲಿ ಬಾಲಗೋಪಾಲ ಮತ್ತು ಚಿಕ್ಕ ಪುಟ್ಟ ವೇಷಗಳನ್ನು ಮಾಡಿದ ಪ್ರಭುಗಳು ಮುಂದೆ ಹಿಮ್ಮೇಳವಾದನದತ್ತ ಗಮನ ಕೇಂದ್ರೀಕರಿಸಿ ಅತ್ಯುತ್ತಮ ಮದ್ದಳೆ ವಾದಕರಾಗಿ ಮೂಡಿಬಂದರು. ಮಂದಾರ್ತಿ, ಪೆರ್ಡೂರು, ಅಮೃತೇಶ್ವರಿ, ಸುರತ್ಕಲ್ ಮೇಳಗಳಲ್ಲಿ ಕಲಾಸೇವೆ ಮಾಡಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರದಲ್ಲೂ ಕಾರ್ಯನಿರ್ವಹಿಸಿದ್ದಾರೆ. ನಿರಂತರ ಐದು ದಶಕಗಳಿಂದ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಸಕ್ತ ಉಡುಪಿ ಯಕ್ಷಶಿಕ್ಷಣ ಟ್ರಸ್ಟ್‌ನ ತರಬೇತುದಾರರಾಗಿ ಪ್ರೌಢ ಶಾಲಾ ಮಕ್ಕಳಿಗೆ ಯಕ್ಷಶಿಕ್ಷಣ ನೀಡುತ್ತಿದ್ದಾರೆ. ಪತ್ನಿ ಶಶಿಕಲಾ ಪ್ರಭು ಯಕ್ಷಗಾನ ವೇಷಧಾರಿಯಾಗಿ, ಭಾಗವತರಾಗಿ, ತರಬೇತುದಾರರಾಗಿ ಯಕ್ಷಗಾನವನ್ನೇ ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಇವರ ಕುಟುಂಬವೇ ಯಕ್ಷಗಾನಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News