ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯಿರಿ: ಉಡುಪಿ ಜಿಲ್ಲಾಡಳಿತಕ್ಕೆ ಭಾ.ಕಿ.ಸಂ. ಮನವಿ

Update: 2024-10-31 15:49 GMT

ಉಡುಪಿ, ಅ.31: ರೈತರ ಕಟಾವಾದ ಭತ್ತಕ್ಕೆ ದಿಢೀರ್ ಬೆಲೆ ಕುಸಿತದ ಕಾರಣದಿಂದಾಗಿ ಅರ್ಥಿಕ ನಷ್ಟ ಅನುಭವಿಸುವಂತಾ ಗಿದ್ದು, ಜಿಲ್ಲೆಯಲ್ಲಿ ಭತ್ತದ ಕನಿಷ್ಟ ಬೆಂಬಲ ಬೆಲೆಯನ್ನು ಕೂಡಲೇ ಘೋಷಿಸಬೇಕು. ಜೊತೆಗೆ ಖರೀದಿ ಕೇಂದ್ರವನ್ನು ತೆರೆದು ಮುಂದಿನ 15 ದಿನಗಳಲ್ಲಿ ಜಿಲ್ಲೆಯಲ್ಲಿ ಭತ್ತದ ಖರೀದಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದೆ.

ಜಿಲ್ಲಾಧಿಕಾರಿ ಕಛೇರಿಯಲ್ಲಿ ಬುಧವಾರ ನಡೆದ ರೈತರ, ಸಂಘ ಸಂಸ್ಥೆಗಳ, ಯಂತ್ರ ಬಾಡಿಗೆದಾರರ ಸಭೆಯಲ್ಲಿ ಭಾಕಿಸಂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಕೇಂದ್ರ ಸರಕಾರ ಈಗಾಗಲೇ ಭತ್ತಕ್ಕೆ 2300ರೂ. ಪ್ರತಿ ಕ್ವಿಂಟಾಲ್‌ಗೆ ಬೆಂಬಲ ಬೆಲೆ ಘೋಷಿಸಿದ್ದು, ಅದಕ್ಕೆ ರಾಜ್ಯ ಸರಕಾರದ ಪ್ರೋತ್ಸಾಹ ಧನವನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಬೇಕೆಂದು ಅದು ಒತ್ತಾಯಿಸಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ನಷ್ಟ ಅನುಭಸಿದ ಭತ್ತದ ಬೆಳೆಗಾರರಿಗೆ ಪರಿಹಾರ ನೀಡುವುದರ ಜೊತೆಗೆ ಮಳೆ ಆಧಾರಿತ ಕೃಷಿಗೆ ನೀಡುವ ಪ್ರೋತ್ಸಾಹಧನವನ್ನು ನಮ್ಮ ಜಿಲ್ಲೆಯ ಭತ್ತದ ಬೆಳೆಗಾರರಿಗೂ ಒದಗಿಸಿಕೊಡ ಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದರೊಂದಿಗೆ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ 2023-24ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಪರಿಹಾರ ಆಗಸ್ಟ್ ಕೊನೆ ಒಳಗೆ ಪಾವತಿಯಾಗಬೇಕಾಗಿತ್ತಾದರೂ ಈವರೆಗೆ ವಿಮಾ ಕಂಪೆನಿಗಳು ರೈತರ ಖಾತೆಗೆ ಜಮಾ ಮಾಡಿಲ್ಲ. ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರ ಹವಾ ಮಾನ ಆಧಾರಿತ ಬೆಳೆ ವಿಮಾ ಪರಿಹಾರವನ್ನು ಬಿಡುಗಡೆಗೊಳಿಸುವಂತೆ ನಿರ್ದೇಶನ ನೀಡಲು ಮನವಿ ಸಲ್ಲಿಸಲಾಯಿತು.

ಭಾ.ಕಿ.ಸಂ. ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ನವೀನ್‌ಚಂದ್ರ ಜೈನ್, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ, ಜಿಲ್ಲಾ ಪದಾಧಿಕಾರಿಗಳಾದ ಸಂತೋಷಕುಮಾರ್ ಶೆಟ್ಟಿ, ಆಸ್ತೀಕ ಶಾಸ್ತ್ರೀ, ಸೀತಾರಾಮ ಗಾಣಿಗ, ಅನಂತ ಪದ್ಮನಾಭ ಉಡುಪ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News