ಉಡುಪಿ| ಗ್ರಾಮ ಪಂಚಾಯತ್‌ಗಳ ಉಪಚುನಾವಣೆಗೆ ವೇಳಾಪಟ್ಟಿ ಪ್ರಕಟ
ಉಡುಪಿ, ನ.5: ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಸದಸ್ಯರ ರಾಜಿನಾಮೆ, ನಿಧನ ಮುಂತಾದ ಕಾರಣಗಳಿಂದ ಆಕಸ್ಮಿಕ ವಾಗಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮೂಲಕ ಭರ್ತಿ ಮಾಡಲು ಕುಂದಾಪುರ ತಾಲೂಕಿನ 35-ಅಮಾಸೆಬೈಲು ಗ್ರಾಪಂನ 1 ಸ್ಥಾನ, ಬ್ರಹ್ಮಾವರ ತಾಲೂಕಿನ ಕೋಟ ಗ್ರಾಪಂನ 1 ಸ್ಥಾನ, ಉಡುಪಿ ತಾಲೂಕಿನ ಬೊಮ್ಮರ ಬೆಟ್ಟು ಗ್ರಾಪಂನ 1 ಸ್ಥಾನ, 13-ಕೊಡಿಬೆಟ್ಟು ಗ್ರಾಪಂನ 1 ಸ್ಥಾನ, ಕಾರ್ಕಳ ತಾಲೂಕಿನ ಈದು ಗ್ರಾಪಂನ 1 ಸ್ಥಾನ, ನಲ್ಲೂರು ಗ್ರಾಪಂನ 1 ಸ್ಥಾನ, ನಿಟ್ಟೆ ಗ್ರಾಪಂನ 1 ಸ್ಥಾನ, ನೀರೆ ಗ್ರಾಪಂನ 3 ಸ್ಥಾನ, 5-ಕೆರ್ವಾಶೆ ಗ್ರಾಪಂನ 1 ಸ್ಥಾನ ಹಾಗೂ ಕಡ್ತಲ ಗ್ರಾಪಂನ 1 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ವೇಳಾಪಟ್ಟಿಯನ್ನು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ನಾಮಪತ್ರ ಸಲ್ಲಿಕೆ ನವೆಂಬರ್ 6ರಿಂದ (ಬುಧವಾರ) ಪ್ರಾರಂಭ ಗೊಳ್ಳಲಿದ್ದು, ನ.12 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನ.13 ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಯಲಿದೆ. ನ.15ರಂದು ಉಮೇದುವಾರಿಕೆಗಳನ್ನು ಹಿಂದೆ ಗೆದುಕೊಳ್ಳಲು ಕೊನೆಯ ದಿನವಾಗಿದೆ. ಮತದಾನದ ಅಗತ್ಯವಿದ್ದರೆ ನ.23ರ ಶನಿವಾರದಂದು ಮತದಾನವು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮರು ಮತದಾನ ಅವಶ್ಯವಿದ್ದರೆ ನ.25ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಮತ ಎಣಿಕೆಯು ನ.26ರಂದು ಬೆಳಗ್ಗೆ 8:00 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರ ಪ್ರಕಟಣೆ ತಿಳಿಸಿದೆ.