‘ಭಾಷಾ ವೈವಿಧ್ಯತೆಯನ್ನು ಸಂಭ್ರಮಿಸುವ ಅಗತ್ಯವಿದೆ’
ಮಣಿಪಾಲ, ನ.5: ಭಾಷೆಯ ವೈವಿಧ್ಯತೆಯನ್ನು ಸಂಭ್ರಮಿಸುವ ಅಗತ್ಯವಿದೆ. ಹಾಗೂ ಭಾಷಾಂತರವು ವೈವಿಧ್ಯತೆಯನ್ನು ಸಂಭ್ರಮಿಸುವ ಉತ್ತಮ ಕಾರ್ಯವಿಧಾನವಾಗಿದೆ ಎಂದು ರಾಜ್ಯೋತ್ಸವ ದಿನದಂದು ಲ್ಲಿನ ಗಾಂಧಿಯನ್ ಸೆಂಟರ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸಸ್ (ಜಿಸಿಪಿಎಎಸ್), ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರ ಮಾಹೆ, ಸಹೃದಯ ಸಂಗಮಮ್, ಕೇರಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಉಡುಪಿ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಖ್ಯಾತ ವಿದ್ವಾಂಸರು ಹಾಗೂ ಅನುವಾದಕರಾದ ಡಾ.ಎನ್.ಟಿ.ಭಟ್, ಡಾ.ಪಾರ್ವತಿ ಐತಾಳ್, ಡಾ.ರಾಜಾರಾಂ ತೋಳ್ಪಾಡಿ, ಪ್ರೊ.ಕೆ.ಶಂಕರನ್, ಪ್ರೊ.ಮೋಹನ್ ಕುಮಾರ್ ವಿ., ಪ್ರೊ. ವರದೇಶ್ ಹಿರೇಗಂಗೆ ಹಾಗೂ ಡಾ. ಪೃಥ್ವಿರಾಜ್ ಕವತಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಎನ್ ಟಿ ಭಟ್ ಮತ್ತು ಡಾ ಪಾರ್ವತಿ ಐತಾಳ್ ಇಬ್ಬರೂ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದದ ಅಗತ್ಯವನ್ನು ಒತ್ತಿಹೇಳಿದರು. ಇದರಿಂದ ಇತರ ಭಾಷೆಗಳ ಸೌಂದರ್ಯವನ್ನು ಪ್ರಶಂಸಿಸಲು ಸಾಧ್ಯವಾಗುತ್ತದೆ ಎಂದರು. ತಮ್ಮ ಸ್ವಂತ ಕೃತಿಗಳ ಉದಾಹರಣೆಗಳೊಂದಿಗೆ ಇತರ ಸಾಹಿತ್ಯಗಳ ಸಾರವನ್ನು ಹೊರತರಲು ತಮ್ಮ ಅನುವಾದದ ತತ್ವವನ್ನು ಇಬ್ಬರೂ ವಿವರಿಸಿದರು. ಅನುವಾದ ಲೋಕಕ್ಕೆ ಇವರು ನೀಡಿದ ಕೊಡುಗೆಗಾಗಿ ಡಾ ಎನ್ ಟಿ ಭಟ್ ಮತ್ತು ಡಾ ಪಾರ್ವತಿ ಇಬ್ಬರನ್ನೂ ಸನ್ಮಾನಿಸಲಾಯಿತು.
ಡಾ ರಾಜಾರಾಂ ತೋಳ್ಪಾಡಿ ಅವರು ‘ರಾಮ್ ಮನೋಹರ ಲೋಹಿಯಾ’ ಅವರ ಮೇಲಿನ ಸಂಶೋಧನೆಯಿಂದ ಎಲ್ಲಾ ಭಾಷೆಗಳ ಅಗತ್ಯವನ್ನು ಒತ್ತಿ ಹೇಳಿದರು. ಪ್ರೊ.ವರದೇಶ್ ಹಿರೇಗಂಗೆ ಮಾತೃಭಾಷೆಯೇ ಒಂದು ಹಂತದ ವರೆಗೆ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಹೇಳಿದರೆ, ಪ್ರೊ. ಶಂಕರನ್ ಮತ್ತು ಪ್ರೊ.ಮೋಹನ್ ಕುಮಾರ್ ಭಾರತದ ಭಾಷಾ ವೈವಿಧ್ಯತೆಯನ್ನು ಪ್ರಶಂಸಿದರು.
ಡಾ ಪೃಥ್ವಿರಾಜ್ ಕವತಾರ್ ಭಾಷಾ ಸಂರಕ್ಷಣೆಯ ಸಂಕೀರ್ಣ ಸ್ವರೂಪದ ಬಗ್ಗೆ ಮಾತನಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.