ಉಡುಪಿ: ಕಂಬೈನ್ಡ್ ಹಾರ್ವೆಸ್ಟರ್ ಬಾಡಿಗೆ ದರ ನಿಗದಿ
ಉಡುಪಿ, ನ.8: ಜಿಲ್ಲಾಡಳಿತದ ವತಿಯಿಂದ ಕಂಬೈನ್ಡ್ ಹಾರ್ವೆಸ್ಟರ್ ದರ ನಿಗದಿ ಬಗ್ಗೆ ರೈತ ಸಂಘಟನೆಗಳು, ಯಂತ್ರ ಪೂರೈಕೆದಾರರು, ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖಾ ಅಧಿಕಾರಿಗಳನ್ನೊಳಗೊಂಡ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಿ, ಸಭೆಯಲ್ಲಿ ಎಲ್ಲಾ ಭಾಗಿದಾರರ ಅಭಿಪ್ರಾಯವನ್ನು ಪಡೆದು ಎಲ್ಲಾ ಮಾದರಿಯ ಕಂಬೈನ್ಡ್ ಹಾರ್ವೆ ಸ್ಟರ್ (ಕರ್ತಾರ್, ಕುಬೊಟೊ, ಕ್ಲಾಸ್ ಹಾಗೂ ಇತರೆ) ಸಾಗಾಟ ವೆಚ್ಚ ಹೊರತು ಪಡಿಸಿ ಪ್ರತಿ ಗಂಟೆಗೆ 2000 ರೂ. ದರವನ್ನು ನಿಗದಿಪಡಿಸಲಾಗಿದೆ.
ಸಾಗಾಟ ವೆಚ್ಚ ಸೇರಿದಂತೆ 2200 ರೂ. ನಿಗದಿಪಡಿಸುವುದು ಸೂಕ್ತವೆಂಬ ಅಭಿಪ್ರಾಯವು ಸಭೆಯಲ್ಲಿ ವ್ಯಕ್ತವಾಗಿದ್ದು, ಸದ್ರಿ ದರಗಳಂತೆ ಯಂತ್ರ ಪೂರೈಕೆದಾರರು ಜಿಲ್ಲೆಯ ರೈತರಿಗೆ ಕಂಬೈನ್ಡ್ ಹಾರ್ವೆಸ್ಟರ್ ಅನ್ನು ಪೂರೈಕೆ ಮಾಡಬೇಕು. ಇದನ್ನು ಹೊರತುಪಡಿಸಿ ಯಂತ್ರ ಮಾಲಕರು, ಪೂರೈಕೆದಾರರು ಹಾಗೂ ಏಜೆಂಟರು ಅನಗತ್ಯ ಹೆಚ್ಚುವರಿಯಾಗಿ ದುಬಾರಿ ಬಾಡಿಗೆ ದರವನ್ನು ರೈತರಿಂದ ಸಂಗ್ರಹಿಸದಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.