ಚುನಾವಣೆಗೆ, ಸರಕಾರಕ್ಕೆ ಸಂಘಟನೆ ಯಾವುದೇ ಹಣ ನೀಡಿಲ್ಲ: ರಾ.ವೈನ್ ಮರ್ಚಂಟ್ಸ್ ಅಸೋಸಿಯೇಷನ್‌ನ ಗೋವಿಂದರಾಜ್ ಹೆಗ್ಡೆ ಸ್ಪಷ್ಟನೆ
ಉಡುಪಿ, ನ.11: ಮಹಾರಾಷ್ಟ್ರದ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಕಾಂಗ್ರೆಸ್ ಪಕ್ಷ ಕರ್ನಾಟಕದ ಮದ್ಯ ಉದ್ಯಮದಾರ ರಿಂದ 700 ಕೋಟಿ ರೂ.ಗಳನ್ನು ಲೂಟಿ ಹೊಡೆದಿದೆ ಎಂಬ ಆರೋಪದ ಕುರಿತು ಇಂದು ಸ್ಪಷ್ಟನೆ ನೀಡಿರುವ ರಾಜ್ಯ ವೈನ್ ಮರ್ಚಂಟ್ಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ, ಚುನಾವಣೆಗಾಗಲೀ, ಸರಕಾರ ಕ್ಕಾಗಲೀ ತಮ್ಮ ಸಂಘಟನೆ ಯಾವುದೇ ಹಣವನ್ನು ನೀಡಿಲ್ಲ ಎಂದಿದ್ದಾರೆ.
ಉಡುಪಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಈ ಕುರಿತು ನೀಡುತ್ತಿರುವ ಹೇಳಿಕೆ, ಕರ್ನಾಟಕದ ಉಪಚುನಾವಣೆಗೂ ಅಬಕಾರಿ ಹಣ ವಿನಿಯೋಗದ ಆರೋಪದ ಕುರಿತಂತೆ ಸುದ್ದಿಗಾರೊಂದಿಗೆ ಮಾತನಾ ಡಿದ ಅವರು, 500, 700, 900 ಕೋಟಿ ರೂ.ಹಣ ನೀಡಿದ್ದೇವೆ ಎಂದು ಕೇಳಿಬರುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ಚುನಾವಣೆಗಾಗಲೀ, ಸರಕಾರಕ್ಕಾಗಲೀ ನಾವು ಯಾವುದೇ ಹಣ ನೀಡಿಲ್ಲ. ದಯವಿಟ್ಟು ನಮ್ಮ ಸಮಸ್ಯೆಯ ಕುರಿತಂತೆ ಮಾಡುತ್ತಿರುವ ಹೋರಾಟದ ವಿಚಾರವನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಅ.25ರಂದು ನಾವು ಪ್ರತಿಭಟನಾ ಸಭೆ ಮಾಡಿದ್ದೆವು. ಈ ಸಭೆಗೆ 3,000ಕ್ಕೂ ಹೆಚ್ಚು ಜನ ಸೇರಿದ್ದೆವು. ಅಬಕಾರಿ ಅಧಿಕಾರಿಗಳು ನಾವು ಪ್ರಮೋಷನ್‌ಗೆ ಹಣ ಕೊಡಬೇಕು ಎಂದು ಹೇಳಿದ್ದರು. ಹಣಕೊಟ್ಟು ಟ್ರಾನ್ಸ್‌ಫರ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಆದ್ದರಿಂದ ನಮಗೆ ಜಾಸ್ತಿ ಲಂಚ ಕೊಡಿ ಎಂದು ಕೇಳುತ್ತಿದ್ದಾರೆ ಎಂಬ ವಿಚಾರ ವನ್ನು ಸನ್ನದುದಾರರು ಅಂದು ಪ್ರತಿಭಟನೆಯಲ್ಲಿ ಹೇಳಿದ್ದರು. ಅದನ್ನು ಹೊರತು ಪಡಿಸಿದರೆ ನಾವು ಯಾವುದೇ ಆರೋಪ ಮಾಡಿಲ್ಲ ಎಂದು ಗೋವಿಂದರಾಜ್ ಹೆಗ್ಡೆ ಸ್ಪಷ್ಟಪಡಿಸಿದರು.
ಸರಕಾರಕ್ಕೆ ನಾವು ಯಾವುದೇ ಹಣ ಕೊಟ್ಟಿಲ್ಲ. 500 ಕೋಟಿ, 700, 900 ಕೋಟಿ ಹಣ ನೀಡಿದ್ದೇವೆ ಎಂಬ ಆರೋಪವನ್ನು ನಾವು ಯಾರೂ ಅಂದು ಮಾಡಿಲ್ಲ. ದಯವಿಟ್ಟು ಈ ವಿಚಾರವನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ನಾವು ವ್ಯವಹಾರಸ್ಥರು ಸ್ವಾಮಿ...ನಾವ್ಯಾಕೆ ಚುನಾವಣೆಗೆ ಹಣಕೊಡಬೇಕು ಎಂದವರು ಪ್ರಶ್ನಿಸಿದರು.
ಹಿಂದಿನ ಸರಕಾರಗಳು ಇದ್ದಾಗಲೂ ನಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದೆವು. ಆ ಸರಕಾರ ಇದ್ದಾಗಲೂ ಪ್ರಮೋಷನ್‌ಗೆ, ಟ್ರಾನ್ಸ್‌ಫಾರ್‌ಗೆ ಮಂತ್ರಿಗಳು ಹಣ ತೆಗೆದುಕೊಳ್ಳುತ್ತಿದ್ದರು. 15 ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಈಗ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿರುವುದರಿಂದ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ. ದಯವಿಟ್ಟು ನಮ್ಮ ಹೇಳಿಕೆ ಯನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ನಾವು ಯಾರಿಗೂ ಚುನಾವಣೆ ರಾಜಕೀಯಕ್ಕೆ ಹಣ ಕೊಟ್ಟಿಲ್ಲ ಎಂದು ಅವರು ಮತ್ತೊಮ್ಮೆ ಪುನರುಚ್ಛರಿಸಿದರು.
ಬೆಂಕಿಯಲ್ಲಿ ಬೀಡಿ ಹಚ್ಚಿಕೊಳ್ಳುವವರು: ಹಿಂದೆ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅಬಕಾರಿ ಸಚಿವರಾಗಿದ್ದಾಗ ಏನಾಗಿದೆ ಗೊತ್ತಿಲ್ವಾ? ಸನ್ನದುದಾರರಿಗೆ ಸಿಗುವ ಮಾರ್ಜಿನ್ ಶೇ.20ರಿಂದ ಶೇ.10ಕ್ಕೆ ಇಳಿಸಿದ್ದು ಯಾರು? ಇದನ್ನು ಯಾಕೆ ಇಳಿಸಿದರು ಎಂದು ಎಲ್ಲರಿಗೂ ಗೊತ್ತಿದೆ. ನಮ್ಮ ಉದ್ಯಮದಲ್ಲಿ ಬೆಂಕಿ ಬಿದ್ದಿದೆ. ನಮ್ಮ ಸಮಸ್ಯೆ ಬಗೆಹರಿಸಿ ಬೆಂಕಿ ನಂದಿಸಿ ಎಂದು ಸರಕಾರದ ಮುಂದೆ ಹೋಗಿದ್ದೇವೆ. ಬೆಂಕಿ ನಂದಿಸಬೇಡಿ, ನಾವು ಬೀಡಿ ಹಚ್ಚಿಕೊಳ್ಳುತ್ತೇವೆ ಎಂದು ಕೆಲ ಪಕ್ಷಗಳು ವರ್ತಿಸುತ್ತೇವೆ ಎಂದರು.
ನಾವು ತುಂಬಾ ನೊಂದಿದ್ದೇವೆ..15 ವರ್ಷಗಳಿಂದ ಬಂದ ಎಲ್ಲಾ ಸರಕಾರಗಳಿಂದ ಸಮಸ್ಯೆಯಾಗಿದೆ. ಎಲ್ಲಾ ಸಚಿವರು ಕೂಡ ಟ್ರಾನ್ಸ್‌ಫರ್‌ಗೆ, ಪ್ರಮೋಷನ್‌ಗೆ ಲಂಚ ತೆಗೆದುಕೊಳ್ಳುವ ಪದ್ಧತಿ ಚಾಲ್ತಿಯಲ್ಲಿದೆ. ನಮ್ಮನ್ನು ನಮ್ಮಷ್ಟಕ್ಕೆ ಉದ್ಯಮ ಮಾಡಲು ಬಿಡಿ. ಚುನಾವಣಾ ರಾಜಕೀಯಕ್ಕೆ ನಮ್ಮನ್ನು ಎಳೆಯಬೇಡಿ ಎಂದು ಹೆಗ್ಡೆ ಮನವಿ ಮಾಡಿದರು.
ಪ್ರಧಾನ ಮಂತ್ರಿಯವರಿಗೆ ಯಾರು ಈ ಮಾಹಿತಿ ನೀಡಿದರು. ಯಾವ ಆಧಾರದಲ್ಲಿ ಈ ಮಾಹಿತಿ ನೀಡಿದರು ಗೊತ್ತಿಲ್ಲ. ರಾಜ್ಯಪಾಲರಿಗೆ ದೂರು ಕೊಟ್ಟದ್ದು ನಾವಲ್ಲ... ಆರ್‌ಟಿಐ ಕಾರ್ಯಕರ್ತ ರಾಜ್ಯಪಾಲರಿಗೆ ದೂರು ನೀಡಿದ್ದಾನೆ. ನಾವು ದೂರು ಕೊಟ್ಟಿಲ್ಲ. ಹೀಗಾಗಿ ಇದನ್ನೊಂದು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಮತ್ತೊಮ್ಮೆ ಕೈಮುಗಿದು ಕೇಳಿ ಕೊಳ್ಳುತ್ತೇನೆ ಎಂದು ಗೋವಿಂದರಾಜ್ ಹೆಗ್ಡೆ ನುಡಿದರು.
ನ.20ರಂದು ಅಬಕಾರಿ ಉದ್ಯಮ ಬಂದ್
ನಾವು ಅಬಕಾರಿ ಉದ್ಯಮದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ತೊಂದರೆಗಳ ಕುರಿತು ಸರಕಾರದ ಗಮನ ಸೆಳೆಯಲು ನವಂಬರ್ 20ರಂದು ನಾವು ಬಂದ್ ನಡೆಸಲಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ನಾವು ಬಂದು ಮಾಡುತ್ತಿದ್ದೇವೆ. ನೂರಾರು ಕೋಟಿ ಹಣದ ವಿಚಾರವಾಗಿ ನಾವು ಬಂದ್ ಮಾಡುತ್ತಿಲ್ಲ ಎಂದವರು ಸ್ಪಷ್ಟನೆಯಾಗಿ ತಿಳಿಸಿದರು.