ಉಡುಪಿ ಜಿಲ್ಲಾ ಕಸಾಪದಲ್ಲಿ ಅಂತ:ಕಲಹ: ಕಸಾಪ ಉಡುಪಿ ತಾಲೂಕು ಅಧ್ಯಕ್ಷರ ಪದಚ್ಯುತಿಗೆ ಹೈಕೋರ್ಟ್ ತಡೆಯಾಜ್ಞೆ

Update: 2024-11-11 17:13 GMT

 ಸುರೇಂದ್ರ ಅಡಿಗ, ರವಿರಾಜ್

ಉಡುಪಿ, ನ.11: ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ. ಅವರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಏಕಾಏಕಿ ಪದಚ್ಯುತಗೊಳಿಸಿದ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕೇವಲ 20 ದಿನಗಳ ಅಂತರದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆ ಹಾಗೂ ವಿದ್ಯಾಮಾನಗಳಲ್ಲಿರುವ ಕಾನೂನಾತ್ಮಕ ಲೋಪದೋಷಗಳನ್ನು, ಜಿಲ್ಲಾ ಕಸಾಪ ಅಧ್ಯಕ್ಷರ ಅದಿಕಾರದ ವ್ಯಾಪ್ತಿ ಮೀರಿದ ನಡವಳಿಕೆ ಆದೇಶವನ್ನು ಪರಿಶೀಲಿಸಿದ ಕರ್ನಾಟಕ ಉಚ್ಛನ್ಯಾಯಾಲಯ ಜಿಲ್ಲಾಧ್ಯಕ್ಷರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಇದು ಸತ್ಯಕ್ಕೆ ಫಲಿಸಿದ ಜಯ ಎಂದು ರವಿರಾಜ್ ಎಚ್.ಪಿ. ‘ವಾರ್ತಾಭಾರತಿ’ಗೆ ತಿಳಿಸಿದರು. ಜಿಲ್ಲಾ ಕಸಾಪದ ಹಠಾತ್ ಕ್ರಮಕ್ಕೆ ಕಾರಣಗಳೇನು ಎಂಬುದು ತಮಗೆ ಗೊತ್ತಿಲ್ಲ ಎಂದು ರವಿರಾಜ್ ಹೇಳಿದರು.

ಮೂರನೇ ಬಾರಿಗೆ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಅಧ್ಯಾಪಕರಾದ ನೀಲಾವರ ಸುರೇಂದ್ರ ಅಡಿಗ, ಸುಮಾರು 15ರಿಂದ 20 ದಿನಗಳೊಳಗೆ ತಮಗೆ ಬೆನ್ನುಬೆನ್ನಿಗೆ ಐದು ನೋಟೀಸುಗಳನ್ನು ನೀಡಿದ್ದು, ತಮ್ಮನ್ನು ಹುದ್ದೆಯಿಂದ ತೆಗೆಯಲೇಬೇಕೆಂಬ ಗಟ್ಟಿ ನಿರ್ಧಾರ ಮಾಡಿರುವುದಕ್ಕೆ ದ್ಯೋತಕ ಎಂದವರು ಹೇಳಿದರು.

ಕಳೆದ ಎರಡೂವರೆ ವರ್ಷಗಳಲ್ಲಿ ಉಡುಪಿ ತಾಲೂಕು ಅಧ್ಯಕ್ಷರಾಗಿ ತಾವು ಕಸಾಪದ ಮೂಲಕ 300ಕ್ಕೂ ಅಧಿಕ ಕಾರ್ಯ ಕ್ರಮಗಳನ್ನು ಮಾಡಿದ್ದೇವೆ. ಎರಡು ತಾಲೂಕು ಸಮ್ಮೇಳನಗಳನ್ನು ನಡೆಸಿದ್ದೇವೆ. ಪ್ರಾಯಶ: ರಾಜ್ಯ ಕಸಾಪದ ಯಾವುದೇ ಘಟಕ ಮಾಡದಷ್ಟು ಕನ್ನಡಪರ ಕೆಲಸವನ್ನು ನಾವು ಮಾಡಿದ್ದೇವೆ. ಕನ್ನಡ ಕಟ್ಟುವ ಕಾಯಕದಲ್ಲಿ ನಾವು ಸಕ್ರೀಯರಾಗಿದ್ದೆವು ಎಂದವರು ತಿಳಿಸಿದರು.

‘ಕನ್ನಡ ಮಾತಾಡು’, ‘ಕಥೆ ಕೇಳೋಣ’, ‘ಮನೆಯೇ ಗ್ರಂಥಾಲಯ’, ‘ಕನ್ನಡ ಶಾಲೆ ಉಳಿಸಿ-ಬೆಳೆಸಿ’ ಅಭಿಯಾನ ಮುಂತಾದ ವಿಶಿಷ್ಟ ಅಭಿಯಾನಗಳ ಮೂಲಕ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದೇವೆ. ಅದರಲ್ಲೂ ಮನೆಯೇ ಗ್ರಂಥಾ ಲಯದ 100ಕ್ಕೂ ಅಧಿಕ ಕಾರ್ಯಕ್ರಮ ನಡೆಸಿದ್ದೇವೆ. ಇದರೊಂದಿಗೆ ಎರಡು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಗಳನ್ನು ಯಶಸ್ವಿಯಾಗಿ ನಡೆಸಿದ್ದಲ್ಲದೇ, ಗಣಕ ಲಿಪಿ ಪಿತಾಮಹ ನಾಡೋಜ ಕೆ.ಪಿ.ರಾವ್ ಅಭಿನಂದನಾ ಸಮಾರಂಭ, ಕು.ಗೋ. ಅಭಿನಂದನಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಿದ್ದೇವೆ ಎಂದರು.

ಅಲ್ಲದೇ ಈಗಾಗಲೇ 130 ಸರಣಿ ಮುಗಿಸಿ ಮುಂದುವರಿದಿರುವ ಕಥೆ ಕೇಳೋಣ ಕಾರ್ಯಕ್ರಮದ ಯಶಸ್ಸಿಗಾಗಿ ರಾಜ್ಯ ಕಸಾಪ ಅಧ್ಯಕ್ಷರು ಪ್ರಶಂಸೆ ವ್ಯಕ್ತಪಡಿಸಿದ್ದು, ಇದಕ್ಕಾಗಿ ಜಿಲ್ಲಾ ಕಸಾಪ ಅಧ್ಯಕ್ಷರಾದ ನೀಲಾವರ ಸುರೇಂದ್ರಅಡಿಗರನ್ನು ಶಾಲು ಹೊದೆಸಿ ಗೌರವಿಸಿದ್ದರು ಎಂದರು.

ಆದರೆ 20 ದಿನಗಳ ಹಿಂದೆ ಜಿಲ್ಲಾ ಅಧ್ಯಕ್ಷ ಸುರೇಂದ್ರ ಅಡಿಗರು ಏಕಾಏಕಿ ಅನಿರೀಕ್ಷಿತ ಆರೋಪದ ಪತ್ರಗಳನ್ನು ತಾಲೂಕು ಕಸಾಪ ಅಧ್ಯಕ್ಷರಿಗೆ ಕಳುಹಿಸಿದ್ದು, ಪ್ರತಿ ಪತ್ರದಲ್ಲೂ ಮೂರು ದಿನಗಳೊಳಗೆ ಉತ್ತರ ನೀಡುವಂತೆ ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಕನ್ನಡ ಮೇಲಿನ ಅಭಿಮಾನದಿಂದ ಜಿಲ್ಲಾಧ್ಯಕ್ಷರ ಅನುಮತಿ ಪಡೆದೇ ತಾಲೂಕು ಘಟಕ ಕನ್ನಡಪರ ಕಾರ್ಯಕ್ರಮಗಳನ್ನು ಮಾಡುತಿದ್ದರೂ ಅವರು ಮಾಡುತಿದ್ದ ಯಾವುದೇ ಆರೋಪದಲ್ಲೂ ಸತ್ಯವಿದ್ದಿ ರಲಿಲ್ಲ ಎಂದರು. ಪ್ರತಿ ಪತ್ರಕ್ಕೂ ಸಾಕ್ಷಿ, ಆಧಾರ, ದಾಖಲೆಗಳೊಂದಿಗೆ ಉತ್ತರ ಬರೆದರೂ ಅವರನ್ನು ತಿರಸ್ಕರಿಸಿದ್ದರು ಎಂದು ರವಿರಾಜ್ ನುಡಿದರು.

ಕೊನೆಗೆ ನೀವು ಅಸಲಿ ಆಧಾರಗಳನ್ನು ಇಟ್ಟಿಲ್ಲ, ಝೆರಾಕ್ಶ್ ಪ್ರತಿ ಇಟ್ಟಿದ್ದೀರಿ, ಅದು ಸರಿಯಾಗಿಲ್ಲ ಎಂದು ಸುಳ್ಳು ಆರೋಪ ಮಾಡಿ, ಕಸಾಪದ ಆಯವುದೇ ಅಧಿಕೃತ ಸಭೆ ಕರೆಯದೇ, ತಮ್ಮಿಂದ ಮುಖ:ತ ವಿವರಣೆ ಪಡೆಯದೇ ಏಕಾಏಕಿ ಕನ್ನಡ ರಾಜ್ಯೋತ್ಸವ ತಿಂಗಳಲ್ಲೇ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಡುಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿರುವಾಗಿ ನ.5ರಂದು ನೋಟೀಸು ನೀಡಿದರು ಎಂದರು.

ಜಿಲ್ಲಾಧ್ಯಕ್ಷರ ದುರುದ್ದೇಶಪೂರಿತ ಅನಿರೀಕ್ಷಿತ ಆದೇಶವನ್ನು ತಾಲೂಕು ಘಟಕದ ತುರ್ತು ಸಭೆ ಕರೆದು ಚರ್ಚಿಸಿದ್ದು, ಕಾನೂನಿನ ಮೊರೆಹೋಗುವ ಸರ್ವಾನುಮತದ ನಿರ್ಧಾರದಿಂದ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾ ಯಿತು. ಇದೀಗ ಹೈಕೋರ್ಟ್ ಜಿಲ್ಲಾಧ್ಯಕ್ಷರ ಆದೇಶಕ್ಕೆ ತಡಯಾಜ್ಞೆ ನೀಡಿದೆ ಎಂದು ಅವರು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷರ ಕ್ರಮವನ್ನು ಖಂಡಿಸಿ, ಜಿಲ್ಲೆಯ ಸಾಹಿತಿಗಳು, ಡಾ.ಪಿ.ವಿ.ಭಂಡಾರಿ ಸೇರಿದಂತೆ ಉಡುಪಿಯ ಗಣ್ಯರು, ಕನ್ನಡಪರ ಹೋರಾಟಗಾರರು ತಾಲೂಕು ಘಟಕಕ್ಕೆ ಬೆಂಬಲ ನೀಡುತಿದ್ದಾರೆ ಎಂದ ಅವರು ಮುಂದೆಯೂ ಕನ್ನಡ ಮನಸ್ಸು ಗಳು ಒಂದಾಗಿ ಕನ್ನಡಪರ ಕೆಲಸಗಳನ್ನು ಮಾಡಬೇಕೆಂಬುದು ತಮ್ಮ ಗುರಿಯಾಗಿದೆ ಎಂದರು.

ಈ ಕುರಿತು ಪ್ರತಿಕ್ರಿಯೆಗಾಗಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರನ್ನು ದೂರವಾಣಿ ಮೂಲಕ ಸಂಪರ್ಕಿಸಲು ನಡೆಸಿದ ಸತತ ಪ್ರಯತ್ನ ಸಫಲವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News