ಮಾಹೆ ಮಣಿಪಾಲದಿಂದ ‘ಇನ್‌ಸ್ಪಾಯರ್ ಜೂನಿಯರ್’ ಕಾರ್ಯಕ್ರಮ
ಉಡುಪಿ, ನ.12: ಯುವ ಮನಸ್ಸುಗಳಲ್ಲಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತಂತೆ ಕುತೂಹಲ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ದೃಷ್ಟಿಯಿಂದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ನ.13ರಿಂದ 16ರವರೆಗೆ ಮಾಹೆ ಸಂಶೋಧನಾ ದಿನ-2024 ಹಾಗೂ ಇನ್‌ಸ್ಪಾಯರ್ ಜೂನಿಯರ್ ಕಾರ್ಯಕ್ರಮಗಳನ್ನು ಕೆಎಂಸಿ ಗ್ರೀನ್ಸ್ ನಲ್ಲಿ ಹಮ್ಮಿಕೊಂಡಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಹೇಳಿದ್ದಾರೆ.
ಮಾಹೆಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ.13 ಮತ್ತು 14ರಂದು ಕಾಲೇಜು ವಿದ್ಯಾರ್ಥಿ ಗಳಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ‘ಮಾಹೆ ಸಂಶೋಧನಾ ದಿನ’ ನಡೆಯಲಿದ್ದು, ಕರಾವಳಿಯ 10ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ಸಂಶೋಧನಾ ವಿದ್ಯಾರ್ಥಿಗಳು, ವಿಜ್ಞಾನ ಆಸಕ್ತರು ಹಾಗೂ ಪ್ರಾದ್ಯಾಪಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮಾಹೆಯ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಸುರತ್ಕಲ್‌ನ ಎನ್‌ಐಟಿಕೆ, ಮಂಗಳೂರಿನ ಫಾದರ್‌ಮುಲ್ಲರ್ ಸಂಸ್ಥೆ, ಕೆಎಸ್ ಹೆಗ್ಡೆ, ಯನಪೋಯಾ ಮೆಡಿಕಲ್ ಕಾಲೇಜುಗಳ ಸಂಶೋಧನಾ ವಿದ್ಯಾರ್ಥಿಗಳು, ಅವರ ಮಾರ್ಗದರ್ಶಕರು ಭಾಗ ವಹಿಸಿ ತಮ್ಮ ಸಂಶೋಧನೆಗಳ ಕುರಿತು ಚರ್ಚಿಸುವುದಲ್ಲದೇ, ಇತರರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಡಾ.ಬಲ್ಲಾಳ್ ತಿಳಿಸಿದರು.
ಎರಡು ದಿನಗಳ ಕಾರ್ಯಕ್ರಮಗಳ ಕುರಿತು ವಿವರಿಸಿದ ಮಾಹೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ನವೀನ್ ಸಾಲನ್ಸ್, ಮುಂದಿನ ಎರಡು ದಿನಗಳಲ್ಲಿ ವೈದ್ಯಕ್ಷೀಯ ಕ್ಷೇತ್ರದ ವಿವಿಧ ವಿಭಾಗಗಳಲ್ಲಾಗುತ್ತಿರುವ ಸಂಶೋಧನೆಗಳ ಕುರಿತು ಮಾತ್ರವಲ್ಲದೇ, ಇಂಜಿನಿಯರಿಂಗ್, ವಾಣಿಜ್ಯ ಸೇರಿದಂತೆ ಇತರ ಕ್ಷೇತ್ರಗಳ ಸಂಶೋಧನೆಯ ಕುರಿತೂ ಚರ್ಚೆ, ಸಂವಾದ, ಚಿಂತನ ಮಂಥನ ನಡೆಯಲಿದೆ. ಕೆಎಂಸಿ ಗ್ರೀನ್ಸ್‌ನಲ್ಲಿ ಇದಕ್ಕೆ ಸಂಬಂಧಿಸಿದಂತೆ 200ಕ್ಕೂ ಅಧಿಕ ಸ್ಟಾಲ್ ಗಳನ್ನು ಹಾಕಲಾಗುತ್ತದೆ. ವಿಜ್ಞಾನಾಸಕ್ತರು, ಸಾರ್ವಜನಿಕರೂ ಇದಕ್ಕೆ ಭೇಟಿ ನೀಡಬಹುದು ಎಂದರು.
ಇನ್‌ಸ್ಪಾಯರ್ ಜೂನಿಯರ್: ನ.15 ಮತ್ತು 16ರಂದು ನಡೆಯುವ ‘ಇನ್‌ಸ್ಪಾಯರ್ ಜೂನಿಯರ್’ ಕುರಿತು ವಿವರಿಸಿದ ಡಾ.ನವೀನ್ ಸಾಲಿನ್ಸ್, ಇಂದು 8ನೇ ತರಗತಿಯಿಂದ 12ನೇ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಹಾಗೂ ಅವರ ಹೆತ್ತವರನ್ನು ಗಮನದಲ್ಲಿರಿಸಿಕೊಂಡು ನಡೆಯುವ ಕಾರ್ಯಕ್ರಮವಾಗಿದೆ. ಮೆಡಿಕಲ್ ಹಾಗೂ ಇಂಜಿನಿಯರಿಂಗ್‌ನ್ನು ಹೊರತು ಪಡಿಸಿ ವಿಜ್ಞಾನದಲ್ಲಿ ಹಾಗೂ ಇತರ ಕ್ಷೇತ್ರಗಳಲ್ಲಿ ಇರುವ ವಿಪುಲ ಅವಕಾಶಗಳ ಕುರಿತು ಇದರಲ್ಲಿ ವಿದ್ಯಾರ್ಥಿ ಗಳಿಗೆ ಹಾಗೂ ವಿಶೇಷವಾಗಿ ಹೆತ್ತವರಿಗೆ ಮಾಹಿತಿಗಳನ್ನು ನೀಡಲಾಗುವುದು ಎಂದರು.
ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು, ವಿವಿಧ ಕ್ಷೇತ್ರಗಳಲ್ಲಿರುವ ವ್ಯಾಪಕ ಸಂಶೋಧನಾ ಅವಕಾಶಗಳು ಹಾಗೂ ಸಾಧ್ಯತೆಗಳ ಕುರಿತು ಅರಿವು ಮೂಡಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಯ ಪ್ರೌಢ ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಂದ ಪ್ರತಿದಿನ 5ರಿಂದ 6ಸಾವಿರ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ಅವರು ವಿವರಿಸಿದರು.
ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಪ್ರೊ ವೈಸ್ ಚಾನ್ಸಲರ್ ಡಾ. ಶರತ್ ಕೆ.ರಾವ್ ಮಾತನಾಡಿ, ಇನ್‌ಸ್ಪಾಯರ್ ಜೂನಿಯರ್ ಸಂಶೋಧನಾ ಕಾರ್ಯಕ್ರಮ ಮುಂದಿನ ಪೀಳಿಗೆಗೆ ವಿವಿಧ ಶೈಕ್ಷಣಿಕ ಕ್ಷೇತ್ರಗಳಿಗೆ ಸಂಬಂಧಿಸಿ ಮಾಹಿತಿ ಗಳನ್ನು ನೀಡಲಾಗುತ್ತದೆ. ಇಲ್ಲಿ ವಿಜ್ಞಾನದ ವಿಷಯಗಳ ಜೊತೆಜೊತೆಗೆ ವಾಣ್ಯಿ, ಸಂವಹನ ತಾಂತ್ರಿಕ, ಕಲಾವಿಭಾಗ, ಹಾಸ್ಪಿಟಾಲಿಟಿ, ಕಾನೂನು, ನಿರ್ವಹಣೆ, ಮನೋವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಕ್ಷೇತ್ರದ ಕುರಿತೂ ವಿದ್ಯಾರ್ಥಿ ಗಳು ಹಾಗೂ ಹೆತ್ತವರಿಗೆ ಮಾಹಿತಿ ಇರುತ್ತದೆ ಎಂದರು.
ಇವರು ಕೆಎಂಸಿ ಗ್ರೀನ್ಸ್‌ನಲ್ಲಿ ತೆರೆಯುವ 200ಕ್ಕೂ ಅಧಿಕ ಮಳಿಗೆಗಳಲ್ಲಿ ಈ ಕುರಿತು ಎಲ್ಲಾ ವಿಧದ ಮಾಹಿತಿಗಳನ್ನು ಪಡೆಯಬಹುದಾಗಿದೆ.ವಿವಿಧ ವಿಷಯಗಳ ನುರಿತ ತಜ್ಞರು ಇವುಗಳ ಕುರಿತು ಮಾಹಿತಿಗಳನ್ನು ನೀಡುವರು ಎಂದು ಡಾ.ಶರತ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಸಂಶೋಧನಾ ವಿಭಾಗದ ಮತ್ತೊಬ್ಬ ಮುಖ್ಯಸ್ಥ ಡಾ.ಸತೀಶ್ ರಾವ್, ಡಾ.ವಿನೋದ ಪಿ.ನಾಯಕ್, ಡಾ.ಚೈತ್ರಾ ರಾವ್ ಮುಂತಾದವರು ಉಪಸ್ಥಿತರಿದ್ದರು.