ಕಟ್ಟಡ ಪರವಾನಿಗೆ ನಿರಾಕರಣೆ ಆರೋಪ: ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯೊಳಗೆ ಅರ್ಜಿದಾರನಿಂದ ಧರಣಿ
ಉಡುಪಿ, ನ.12: ಹಲವು ಬಾರಿ ಕಚೇರಿಗೆ ಅಲೆದಾಟ ಮಾಡಿದರೂ ಕಟ್ಟಡ ಪರವಾನಿಗೆ ನೀಡುತ್ತಿಲ್ಲ ಎಂದು ಆರೋಪಿಸಿ ಅರ್ಜಿದಾರ ಸಾಮಾಜಿಕ ಕಾರ್ಯಕರ್ತರೊಬ್ಬರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯೊಳಗೆ ಧರಣಿ ಕುಳಿತ ಘಟನೆ ಇಂದು ನಡೆದಿದೆ.
ಬೆಳಗ್ಗೆ ಕಚೇರಿಯೊಳಗೆ ನೆಲದಲ್ಲಿ ಕುಳಿತು ಧರಣಿ ನಡೆಸಿದ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಹನೀಫ್, ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಅವರ ಭರವಸೆ ಹಿನ್ನೆಲೆಯಲ್ಲಿ ಮಧ್ಯಾಹ್ನ ವೇಳೆ ಧರಣಿಯನ್ನು ಕೈಬಿಟ್ಟು ಮುಂದೂಡಿದ್ದಾರೆ.
‘ಪ್ರಾಧಿಕಾರ 2019ರಲ್ಲಿ ಸಗ್ರಿಯಲ್ಲಿ ನೀಡಿದ ಲೇಔಟ್‌ನಲ್ಲಿ ನಿರ್ಮಿಸಿದ ಕಟ್ಟಡಕ್ಕೆ ಪರವಾನಿಗೆ ನೀಡುವಂತೆ ಎರಡು ತಿಂಗಳಿ ನಿಂದ ಅರ್ಜಿ ಸಲ್ಲಿಸಿ ಅಲೆದಾಡುತ್ತಿದ್ದೇನೆ. ಪ್ರಾಧಿಕಾರವೇ ನೀಡಿದ ಲೇಔಟ್‌ನ್ನು ಅಧಿಕಾರಿಗಳು ಅಕ್ರಮ ಹೇಳಿ ಪರವಾನಿಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಜಾಗಕ್ಕೆ ಭೂಬೆಲೆಯ ಶೇ.15ರಷ್ಟು ದಂಡ ಪಾವತಿಸಲಾಗಿದೆ. ಹಾಗಾಗಿ ಈ ಲೇಔಟ್ ಅಕ್ರಮ ಆಗಲು ಹೇಗೆ ಸಾಧ್ಯ’ ಎಂದು ಮುಹಮ್ಮದ್ ಹನೀಫ್ ಪ್ರಶ್ನಿಸಿದರು.
ಬಡವರಿಗೆ ನೀಡಿದ ಮೂವರೆ ಸೆಂಟ್ಸ್ ಜಾಗಕ್ಕೆ ಇವರು ತೊಂದರೆ ಕೊಡುತ್ತಿದ್ದಾರೆ. ಬಡವರು ಯಾರು ಕೂಡ ಜೀವನ ಮಾಡಲು ಇಲ್ಲವೇ? ಇವರು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ. ಇಂತಹ ಪ್ರಾಧಿಕಾರ ನಮಗೆ ಬೇಡ. ಪರವಾನಿಗೆ ಸಿಗುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಅವರು ಪಟ್ಟು ಹಿಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಈ ವಿಚಾರವನ್ನು ನ.22ರಂದು ನಡೆಯಲಿರುವ ಪ್ರಾಧಿಕಾರದ ಸಭೆಯಲ್ಲಿ ಇಟ್ಟು ಚರ್ಚಿಸಿ, ಪರಿಹಾರಕ್ಕೆ ಬೆಂಗಳೂರಿನ ಕಚೇರಿಗೆ ಕಳುಹಿಸಲಾಗುವುದು. ಈ ಮೂಲಕ ಈ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಈ ಭರವಸೆ ಹಿನ್ನೆಲೆ ಯಲ್ಲಿ ಹನೀಫ್ ಅವರು ತಮ್ಮ ಧರಣಿಯನ್ನು ಕೈಬಿಟ್ಟಿದ್ದಾರೆ’ ಎಂದು ತಿಳಿಸಿದರು.