ಉಡುಪಿ ಜಿಲ್ಲೆಯಲ್ಲಿ ‘ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ: ಡಿಸಿ ವಿದ್ಯಾಕುಮಾರಿ

Update: 2024-11-19 15:42 GMT

ಉಡುಪಿ: ಜಿಲ್ಲೆಯಲ್ಲಿ ಇಂದಿನಿಂದ ಡಿಸೆಂಬರ್ 10ರವೆರೆಗೆ ‘ನಮ್ಮ ಶೌಚಾಲಯ ನಮ್ಮ ಗೌರವ’ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಈ ದಿನಾಚರಣೆ ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸ್ಥಾನಮಾನವನ್ನು ಉಳಿಸಿ ಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ನಡೆದ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮೀಣ ಭಾಗದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ಪ್ರತಿನಿತ್ಯ ನಿರಂತರ ವಾಗಿ ಶೌಚಾಲಯಗಳನ್ನು ಬಳಸುವಂತೆ ಜನಸಾಮಾನ್ಯರಿಗೆ ಪ್ರೇರೇಪಿಸುವ ಉದ್ದೇಶದಿಂದ ಪ್ರತಿವರ್ಷ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತಿದೆ ಎಂದವರು ವಿವರಿಸಿದರು.

ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ಪ್ರಸಕ್ತ ವರ್ಷ ನಮ್ಮ ಶೌಚಾಲಯ ನಮ್ಮ ಗೌರವ ಎಂಬ ಶೀರ್ಷಿಕೆ ಹಾಗೂ ‘ಅಂದದ ಶೌಚಾಲಯ ಆನಂದದ ಜೀವನ’ ಎಂಬ ಘೋಷವಾಕ್ಯ ದೊಂದಿಗೆ ನ.19ರಿಂದ ಡಿಸೆಂಬರ್ 10ರವರೆಗೆ ವಿಶೇಷ ಆಂದೋಲನವನ್ನು ಆಯೋಜಿಸಲಾಗಿದೆ ಎಂದರು.

ಅಭಿಯಾನದ ಮುಖ್ಯ ಉದ್ದೇಶ ವೈಯಕ್ತಿಕ ಮತ್ತು ಸಮುದಾಯ ಶೌಚಾಲಯಗಳ ಬಳಕೆ ಹೆಚ್ಚಿಸುವುದು ಮತ್ತು ಸುಸ್ಥಿರತೆ ಕಾಪಾಡುವುದು. ಈ ಸ್ಥಳಗಳನ್ನು ವರ್ಣ ರಂಜಿತ ಸ್ಥಳಗಳಾಗಿ ಪರಿವರ್ತಿಸಲು ಚಿತ್ರಕಲೆ ಬಿಡಿಸುವುದು, ನಿರುಪಯುಕ್ತ ಶೌಚಾಲಯಗಳನ್ನು ದುರಸ್ತಿ ಮಾಡಿ ಬಳಕೆಗೆ ಯೋಗ್ಯ ರೀತಿಯಲ್ಲಿ ಪರಿವರ್ತಿಸುವುದು ಸೇರಿದಂತೆ ಎಲ್ಲ ಶೌಚಾಲಯಗಳು ಕ್ರಿಯಾತ್ಮಕವಾಗಿದೆ ಹಾಗೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿ ಕೊಳ್ಳುವುದಾಗಿದೆ ಎಂದರು.

ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯನ್ನು ಆಯೋಜಿಸಿ, ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸುವ ನಿಟ್ಟಿನಲ್ಲಿ ಜನರ ನಡುವಳಿಕೆಗಳನ್ನು ಬದಲಿಸುವ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಲೂಕು ಪಂಚಾಯಿತಿಗಳಲ್ಲಿ ಶಿಫಾರಸ್ಸುಗೊಂಡ ಅತ್ಯುತ್ತಮ ಗೃಹ ಶೌಚಾಲಯಗಳ ಪೈಕಿ 5ನ್ನು ಆಯ್ಕೆ ಮಾಡುವುದು ಹಾಗೂ ಸಮುದಾಯ ಶೌಚಾಲಯಗಳ ಪೈಕಿ 5ನ್ನು ಆಯ್ಕೆ ಮಾಡಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಿಡಿಓ ಗಳು ಹಾಗೂ ಸಿಬ್ಬಂದಿಗಳು ಜನಸಾಮಾನ್ಯರಲ್ಲಿ ಶೌಚಾಲಯದ ಬಳಕೆಯ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಅವರುಗಳು ಅದನ್ನು ಬಳಸುವಂತೆ ನೋಡಿಕೊಳ್ಳಬೇಕು ಎಂದರು.

ಶಾಲಾ ಮಟ್ಟದಲ್ಲಿ ವಾಷ್‌ಟಬ್‌ಗಳನ್ನು ಪ್ರಾರಂಭಿಸಿ, ಮಕ್ಕಳಲ್ಲಿಯೂ ಸಹ ಶೌಚಾಲಯಗಳ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳ ಪ್ರಮಾಣಕ್ಕೆ ಅನುಗುಣವಾಗಿ ಶೌಚಾಲಯಗಳು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಶೌಚಾಲಯಗಳು ಹಾಳಾಗಿದ್ದಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.

ವಿಶೇಷ ಆಂದೋಲನದ ಅಂಗವಾಗಿ ಎಲ್ಲ ತಾಲೂಕು ಹಾಗೂ ಗ್ರಾಪಂ ಗಳಲ್ಲಿ ಶೌಚಾಲಯ ಬಳಕೆ ಕುರಿತು ಸಮೀಕ್ಷೆ ನಡೆಸಲಾಗುವುದು. ಗೃಹ ಶೌಚಾಲಯಗಳನ್ನು ನಿರಂತರವಾಗಿ ಬಳಸುವ ಫಲಾನುಭವಿಗಳನ್ನು ಗುರುತಿಸಿ ಬಹುಮಾನ ನೀಡಿ ಗೌರವಿಸಲಾಗುವುದು. ಸ್ಪರ್ಧೆ ಆಯೋಜಿಸಿ ಅತ್ಯುತ್ತಮ ವೈಯಕ್ತಿಕ ಗೃಹ ಶೌಚಾಲಯಗಳನ್ನು ಗುರುತಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು. ಸ್ವಚ್ಛತಾ ಕಾರ್ಮಿಕರಿಗೆ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು. ಸಮುದಾಯ ಶೌಚಾಲಯಗಳನ್ನು ಶುಚಿತ್ವಗೊಳಿಸಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಹಾಗೂ ಅವುಗಳ ಸೌಂದರ್ಯಕರಣಕ್ಕೆ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದರು.

ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಗಳು ಶೌಚಾಲಯ ಆಂದೋಲನಕ್ಕೆ ಸಹಯೋಗ ನೀಡಲಿವೆ. ಶೌಚಾಲಯ ಇಲ್ಲದಿರುವ ಆಸ್ಪತ್ರೆ, ಅಂಗನವಾಡಿ ಹಾಗೂ ಶಾಲೆಗಳನ್ನು ಪಟ್ಟಿ ಮಾಡಿ ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಈಗಾಗಲೇ ಇರುವ ಶೌಚಾಲಯಗಳನ್ನು ಉತ್ತಮ ವಾಗಿ ನಿರ್ವಹಣೆ ಮಾಡಲಾಗುವುದು. ಅಂಗನವಾಡಿ, ಆಶಾ ಹಾಗೂ ಶಿಕ್ಷಕರು ಎಲ್ಲರಲ್ಲೂ ಜಾಗೃತಿ ಮೂಡಿಸಲಿ ದ್ದಾರೆ ಎಂದು ಡಾ.ವಿದ್ಯಾಕುಮಾರಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಉದಯ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News