ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಪ್ರಕರಣ| ಹುಟ್ಟೂರು ಹೆಬ್ರಿ ಕೂಡ್ಲುವಿನಲ್ಲಿ ಆಘಾತ: ರಸ್ತೆ ದುರಸ್ತಿ, ಬಸ್ ವ್ಯವಸ್ಥೆಗೆ ಆಗ್ರಹ

Update: 2024-11-19 17:30 GMT

ಉಡುಪಿ, ನ.19: ನಕ್ಸಲ್ ನಾಯಕ ವಿಕ್ರಂ ಗೌಡ ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ಗೆ ಬಲಿಯಾದ ವಿಚಾರ ತಿಳಿದು ಆತನ ಹುಟ್ಟೂರು ಕೂಡ್ಲುವಿನ ಗ್ರಾಮಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.

‘15ವರ್ಷಗಳಿಂದ ಊರಿಗೆ ಬರದ ವಿಕ್ರಂ ಗೌಡ, ಇದೀಗ ಯಾಕೆ ಬಂದ ಎಂಬುದೇ ಪ್ರಶ್ನೆ ಮತ್ತು ಆತ ಎನ್‌ಕೌಂಟರ್‌ಗೆ ಬಲಿಯಾಗಿರುವುದು ಆಘಾತ ತಂದಿದೆ. ಅವರ ಹೋರಾಟಕ್ಕೆ ಆಯ್ಕೆ ಮಾಡಿಕೊಂಡ ದಾರಿ ಬಗ್ಗೆ ನಾವು ಯಾರು ಕೂಡ ಬೆಂಬಲ ನೀಡಿಲ್ಲ. ಅವನು ಕೂಡ ನಮ್ಮನ್ನು ಅದಕ್ಕೆ ಬರುವಂತೆ ಒತ್ತಾಯ ಕೂಡ ಮಾಡುತ್ತಿರಲಿಲ್ಲ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರು.

‘ಊರಿನ ಜನರನ್ನು ಸೇರಿಸಿ ಆತ ಎಂದಿಗೂ ಸಭೆಗಳನ್ನು ಮಾಡಿಲ್ಲ. ಒಳ್ಳೆಯ ನಡತೆಯ ಯುವಕನಾಗಿ ನಮ್ಮ ಕಣ್ಮುಂದೆ ಇದ್ದ. ಆದರೆ ಆತ ಸಮಸ್ಯೆಗಳ ಪರಿಹಾರಕ್ಕೆ ಆಯ್ಕೆ ಮಾಡಿದ ಮಾರ್ಗ ಸರಿ ಇಲ್ಲ. ಸರಕಾರ ಘೋಷಿಸಿದ ಪ್ಯಾಕೇಜ್ ಬಳಸಿಕೊಂಡು ಶರಣಾಗತಿಯಾಗಿ, ಜನರ ಮಧ್ಯೆ ಇದ್ದುಕೊಂಡೆ ಹೋರಾಟ ನಡೆಸಬಹುದಿತ್ತು’ ಎಂದು ಸ್ಥಳೀಯರಾದ ರಮೇಶ್ ಶೆಟ್ಟಿ ಅಜ್ಜೋಳಿ.

‘ವಿಕ್ರಂ ಗೌಡ ಇಲ್ಲಿಂದ ಹೋಗುವಾಗ ಮದುವೆ ಆಗಿರಲಿಲ್ಲ. ಮುಂದೆ ಆಗಿದ್ದಾನೆಯೇ ಎಂಬುದು ಗೊತ್ತಿಲ್ಲ. ಎಂಟು ವರ್ಷಗಳ ಹಿಂದೆ ಆತನ ತಾಯಿ ತೀರಿ ಹೋದಾಗ ಕೂಡ ಆತ ಊರಿಗೆ ಬಂದಿಲ್ಲ. ಆತ ಎನ್‌ಕೌಂಟರ್‌ಗೆ ಬಲಿಯಾಗಿರುವ ಮಾಹಿತಿ ನಮಗೆ ಮಾಧ್ಯಮಗಳಿಂದ ಗೊತ್ತಾಯಿತು. ತುಂಬಾ ನೋವಾಗಿದೆ’ ಎಂದು ಗ್ರಾಮಸ್ಥರು ಬೇಸರದಿಂದ ನುಡಿದರು.

ಜೈಲಿಗೆ ಪಾಲಾಗಿದ್ದ ಮಾವ: ತನ್ನ ಸೋದರಳಿಯ ವಿಕ್ರಮ್ ಗೌಡನಿಗೆ ಊಟ ಮತ್ತು ವಸತಿ ಒದಗಿಸಿದ್ದಕ್ಕಾಗಿ ಸುಮಾರು 15 ವರ್ಷಗಳ ಹಿಂದೆ ಮಾವ ಕರಿಯಾ ಗೌಡ, ತನ್ನ ಕಿರಿಯ ಮಗನ ಜೊತೆಯಲ್ಲಿ ಜೈಲು ಪಾಲಾಗಿದ್ದರು. ಅದರ ನಂತರ ಅವರು, ವಿಕ್ರಂ ಗೌಡನ ಸಹವಾಸಕ್ಕೆ ಹೋಗಿಲ್ಲ ಮತ್ತು ಅವರ ಕುಟುಂಬದ ಸಂಪರ್ಕವನ್ನೇ ಕಳೆದು ಕೊಂಡಿದ್ದೇನೆ ಎಂದರು.

‘ನಾನು ಅವನಿಂದ ಜೈಲುವಾಸ ಅನುಭವಿಸಬೇಕಾಯಿತು. ವಿಕ್ರಮ್ ತನ್ನ ಬಂಡಾಯ ಮಾರ್ಗಗಳನ್ನು ತ್ಯಜಿಸಿ ಕೃಷಿಯತ್ತ ಗಮನ ಹರಿಸುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದೆ. ಆದರೂ ಆತ ಅದೇ ಮಾರ್ಗವನ್ನು ಆಯ್ಕೆ ಮಾಡಿ ಅದರಲ್ಲಿಯೇ ಮುಂದುವರೆದನು. ಅವನು ನಕ್ಸಲ್‌ಗೆ ಹೋಗಿರುವುದು ಯಾರಿಗೂ ಗೊತ್ತಿಲ್ಲ. ಇವನಿಂದಾಗಿ ಪೊಲೀಸರು ನಮಗೆ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಕರಿಯಾ ನೋವನ್ನು ಹಂಚಿಕೊಂಡರು.

ರಸ್ತೆ, ಬಸ್ ಸೌಲಭ್ಯಕ್ಕೆ ಆಗ್ರಹ: ವಿಕ್ರಂ ಗೌಡನ ಹುಟ್ಟೂರು ಕೂಡ್ಲುವಿನ ಜನರ ಬಹುಮುಖ್ಯ ಬೇಡಿಕೆ ರಸ್ತೆ ನಿರ್ಮಾಣ ಹಾಗೂ ಬಸ್ ವ್ಯವಸ್ಥೆ.

ಹೆಬ್ರಿಯಿಂದ 21 ಕಿ.ಮೀ. ದೂರದಲ್ಲಿರುವ ಕೂಡ್ಲುವಿಗೆ ಬಸ್ ವ್ಯವಸ್ಥೆ ಇಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ಅಳಲು. ಹೆಬ್ರಿಯಿಂದ ನೆಲ್ಲಿಕಟ್ಟೆಯವರೆಗೆ ಬಸ್ ಬರುತ್ತದೆ. ನೆಲ್ಲಿಕಟ್ಟೆಗೆ ನಮ್ಮ ಊರಿನಿಂದ 10 ಕಿ.ಮೀ. ದೂರ ಇದೆ. ಇದರಿಂದ ಗ್ರಾಮಸ್ಥರು ಬಸ್ ವ್ಯವಸ್ಥೆಯೇ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.

ಅದೇ ರೀತಿ ರಸ್ತೆ ಕೂಡ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಆದುದರಿಂದ ಸರಕಾರ ಇಲ್ಲಿನ ಈ ಎರಡು ಬೇಡಿಕೆಗಳನ್ನು ಈಡೇರಿಸಿಕೊಡ ಬೇಕು ಎಂದು ಸ್ಥಳೀಯರಾದ ರಮೇಶ್ ಶೆಟ್ಟಿ ಅಜ್ಜೋಳಿ ಆಗ್ರಹಿಸಿದರು.


ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಾಣ

ವೆಂಕಯ್ಯ ಗೌಡ ಹಾಗೂ ಗುಲಾಬಿ ದಂಪತಿಯ ಮೂವರು ಮಕ್ಕಳಲ್ಲಿ ವಿಕ್ರಂ ಗೌಡ ಹಿರಿಯನಾಗಿದ್ದು, ಇವರ ತಂಗಿ ಸುಗುಣ ಮದುವೆಯ ಬಳಿಕ ಮುಂಬೈ ಯಲ್ಲಿ ವಾಸವಾಗಿದ್ದರು. ಬಳಿಕ ತನ್ನ ಪತಿಯನ್ನು ಕಳೆದುಕೊಂಡ ಅವರು, ಊರಿಗೆ ಬಂದು ತನ್ನ ಪತಿಯ ಮನೆ ಮೇಗದ್ದೆಯಲ್ಲಿ ವಾಸವಾಗಿದ್ದಾರೆ.

ಅದೇ ರೀತಿ ವಿಕ್ರಂ ಗೌಡನ ತಮ್ಮ ಸುರೇಶ್ ಗೌಡ ಮದುವೆಯ ಬಳಿಕ ಮುದ್ರಾಡಿಯಲ್ಲಿ ವಾಸ ಮಾಡಿಕೊಂಡಿದ್ದಾರೆ. ವಿಕ್ರಂ ಗೌಡ ಸಣ್ಣ ಇರುವಾಗಲೇ ತಂದೆಯನ್ನು ಕಳೆದುಕೊಂಡಿದ್ದು, ಇವರ ತಾಯಿ ಗುಲಾಬಿ ಎಂಟು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಆ ಬಳಿಕ ಕೂಡ್ಲುವಿನ ಇವರ ಮನೆಯಲ್ಲಿ ಯಾರು ವಾಸವಾಗಿರಲಿಲ್ಲ. ಕುಸಿಯುವ ಹಂತದಲ್ಲಿದ್ದ ಮನೆಯನ್ನು ತಂಗಿ ಸುಗುಣ ಕೆಡವಿ ಇದೀಗ ಹೊಸ ಮನೆಯನ್ನು ಕಟ್ಟುತ್ತಿದ್ದಾರೆ.

ಮೂಲಭೂತ ಸೌಲಭ್ಯ ವಂಚಿತ ಪೀತ್‌ಬೈಲು!


ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಒಳಗಾದ ನಾಡ್ಪಾಲು ಗ್ರಾಪಂ ವ್ಯಾಪ್ತಿಯ ಪೀತ್‌ಬೈಲು, ಮುದ್ರಾಡಿಯಿಂದ 13ಕಿ.ಮೀ. ಹಾಗೂ ಹೆಬ್ರಿ ಯಿಂದ ಸುಮಾರು 23 ಕಿ.ಮೀ. ದೂರದಲ್ಲಿದೆ.

ಇಲ್ಲಿಗೆ ದುರ್ಗಮ ಕಾಡಿನ ಮಧ್ಯೆ ಇರುವ ಈ ಪ್ರದೇಶಕ್ಕೆ ಹೋಗಲು ಬೆಟ್ಟ ಗುಡ್ಡ ಸಾಗಬೇಕು. ಇಲ್ಲಿನ ರಸ್ತೆ ಕೂಡ ಸಂಪೂರ್ಣ ಹದೆಗೆಟ್ಟಿದ್ದು, ಸುಮಾರು ಎಂಟು ಕಿ.ಮೀ. ದೂರ ರಸ್ತೆ ಸಂಪೂರ್ಣ ಕಲ್ಲಿನಿಂದ ಕೂಡಿದೆ. ಪೀತ್‌ಬೈಲಿನಲ್ಲಿ ಕೇವಲ ಐದೇ ಮನೆಗಳಿದ್ದು, ಅವರಿಗೆ ಸೋಲಾರ್ ವಿದ್ಯುತ್‌ತೇ ಮನೆಗೆ ಬೆಳಕು ನೀಡುತ್ತಿದೆ.

ಬಸ್ ವ್ಯವಸ್ಥೆ ಎಂಬುದು ಈ ಗ್ರಾಮಸ್ಥರ ಕನಸು. ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಸವಾರಿ ಮಾಡಿಕೊಂಡು ಹೋಗುವುದೇ ಬಹಳ ದೊಡ್ಡ ಸಹಾಸದ ಕೆಲಸವಾಗಿದೆ. ಇಲ್ಲಿನ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕರೆದು ಕೊಂಡು ಹೋಗಲು ಈ ರಸ್ತೆಯಲ್ಲಿಯೇ ಸಾಗಬೇಕು. ಕಲ್ಲಿನಿಂದ ಕೂಡಿದ ಈ ರಸ್ತೆಯಲ್ಲಿ ಸಾಗಾಲು ಹರಸಾಹಸ ಪಡುವುದು ಕಂಡುಬರುತ್ತದೆ.

‘ಇಲ್ಲಿ 15-20ವರ್ಷಗಳ ಹಿಂದೆ ನಕ್ಸಲರು ಚಟುವಟಿಕೆಯಿಂದ ಇದ್ದರು. ಈಗ ಯಾರು ಬರುವುದಿಲ್ಲ. ಆಗ ಇಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಇಲ್ಲಿನ ಹೆಚ್ಚಿನವರು ಕೃಷಿಕರಾಗಿ, ಭತ್ತ, ತೆಂಗು, ಅಡಿಕೆ ಮಾಡಿಕೊಂಡು ಬರುತ್ತಿದ್ದಾರೆ. ಇಲ್ಲಿಗೆ ಉತ್ತಮ ರಸ್ತೆ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ನಾವೇ ಜೆಸಿಬಿ ಮೂಲಕ ರಸ್ತೆಯನ್ನು ಅಗೆದು ರಸ್ತೆ ಮಾಡಿ ಓಡಾಟ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಕಬ್ಬಿನಾಲೆಯ ರಾಜೀವ ಗೌಡ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News