ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿ: ಹೆಬ್ರಿ ಕಬ್ಬಿನಾಲೆ ಪೀತ್‌ಬೈಲಿನಲ್ಲಿ ಎಎನ್‌ಎಫ್ ತಂಡದ ಕಾರ್ಯಾಚರಣೆ
ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯಿಂದ ಸುಮಾರು 15 ಕಿ.ಮೀ. ದೂರ ದುರ್ಗಮ ಕಾಡಿನ ಮಧ್ಯೆ ಇರುವ ಪೀತ್‌ಬೈಲು ಎಂಬಲ್ಲಿ ನಕ್ಸಲ್ ನಾಯಕ, ಹೆಬ್ರಿ ಕೂಡ್ಲು ಮೂಲದ ವಿಕ್ರಂ ಗೌಡ ಆಲಿಯಾಸ್ ವಿಕ್ರಂ ಗೌಡ್ಲು ಆಲಿಯಾಸ್ ಶ್ರೀಕಾಂತ್(46)ನನ್ನು ನಕ್ಸಲ್ ನಿಗ್ರಹ ಪಡೆಯು ಸೋಮವಾರ ರಾತ್ರಿ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ.
ಕಳೆದ 15ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಿಕ್ರಂ ಗೌಡ, ನಕ್ಸಲೀಯರ ಕಬಿನಿ-2 ತಂಡವನ್ನು ಮುನ್ನೆಡೆಸುತ್ತಿದ್ದು, ಬಳಿಕ ಆತ ಕೇರಳ ರಾಜ್ಯದಲ್ಲಿ ಸಕ್ರಿಯನಾಗಿರುವ ಬಗ್ಗೆ ತಿಳಿದುಬಂದಿದೆ. ಇದೀಗ ಆತ ಹಾಗೂ ಆತನ ತಂಡ ಪೀತ್‌ಬೈಲಿನ ಮನೆಗೆ ದಿನಸಿ ಕೊಂಡೊಯ್ಯಲು ಬರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತೆನ್ನಲಾಗಿದೆ.
ಅದಕ್ಕಾಗಿ ಕರ್ನಾಟಕ ರಾಜ್ಯ ಆಂತರಿಕ ಭದ್ರತಾ ವಿಭಾಗದ ಅಧೀನದಲ್ಲಿರುವ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜೀತೇಂದ್ರ ದಯಾಮ ನೇತೃತ್ವದ ತಂಡ ಕಳೆದ 10 ದಿನಗಳಿಂದ ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಪೀತಬೈಲಿನಲ್ಲಿರುವ ಮೂರು ಮನೆಗಳಲ್ಲಿದ್ದ ಕುಟುಂಬಗಳನ್ನು ಬೇರೆ ಕಡೆ ವರ್ಗಾಯಿಸಲಾಗಿತ್ತು.
ಮನೆಯೊಳಗೆ ಎನ್‌ಕೌಂಟರ್: ಈ ಸಂಬಂಧ ಎಎನ್‌ಎಫ್ ತಂಡವು ಎರಡು ದಿನಗಳಿಂದ ಪೀತ್‌ಬೈಲಿನಲ್ಲಿ ನಕ್ಸಲೀಯರಿ ಗಾಗಿ ಹೊಂಚು ಹಾಕಿ ಕುಳಿತಿತ್ತು. ಸೋಮವಾರ ರಾತ್ರಿ ವೇಳೆ ಜಯಂತ್ ಗೌಡ ಎಂಬವರ ಮನೆಗೆ ದಿನಸಿ ತರಲು ಬರುತ್ತಿದ್ದ ವಿಕ್ರಂ ಗೌಡ ಹಾಗೂ ಆತನ ತಂಡದ ಮೇಲೆ ಪೊಲೀಸರು ಗುಂಡಿನ ಮಳೆಗೆರಿಯೆತ್ತೆನ್ನಲಾಗಿದೆ.
ಈ ವೇಳೆ ವಿಕ್ರಂ ಗೌಡ ಹಾಗೂ ತಂಡ ಮನೆಯೊಳಗೆ ಸೇರಿಕೊಂಡರು. ಈ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದಾರೆ. ಮೃತ ವಿಕ್ರಂ ಗೌಡ ಕೈಯಲ್ಲಿದ್ದ ಸಶಸ್ತ್ರವನ್ನು ವಶಪಡಿಸಿಕೊಳ್ಳ ಲಾಗಿದೆಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಅಥವಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಹಾಗೂ ಇತರ ತನಿಖಾ ತಂಡಗಳು ಆಗಮಿಸಿ ತನಿಖೆ ನಡೆಸಿದೆ. ಪರಿಸರದಲ್ಲಿ ಬಿಗಿ ಪೊಲೀಸ್ ಭದ್ರತೆ ಯನ್ನು ಒದಗಿಸಲಾಗಿದೆ.
ಐಜಿಪಿ ರೂಪಾ ಭೇಟಿ: ಬೆಳಗ್ಗೆ 11ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಡಿ., ಮಂಗಳೂರು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಸ್ಥಳಕ್ಕೆ ಆಗಮಿಸಿ ಸುಮಾರು ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು.
ಮಧ್ಯಾಹ್ನ ವೇಳೆ ಸ್ಥಳ ಮಹಜರು ಪ್ರಕ್ರಿಯೆ ನಡೆಸಿ, ಬಳಿಕ ಮೃತದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವಗಾರಕ್ಕೆ ತರಲಾಯಿತು. ನ್ಯಾಯಾಂಗ ತನಿಖೆ ಹಿನ್ನೆಲೆಯಲ್ಲಿ ರಾತ್ರಿ ವೇಳೆ ನ್ಯಾಯಾಧೀಶರು ಶವ ಪಂಚೆನಾಮೆಯನ್ನು ನಡೆಸಿದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಮೃತ ವಿಕ್ರಂ ಗೌಡ ಅವರ ಸಹೋದರಿ ಹಾಗೂ ಸಹೋದರನಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ವಿಕ್ರಂ ಗೌಡ ವಿರುದ್ಧ 61 ಪ್ರಕರಣಗಳು
ವಿಕ್ರಂ ಗೌಡ ವಿರುದ್ಧ ಕೊಲೆ ಸುಲಿಗೆ ಸಂಬಂಧ ಕರ್ನಾಟಕದಲ್ಲಿ 42 ಮತ್ತು ಕೇರಳದಲ್ಲಿ 19 ಸೇರಿದಂತೆ ಒಟ್ಟು 61 ಪ್ರಕರಣ ಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದದಾರೆ.
ಇದರಲ್ಲಿ ಮುಖ್ಯವಾಗಿ 2008ರ ಮೇ15ರಂದು ಹೆಬ್ರಿ ಸಮೀಪದ ಸೀತಾನದಿ ಬಳಿ ನಡೆದ ಶಿಕ್ಷಕ ಭೋಜ ಶೆಟ್ಟಿ ಹಾಗೂ ಆತನ ಗೆಳೆಯ ಕೃಷಿಕ ಸುರೇಶ್ ಶೆಟ್ಟಿ ಹತ್ಯೆ, 2011ರ ಡಿ.28ರಂದು ತೆಂಗಿನಮಾರುವಿನಲ್ಲಿ ನಡೆದ ಸದಾಶಿವ ಗೌಡನ ಹತ್ಯೆ ಪ್ರಕರಣ ಹಾಗೂ 2005ರ ಜು.28ರಂದು ಕಬ್ಬಿನಾಲೆ ಗ್ರಾಮದ ಮತ್ತಾವು ಕ್ರಾಸ್ ಬಳಿ ನೆಲಬಾಂಬ್ ಸ್ಫೋಟಿಸಿ ಪೊಲೀಸ್ ಜೀಪಗಳಿಗೆ ಹಾನಿ ಹಾಗೂ 14ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಗಾಯಗೊಳಿಸಿದ ಪ್ರಕರಣಗಳು ಈತ ವಿರುದ್ಧ ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳಲ್ಲಿ ಈತ ತಲೆಮರೆಸಿ ಕೊಂಡಿದ್ದ ಮೋಸ್ಟ್ ವಾಂಟೆಡ್ ಆರೋಪಿ ಎಂಬುದಾಗಿ ಪೊಲೀಸರು ಘೋಷಿಸಿದ್ದರು.
ಕೇರಳ ರಾಜ್ಯದಲ್ಲೂ ವಿಕ್ರಂ ಗೌಡ ವಿರುದ್ಧ 19 ಪ್ರಕರಣಗಳಿರುವುದರಿಂದ ಉಡುಪಿಗೆ ಕೇರಳ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾರು ಈ ವಿಕ್ರಂ ಗೌಡ?
ನಾಡ್ಪಾಲು ಗ್ರಾಪಂ ವ್ಯಾಪ್ತಿಯ ಹೆಬ್ರಿಯಿಂದ ಸುಮಾರು 20 ಕಿ.ಮೀ. ದೂರದ ಸೋಮೇಶ್ವರ ಅಭಯಾರಣ್ಯದಲ್ಲಿರುವ ಕೂಡ್ಲು ಗ್ರಾಮದ ನಿವಾಸಿ ದಿವಂಗತ ವೆಂಕಯ್ಯ ಗೌಡ ಹಾಗೂ ದಿವಂಗತ ಗುಲಾಬಿ ದಂಪತಿ ಪುತ್ರ. ನಾಲ್ಕನೇ ತರಗತಿ ಯವರೆಗೆ ಹೆಬ್ರಿಯಲ್ಲಿ ವಸತಿ ಶಾಲಾ ಶಿಕ್ಷಣ ಪಡೆದ ವಿಕ್ರಂ ಬಳಿಕ ಹೆಬ್ರಿ ಶ್ರೀಗಣೇಶ್ ಹೊಟೇಲಿನಲ್ಲಿ ಕೆಲಸಕ್ಕೆ ಸೇರಿಕೊಂಡರು. ನಂತರ ತನ್ನ ಮನೆಯ ಅಡಿಕೆ ತೋಟವನ್ನು ನೋಡಿಕೊಂಡಿದ್ದನು. ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಂಪಿನಲ್ಲಿಯೂ ಕೆಲಸ ಮಾಡಿ ಕೊಂಡಿದ್ದರು. ಮುಂದೆ ಅರಣ್ಯ ಇಲಾಖೆಯ ದೌರ್ಜನ್ಯ ಹಾಗೂ ಸರಕಾರದ ನೀತಿ ವಿರುದ್ಧ ವಿಕ್ರಂ ಗೌಡ ಕರ್ನಾಟಕ ವಿಮೋಚನಾ ರಂಗದೊಂದಿಗೆ ಸೇರಿ ಪ್ರತಿಭಟನೆ, ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಎನ್ನಲಾಗಿದೆ.
ಕ್ರಮೇಣ ಈತ ನಕ್ಸಲ್ ಸಿದ್ಧಾಂತಕ್ಕೆ ಮಾರು ಹೋದ ಸುಮಾರು 20ವರ್ಷ ಗಳ ಹಿಂದೆ ಶಸ್ತ್ರಾಸ್ತ ಹೋರಾಟಕ್ಕೆ ಇಳಿದಿದ್ದನು. ಅದರ ಬಳಿಕ ಎರಡು ಮೂರು ಬಾರಿ ತನ್ನ ಗ್ರಾಮಕ್ಕೆ ಬಂದಿದ್ದ ವಿಕ್ರಂ ಗೌಡ ಬಳಿಕ ನಾಪತ್ತೆಯಾಗಿದ್ದನು. ಇದೀಗ ಬರೋಬರಿ 15ವರ್ಷಗಳ ಬಳಿಕ ಆತನ ತನ್ನ ಮನೆಯಿಂದ ಕೇವಲ ಏಳೆಂಟು ಕಿ.ಮೀ. ದೂರದಲ್ಲಿನ ನಾಡ್ಪಾಲು ಗ್ರಾಮದ ಪೀತ್‌ಬೈಲು ಎಂಬಲ್ಲಿ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.
ಮಾಧ್ಯಮಗಳ ಪ್ರವೇಶಕ್ಕೆ ತಡೆ
ಎನ್‌ಕೌಂಟರ್ ಮಾಹಿತಿ ತಿಳಿದು ಮಂಗಳವಾರ ಘಟನಾ ಸ್ಥಳಕ್ಕೆ ಮಾಧ್ಯಮ ಗಳ ದಂಡು ಆಗಮಿಸಿದ್ದು, ಆದರೆ ಘಟನಾ ಸ್ಥಳದಿಂದ ಸುಮಾರು 500 ಮೀಟರ್ ಹಿಂದೆಯೇ ಮಾಧ್ಯಮದವರನ್ನು ಮುಂದೆ ಹೋಗಂದತೆ ತಡೆಯಲಾಗಿತ್ತು.
ಘಟನೆ ನಡೆದ ಜಯಂತ್ ಗೌಡ ಎಂಬವರ ಮನೆ ಸಮೀಪ ಇರುವ ಕಿರು ಸೇತುವೆಯಿಂದ ಮುಂದಕ್ಕೆ ಸಾಗಲು ಯಾರಿಗೂ ಅವಕಾಶ ನೀಡಲಿಲ್ಲ. ಈ ಮೂಲಕ ಪೊಲೀಸರು ವಿಕ್ರಂ ಗೌಡನ ಮೃತದೇಹ ಹಾಗೂ ಘಟನಾ ಸ್ಥಳವನ್ನು ಗೌಪ್ಯವಾಗಿ ಇರಿಸಿದ್ದರು. ಅಲ್ಲದೇ ಮೃತದೇಹ ಯಾವುದೇ ವಿಡಿಯೋ ಆಗಲಿ, ಫೋಟೋವನ್ನಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿಲ್ಲ.
ಎಎನ್‌ಎಫ್ ಮುಕುಟಕ್ಕೆ ದೊರೆತ ಗರಿ: ಐಜಿಪಿ ರೂಪಾ
ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ನಾವು ಶರಣಾಗು ವಂತೆ ಅವರಿಗೆ ಎಚ್ಚರಿಕೆ ನೀಡಿದೆವು. ಆದರೆ ಅವರು ಅದಕ್ಕೆ ಮಣಿಯದೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ಎನ್‌ಕೌಂಟರ್ ನಲ್ಲಿ ವಿಕ್ರಂ ಗೌಡ ಹತರಾಗಿದ್ದಾರೆ. ಇದು ನಕ್ಸಲ್ ನಿಗ್ರಹ ಪಡೆಯ ಮುಕುಟಕ್ಕೆ ದೊರೆತ ಗರಿಯಾಗಿದೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಡಿ. ತಿಳಿಸಿದ್ದಾರೆ.
ಎನ್‌ಕೌಂಟರ್ ನಡೆದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ವಿಕ್ರಂ ಗೌಡ ವಿರುದ್ಧ ಕೊಲೆ ಸುಲಿಗೆ ಸಂಬಂಧ ಕರ್ನಾಟಕದಲ್ಲಿ 42 ಮತ್ತು ಕೇರಳದಲ್ಲಿ 19 ಸೇರಿದಂತೆ ಒಟ್ಟು 61 ಪ್ರಕರಣಗಳು ದಾಖಲಾಗಿವೆ. ಅರಣ್ಯದಲ್ಲಿ ನ.10ರಿಂದ 10 ದಿನಗಳಿಂದ ನಿರಂತರ ಕೂಮಿಂಗ್ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ನಕ್ಸಲರ ಬಗ್ಗೆ ಮಾಹಿತಿ ಕಲೆ ಹಾಕಿ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದರು.
ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಗುಣಮೋಹನ್ ಪಿ. ಇತ್ತೀಚೆಗೆ ಅರಣ್ಯದಲ್ಲಿ ಕೂಮಿಂಗ್ ಕಾರ್ಯಾಚರಣೆ ಭಾಗವಹಿಸಿ ಮಾರ್ಗದರ್ಶನ ನೀಡಿದ್ದರು. ಈ ಕಾರ್ಯಾಚರಣೆ ಗುಪ್ತಚಾರ ವಿಭಾಗ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ನಡೆದಿದೆ. ಎಂದು ಅವರು ತಿಳಿಸಿದರು
ಎಎನ್‌ಎಫ್ 2005 ಮೇ ತಿಂಗಳಿನಲ್ಲಿ ಸ್ಥಾಪನೆಗೊಂಡಿದ್ದು, ಆ ಬಳಿಕ ನಡೆದ ನಾಲ್ಕನೇ ಎನ್ಕೌಂಟರ್ ಇದಾಗಿದೆ. ವಿಕ್ರಂ ಗೌಡನ ಜತೆಗೆ ಇನ್ನು ಐದಾರು ಮಂದಿ ಇದ್ದಾರೆ. ಅವರು ಹೇಗೆ ಮುಂದೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡ ಬೇಕಾಗಿದೆ. ನಮ್ಮ ಕೂಮಿಂಗ್ ಕಾರ್ಯಾಚರಣೆಯು ನಿರಂತರವಾಗಿ ಮುಂದುವರಿಸಯುತ್ತದೆ ಎಂದು ಅವರು ಹೇಳಿದರು.
ನಕ್ಸಲ್ ವಿರುದ್ಧದ ಕೂಮಿಂಗ್ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ಕೆಎಸ್‌ಐಎಸ್‌ಎಫ್‌ನ 75 ಮತ್ತು ಶಿವಮೊಗ್ಗದಿಂದ 25 ಮಂದಿ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ಭಾಗವಹಿಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು ಎಲ್ಲ ವಿಚಾರವನ್ನು ಇಲ್ಲಿ ಹೇಳಲು ಆಗುವುದಿಲ್ಲ ಎಂದು ಅವರು ರೂಪಾ ತಿಳಿಸಿದರು.
ನಾಲ್ಕನೇ ಎನ್‌ಕೌಂಟರ್: ಆರನೇ ಬಲಿ
ಉಡುಪಿ ಜಿಲ್ಲೆಯಲ್ಲಿ ಮೊತ್ತ ಮೊದಲ ಎನ್‌ಕೌಂಟರ್ ನಡೆದಿರುವುದು 2003ರ ನವೆಂಬರ್ 17ರಂದು ಕಾರ್ಕಳ ತಾಲೂಕು ಈದುವಿನ ಬಲ್ಯೊಟ್ಟು ಎಂಬಲ್ಲಿ. ಇಲ್ಲಿ ನಡೆದ ಎನ್‌ಕೌಂಟರ್‌ಗೆ ಪಾರ್ವತಿ ಮತ್ತು ಹಾಜಿಮಾ ಪೊಲೀಸ್ ಗುಂಡಿಗೆ ಬಲಿಯಾಗಿದ್ದರು.
ಬಳಿಕ 2005ರ ಜೂನ್ 23ರಂದು ಕುಂದಾಪುರ ತಾಲೂಕು ಹಳ್ಳಿಹೊಳೆ ಸಮೀಪದ ದೇವರಬಾಳು ಎಂಬಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರ ಗುಂಡಿಗೆ ಬೆಳಗಾವಿಯ ಅಜಿತ್ ಕುಸುಬಿ ಮತ್ತು ಉಮೇಶ್ ಬಣಕಲ್ ಎಂಬವರು ಮೃತಪಟ್ಟಿದ್ದರು.
2010ರ ಮಾ.1ರಂದು ಕಾರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿ ಎಂಬಲ್ಲಿ ನಡೆದ ಪೊಲೀಸರ ಎನ್‌ಕೌಂಟರ್‌ನಲ್ಲಿ ಬೆಳ್ತಂಗಡಿ ತಾಲೂಕು ಕುತ್ಲೂರಿನ ವಸಂತ ಗೌಡ್ಲು ಯಾನೆ ಆನಂದನ ಹತ್ಯೆ ಮಾಡಲಾಗಿತ್ತು. ಇದೀಗ ನಡೆದ ಎನ್‌ಕೌಂಟರ್ ನಾಲ್ಕನೇಯದ್ದಾಗಿದ್ದು, ವಿಕ್ರಂ ಗೌಡ ಆರನೆ ಬಲಿಯಾಗಿದ್ದಾರೆ.
‘ಅಣ್ಣ ವಿಕ್ರಂ ಮನೆ ಬಿಟ್ಟು ಹೋಗಿ 21ವರ್ಷಗಳಾಗಿತ್ತು. ಅದರ ನಂತರ ಆತನ ನಮಗೆ ಯಾವುದೇ ಸಂಪರ್ಕ ಇರಲಿಲ್ಲ. ಅವ ಮನೆ ಬಿಟ್ಟು ಹೋಗುವಾಗ ಮುಂಬೈಯಲ್ಲಿ ಇದ್ದೆ. ಯಾಕಾಗಿ ಅವ ಅದಕ್ಕೆ ಹೋದ ಎಂಬುದು ನನಗೆ ಗೊತ್ತಿಲ್ಲ. ಅವನು ನಾಲ್ಕನೆ ತರಗತಿಯವರೆಗೆ ಓದಿದ್ದಾನೆ. ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ ವಿಕ್ರಂ, ಬಳಿಕ ನಮ್ಮ ಮನೆಯ ತೋಟದ ಕೆಲಸ ಮಾಡಿಕೊಂಡಿದ್ದನು. ನಾವೆಲ್ಲ ಬಾಲ್ಯದಲ್ಲಿ ಒಟ್ಟಿಗೆ ಇದ್ದೆವು. ನನಗೆ ಮದುವೆ ಮಾಡಿಸಿದ್ದು ಕೂಡ ಅವನೇ’
-ಸುಗುಣ, ಮೃತ ವಿಕ್ರಂ ಗೌಡನ ತಂಗಿ