‘ನಕಲಿ ಎನ್‌ಕೌಂಟರ್’ ಅನುಮಾನ: ನ್ಯಾಯಾಂಗ ತನಿಖೆಗೆ ಆಗ್ರಹ

Update: 2024-11-24 15:52 GMT

ಹೆಬ್ರಿ, ನ.24: ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಡೆದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಪೀತ್‌ಬೈಲು ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ಸಾಮಾಜಿಕ ಕಾರ್ಯಕರ್ತರ ನಿಯೋಗ, ಈ ಕುರಿತು ಪರಿಶೀಲನೆ ನಡೆಸಿ, ಇದೊಂದು ನಕಲಿ ಎನ್‌ಕೌಂಟರ್ ಎಂಬುದಾಗಿ ಅಭಿಪ್ರಾಯ ಪಟ್ಟಿದೆ. ಆದುದರಿಂದ ಈ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ನಿಯೋಗ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಕಾವ್ಯ ಅಚ್ಯುತ್, ನಿತಿನ್ ಬಂಗೇರ ಅವರ ನ್ನೊಳಗೊಂಡ ನಿಯೋಗ, ಎನ್ ಕೌಂಟರ್ ನಡೆದಿದೆ ಎನ್ನಲಾದ ಜಯಂತ್ ಗೌಡರ ಮನೆಗೆ ಭೇಟಿ ನೀಡಿದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶದ ಆದಿವಾಸಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದೆ.

ಈ ಬಗ್ಗೆ ಮಾತನಾಡಿದ ಮುನೀರ್ ಕಾಟಿಪಳ್ಳ, ಘಟನಾ ಸ್ಥಳವನ್ನು ನೋಡಿದಾಗ ಇದೊಂದು ಎನ್‌ಕೌಂಟರ್ ಅಲ್ಲ, ನಕಲಿ ಎನ್‌ಕೌಂಟರ್ ನಡೆಸಿ, ಉದ್ದೇಶಪೂರ್ವಕವಾಗಿ ವಿಕ್ರಂ ಗೌಡನನ್ನು ಹತ್ಯೆ ಮಾಡಲಾಗಿದೆ ಎಂಬ ಸಂಶಯ ಗಳು ಬಲವಾ ಗುತ್ತವೆ. ಆದುದರಿಂದ ಈ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಆಗಬೇಕು. ಅದಕ್ಕಾಗಿ ಹಿರಿಯ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿ ರಚಟನೆ ಮಾಡಿ ಎನ್‌ಕೌಂಟರ್ ಸುತ್ತ ತನಿಖೆ ನಡೆಸಬೇಕು. ಆ ಮೂಲಕ ಸತ್ಯಾಸತ್ಯತೆಯನ್ನು ಜನರ ಮುಂದೆ ಪಾರದರ್ಶಕವಾಗಿ ಇಡಬೇಕು ಎಂದು ಒತ್ತಾಯಿಸಿದರು.

ಈ ಬೆಳವಣಿಗೆಯ ಬಗ್ಗೆ ಮಲೆಕುಡಿಯರು ಭಯ ಪಡಬೇಕಾದ ಅಗತ್ಯ ಇಲ್ಲ. ಯಾವುದೇ ಕಾರಣಕ್ಕೂ ನಕ್ಸಲ್ ಚಳವಳಿಗೆ ಬೆಂಬಲ ನೀಡಬಾರದು. ಅದರೊಂದಿಗೆ ಕಸ್ತೂರಿ ರಂಗನ್ ವರದಿ ವಿರುದ್ಧ, ಮೂಲಭೂತ ಸೌಲಭ್ಯಗಳಿಗಾಗಿ ಹಾಗೂ ಅರಣ್ಯದ ಮೇಲಿನ ಹಕ್ಕಿಗಾಗಿ ಪ್ರಜಾಸತ್ತತ್ಮಾಕ ಹೋರಾಟವನ್ನು ಕೈಬಿಡಬಾರದು. ಕುಡಿಯುವ ನೀರು, ಶಾಲೆ,ಆ ಆಸ್ಪತ್ರೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ತಮ್ಮ ಹೋರಾಟವನ್ನು ಮುಂದು ವರೆಸಬೇಕು ಎಂದು ಅವರು ತಿಳಿಸಿದರು.

ಎನ್‌ಕೌಂಟರ್‌ಗೆ ಸಂಬಂಧಿಸಿ ಪೊಲೀಸರ ಹೇಳಿಕೆ ಹಾಗೂ ಇಲ್ಲಿನ ವಾತಾವರಣ ವ್ಯತಿರಿಕ್ತವಾಗಿದೆ. ಇಲ್ಲಿನ ಮೂರು ಮನೆ ಗಳನ್ನು ಎಎನ್‌ಎಫ್ ನವರು ವಶಕ್ಕೆ ಪಡೆದುಕೊಂಡು ಎರಡು ಮನೆಗಳಲ್ಲಿ ಅವರೇ ವಾಸವಾಗಿದ್ದಾರೆ. ಇಲ್ಲಿ ಗುಂಡಿನ ಚಕಮಕಿ ಆಗಿರುವುದಕ್ಕೆ ಯಾವುದೇ ಪುರಾವೆಗಳು ಕಂಡುಬರು ತ್ತಿಲ್ಲ. ಯಾವುದೇ ಹಾನಿಗಳು ಕೂಡ ಕಾಣಸಿಕ್ಕಿಲ್ಲ. ಆದುದ ರಿಂದ ಪೊಲೀಸರು ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿ ಹತ್ಯೆಮಾಡಿದ್ದಾರೆಂಬ ನಾಗರಿಕ ಸಮಾಜದ ಅನುಮಾನಕ್ಕೆ ಇದೆಲ್ಲವೂ ಪುಷ್ಠಿ ನೀಡುತ್ತದೆ ಎಂದರು.

ನವೀನ್ ಸೂರಿಂಜೆ ಮಾತನಾಡಿ, ಪೊಲೀಸ್ ಮತ್ತು ನಕ್ಸಲರ ಮುಖಾ ಮುಖಿ ಆಗಿರುವುದಕ್ಕೆ ಯಾವುದೇ ಸಾಕ್ಷ್ಯಗಳು ಜಯಂತ್ ಗೌಡರ ಮನೆಯಲ್ಲಿ ಲಭ್ಯವಾಗುತ್ತಿಲ್ಲ. ಪೊಲೀಸರು ಕಾರ್ಯಾಚರಣೆ ವೇಳೆ ಇಲ್ಲಿನ ಮೂರು ಮನೆಯವರನ್ನು ಯಾಕೆ ತೆರವು ಮಾಡಲಾಗಿದೆ ಎಂಬುದು ಪ್ರಶ್ನೆಯಾಗಿದೆ. ಪೊಲೀಸರ ಇರಿಸಲು ಈ ಮನೆಗಳನ್ನು ಖಾಲಿ ಮಾಡಲಾಗಿ ದೆಯೇ? ಇದೀಗ ಆ ಎರಡೂ ಮನೆಗಳಲ್ಲಿ ಎಎನ್‌ಎಫ್ ಪೊಲೀಸರು ಉಳಿದುಕೊಂಡಿದ್ದಾರೆ ಎಂದು ಹೇಳಿದರು.

ಇಡೀ ಪ್ರಕರಣದ ಸುತ್ತ ಹಲವಾರು ಅನುಮಾನಗಳಿವೆ. ಪೊಲೀಸರು ಎನ್‌ಕೌಂಟರ್‌ಗೆ ಇದೇ ಪ್ರದೇಶ ಮತ್ತು ಇವರದ್ದೆ ಮನೆಯನ್ನು ಯಾಕೆ ಆಯ್ಕೆ ಮಾಡಿದ್ದಾರೆ ಎಂಬುದು ಕೂಡ ಪ್ರಶ್ನೆಯಾಗಿದೆ. ಈ ಪ್ರದೇಶ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವುದರಿಂದ ಅದರ ವಿರುದ್ಧ ಹೋರಾಟ ಮಾಡಬಾರದು ಮತ್ತು ಜನರು ಅದಕ್ಕೆ ಬೆಂಬಲ ಕೊಡಬಾರದು ಎಂಬ ಸಂದೇಶವನ್ನು ನೀಡಲಾಗಿದೆ. ಅದಕ್ಕಾಗಿ ಈ ಮನೆಯನ್ನು ಬಳಸಿಕೊಂಡು ಕೃತ್ಯ ಎಸಗಲಾಗಿದೆ. ಇಲ್ಲಿ ಯಾವುದೇ ಗುಂಡಿನ ಚಕವಕಿಯಾಗಿಲ್ಲ. ಇದೊಂದು ನಕಲಿ ಎನ್‌ಕೌಂಟರ್ ಎಂಬುದು ಸ್ಪಷ್ಟವ ಆಗುತ್ತದೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News