ಯಕ್ಷಗಾನ ಅಕಾಡೆಮಿಯಿಂದ ತರಬೇತಿಗೆ ವಿಶೇಷ ಪ್ರೋತ್ಸಾಹ: ತಲ್ಲೂರು
ಕುಂದಾಪುರ, ನ.24: ಹಿಂದೆ ಯಕ್ಷಗಾನ ಎಂಬುದು ದೊಡ್ಡವರಿಗೆ ಮಾತ್ರ ಸೀಮಿತವಾದ ಕಲೆಯಾಗಿತ್ತು. ಅಂದರೆ ಯಕ್ಷಗಾನದಲ್ಲಿ ಹಿರಿಯರು ಮಾತ್ರ ಭಾಗವಹಿಸುತ್ತಿದ್ದರು. ಯಕ್ಷಗಾನದ ಪುರಾಣ ಕಥೆಗಳು, ಯಕ್ಷಗಾನ ನಡೆಯುವ ಸಮಯ, ಅದರ ಕಠಿಣವಾದ ವೇಷಭೂಷಣಗಳು ಇವೆಲ್ಲ ಕಾರಣದಿಂದ ಹಿರಿಯರು ಮಾತ್ರ ಯಕ್ಷಗಾನದಲ್ಲಿ ಭಾಗವಹಿಸು ತ್ತಿದ್ದರು. ಆದರೆ ಮಕ್ಕಳಿಗೂ ಯಕ್ಷಗಾನದಲ್ಲಿ ಭಾಗವಹಿಸಲು ಸಾಧ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ಪಾರಂಪಳ್ಳಿ ಪ್ರಾಯೋಜಕತ್ವದಲ್ಲಿ ಸಾಲಿಗ್ರಾಮ ಶ್ರೀಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಸಹಕಾರೊಂದಿಗೆ ಸಾಲಿಗ್ರಾಮ ಮಕ್ಕಳ ಮೇಳ ಕೋಟ ಇದರ ಐವತ್ತರ ವರ್ಷದ ಸುವರ್ಣ ಪರ್ವದ 3ನೇ ಕಾರ್ಯಕ್ರಮವಾಗಿ ಶನಿವಾರ ಸಾಲಿಗ್ರಾಮದ ಶ್ರೀಗುರುನರಸಿಂಹ ದೇವಳದಲ್ಲಿ ಹಮ್ಮಿಕೊಳ್ಳಲಾದ ಗೌರವ ಸಮ್ಮಾನ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರಸ್ತುತ ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಗಾನ ತರಬೇತಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಯಕ್ಷಗಾನ ತರಗತಿ, ಯಕ್ಷಗಾನದ ಹೆಜ್ಜೆಗಾರಿಕೆ, ಯಕ್ಷಗಾನ ನಾಟ್ಯಾಭಿನಯ, ಯಕ್ಷಗಾನದ ಭಾಗವತಿಕೆ, ಹಿಮ್ಮೇಳ ತರಗತಿ ಗಳನ್ನು ನಡೆಸಲು ನಾವು ವಿಶೇಷ ಪ್ರೋತ್ಸಾಹ ಕೊಡುತ್ತಿದ್ದೇವೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಗುರು ಸರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮಾತನಾಡಿ, ಮಕ್ಕಳಿಗೆ ಎಷ್ಟೇ ಭಾಷೆ ಕಲಿಸಿದರೂ ಅವರು ಕಲಿಯುತ್ತಾರೆ. ಈ ಸಣ್ಣ ಪ್ರಾಯದಲ್ಲಿ ಅವರಿಗೆ ಯಕ್ಷಗಾನ ದಂತಹ ಕಲೆಗಳಲ್ಲಿ ತೊಡಗಿಸಿಕೊಂಡರೆ ಅವರಿಂದ ಸಮಾಜಕ್ಕೆ ಭವಿಷ್ಯದಲ್ಲಿ ಉತ್ತಮ ಕೊಡುಗೆ ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಕ್ಕಳ ಮೇಳದ ಕಾರ್ಯ ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ಮಕ್ಕಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಎನ್.ಮಧ್ಯಸ್ಥ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಅಂಚೆ ಪಾಲಕ ಪಿ.ಸದಾಶಿವ ಮಧ್ಯಸ್ಥ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಲಕ್ಷ್ಮಿ ನಾರಾಯಣ ಮಧ್ಯಸ್ಥ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್.ಶ್ರೀಧರ ಹಂದೆ ಕೋಟ, ಕೋಟ ಸಿ.ಎ.ಬ್ಯಾಂಕಿನ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಎಚ್.ಸುಜಯೀಂದ್ರ ಹಂದೆ ಸ್ವಾಗತಿಸಿದರು. ಉಪಾಧ್ಯಕ್ಷ ಎಚ್.ಜನಾರ್ದನ ಹಂದೆ ವಂದಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ಕೋಟ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳ ಮೇಳದ ಕಲಾವಿದರಿಂದ ’ವೀರ ವೃಷಸೇನ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.