ಉಡುಪಿ ಮ್ಯಾರಥಾನ್‌ಗೆ ಪೂರ್ವಭಾವಿಯಾಗಿ ‘ಪ್ರೊಮೊ ರನ್’
ಉಡುಪಿ, ನ.24: ಉಡುಪಿ ಲೋಂಬಾರ್ಡ್ ಮಿಷನ್ ಆಸ್ಪತ್ರೆಯ ವತಿಯಿಂದ ಡಿ.1ರಂದು ಹಮ್ಮಿಕೊಳ್ಳಲಾದ ಉಡುಪಿ ಮ್ಯಾರಥಾನ್‌ಗೆ ಪೂರ್ವ ಭಾವಿಯಾಗಿ ‘ಪ್ರೊಮೊ ರನ್’ ಓಟವನ್ನು ಇಂದು ಏರ್ಪಡಿಸಲಾಗಿತ್ತು.
ಆಸ್ಪತ್ರೆಯ ಎದುರು ಹಮ್ಮಿಕೊಳ್ಳಲಾದ ಓಟಕ್ಕೆ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಧ್ವಜ ಬೀಸುವ ಮೂಲಕ ಚಾಲನೆ ನೀಡಿದರು.
ಪ್ರಚಾರ ಓಟವು ಆಸ್ಪತ್ರೆಯಿಂದ ಪ್ರಾರಂಭವಾಗಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಸುತ್ತಿ ಆಸ್ಪತ್ರೆಯ ವಠಾರದಲ್ಲಿ ಸಮಾಪ್ತಿಗೊಂಡಿತು. ರನ್ನರ್ಸ್ ಕ್ಲಬ್‌ನ ಅಧ್ಯಕ್ಷ ತಿಲಕ್ ಚಂದ್ರ ಹಾಗೂ ತಂಡದವರು ಭಾಗವಹಿಸಿದರು. ಆಶಾ ನಿಲಯದ ಮಕ್ಕಳಿಂದ ಆಕರ್ಷಕ ಬ್ಯಾಂಡ್ ನಡೆಯಿತು.
ಮಲ್ಪೆಯ ಸಿವಾಕ್‌ನಲ್ಲಿ ಆಯೋಜಿಸಲಾದ ಮ್ಯಾರಥಾನ್‌ನಲ್ಲಿ 21ಕಿ.ಮೀ., 10ಕಿ.ಮೀ., 5ಕಿ.ಮೀ. ಮತ್ತು ಉಡುಪಿ ಶಾಲಾ ವಿದ್ಯಾರ್ಥಿಗಳಿಗಾಗಿ 5 ಕಿ.ಮೀ. ಮತ್ತು 3ಕಿ.ಮೀ. ಮೋಜಿನ ಓಟವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಸುಮಾರು 2000 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಡಾ.ಸುಶೀಲ್ ಜತ್ತನ್ನ ತಿಳಿಸಿದರು.
ಆಸ್ಪತ್ರೆ ಆರಂಭವಾಗಿ 100 ವರ್ಷಗಳ ಪೂರ್ಣಗೊಂಡಿರುವ ನೆನಪಿಗಾಗಿ ಉಡುಪಿ ರನ್ನರ್ಸ್ ಕ್ಲಬ್ ಮತ್ತು ಲೋಂಬಾರ್ಡ್ ಆಸ್ಪತ್ರೆಯ ಪ್ರಾಯೋಜಕತ್ವ ದಲ್ಲಿ ಡಿ.1ರಂದು ನಡೆಯಲಿರುವ ಮ್ಯಾರಥಾನ್ ಸ್ಪರ್ಧೆಯಲ್ಲಿ ವಿವಿಧ ವಯೋಮಾನದವರಿಗೆ ವಿಭಾಗಗಳಿಲ್ಲಿದ್ದು ವಿಶೇಷ ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.