ಕಾಂಗ್ರೆಸ್ ಪಕ್ಷದ ಸ್ವಚ್ಚ ಜನಪರ ಅಡಳಿತಕ್ಕೆ ಸಂದ ಜಯ : ಬಿಪಿನ್ ಚಂದ್ರ ಪಾಲ್

Update: 2024-11-24 08:47 GMT

ಸಾಂದರ್ಭಿಕ ಚಿತ್ರ (PTI)

ಕಾರ್ಕಳ : ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಕಾಂಗ್ರೆಸ್ ಪಕ್ಷದ ಸ್ವಚ್ಚ ಜನಪರ ಅಡಳಿತಕ್ಕೆ ಸಂದ ಜಯ. ಇದು ಕಾಂಗ್ರೆಸ್ ಆಡಳಿತದ ಮೇಲೆ ಬಿಜೆಪಿ ಮಾಡಿದ ರಾಜಕೀಯ ಪ್ರೇರಿತ ದುರುದ್ಧೇಶಿತ ಮಿಥ್ಯಾರೋಪಗಳಿಗೆ ಸಂದ ಅಪಜಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

ಮುಡಾ ಹಗರಣ, ವಾಲ್ಮೀಕಿ ಹಗರಣಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಡಳಿತಕ್ಕೆ ಮಸಿ ಬಳಿಯಲು ನೋಡಿ ನಿರೀಕ್ಷಿತ ರಾಜಕೀಯ ಲಾಭ ಪಡೆಯಲು ವಿಫಲವಾದ ಬಿಜೆಪಿ ತನ್ನದೇ ಬಾಹುಳ್ಯದ ಚೆನ್ನಪಟ್ಟಣದಲ್ಲಿ ತನ್ನ ಆಸ್ತಿತ್ವವನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುವಂತಾಗಿದೆ. ತನ್ನದೇ ಆಡಳಿತಾವಧಿಯಲ್ಲಿ ತಂದಿದ್ದ ವಕ್ಫ್ ಬೋರ್ಡ್ ಭೂ ಅತಿಕ್ರಮಣ ಪ್ರಕರಣವನ್ನು ಅಧಿಕಾರಶಾಹಿ ವರ್ಗವನ್ನು ಬಳಸಿಕೊಂಡು ಕಾಂಗ್ರೆಸ್ ಸರಕಾರದ ತಲೆಗೆ ಕಟ್ಟಿ ಚುನಾಣಾಪೂರ್ವ ಗಲಭೆ ಹುಟ್ಟುಹಾಕಲು ನೋಡಿ ಕೈ ಸುಟ್ಟು ಕೊಂಡ ಬಿಜೆಪಿಗೆ, ತನ್ನದೇ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದರ ಕ್ಷೇತ್ರ ಶಿಗ್ಗಾಂವಿಯ ಮತದಾರರು ಅವರ ಮಗನನ್ನೇ ಸೋಲಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಎತ್ತಿಹಿಡಿದು ಸರಿಯಾದ ಉತ್ತರವನ್ನು ನೀಡಿದ್ದಾರೆ.  

ಕೇಂದ್ರ ಆಹಾರ ನಿಗಮದಲ್ಲಿ ಹೆಚ್ಚುವರಿ ಅಕ್ಕಿ ಸಂಗ್ರವಿದ್ದ ಹೊರತಾಗಿಯೂ ರಾಜ್ಯದ ಕನಿಷ್ಟ ಬೇಡಿಕೆಯನ್ನು ನಿರಾಕರಿಸಿ ಅನ್ನ ಭಾಗ್ಯದ ಅಕ್ಕಿಗೆ ಕೊಕ್ಕೆ ಹಾಕಿದ್ದ, ತನ್ನ ಆಡಳಿತಾವಧಿಯಲ್ಲಿ ಇಂದಿರಾ ಕ್ಯಾಂಟಿನ್ ಗಳಿಗೆ ಅನುದಾನ ನಿಲ್ಲಿಸಿ ಬಡವರ ಹೊಟ್ಟೆಗೆ ಹೊಡೆದಿದ್ದ ಬಿಜೆಪಿ, ರಾಜ್ಯ ಸರಕಾರ ರೇಷನ್ ಕಾರ್ಡ್ ಪರಿಷ್ಕರಣೆಯಡಿ ನಿಯಮ ಬಾಹಿರ ಬಿಪಿಎಲ್ ಕಾರ್ಡ್ ಗಳನ್ನು‌ ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತಿಸುತ್ತಿರುವುದನ್ನು ಚುನಾವಣಾ ವಿಷಯವನ್ನಾಗಿಸಿ ಜನರ ದಿಕ್ಕುತಪ್ಪಿಸಲು ನೋಡಿ ಚುನಾವಣೆಯಲ್ಲಿ ತಾನೆ ದಿಕ್ಕುತಪ್ಪಿ ಸೋಲುವಂತಾಗಿ ಮೂರೂ ಕ್ಷೇತ್ರಗಳನ್ನು ಕಳಕೊಳ್ಳುವಂತಾಗಿದೆ. ಬಿಜೆಪಿ ಇನ್ನಾದರೂ ತನ್ನ ಸೋಲಿನ ಬಗ್ಗೆ ಆತ್ಮಾವಲೋಕನದ ಮೂಲಕ ತನ್ನ ತಪ್ಪಿನ ಪರಮಾರ್ಜನೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಶಾಂತಿಯುತ ನಿರಾಳ ಆಡಳಿತಕ್ಕೆ ಅನುವು ಮಾಡಿಕೊಡಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News