ಸಂವಿಧಾನ ಬದಲಿಸುವ ಪೇಜಾವರಶ್ರೀಗಳ ಹೇಳಿಕೆಗೆ ಖಂಡನೆ
ಕುಂದಾಪುರ, ನ.26: ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಭಾರತದ ಸಂವಿಧಾನ ದಲ್ಲಿ ಎಲ್ಲವನ್ನೂ ಪಡೆದುಕೊಂಡು ಸಂವಿಧಾನದ ಆಶಯದಂತೆ ಒಂದು ಮಠದ ಮಠಾಧಿಪತಿ ಆಗಿದ್ದರು ಸಹ ಸಂವಿಧಾನ ವನ್ನು ಬದಲಾಯಿಸುವಂತೆ ನೀಡಿರುವ ಹೇಳಿಕೆ ಪ್ರಬುದ್ದ ಭಾರತದ ಸಂವಿಧಾನಕ್ಕೆ ಅಗೌರವ ತೋರಿದಂತೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಕುಂದಾಪುರ ತಾಲೂಕು ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದೆ.
ಒಬ್ಬ ಮಠಾಧಿಪತಿ ಆದವರಿಗೆ ಸಮಾಜದ ಎಲ್ಲಾ ವರ್ಗದವರು ದನ್ಯತಾ ಭಾವದಿಂದ ಗೌರವವನ್ನು ನಮ್ಮ ದೇಶದ ಜನ ಹಿಂದಿನಿಂದಲೂ ನೀಡುತ್ತಾ ಬಂದಿದ್ದಾರೆ. ಇಂದಿಗೂ ನೀಡುತಿದ್ದಾರೆ. ಆದರೂ ನಮ್ಮನ್ನು ಗೌರವಿಸುವ ಸಂವಿಧಾನ ಬರ ಬೇಕೆಂದು ಹೇಳಿರುವ ಸ್ವಾಮೀಜಿಯವರ ಹೇಳಿಕೆಯ ಹಿಂದಿನ ಮರ್ಮವೇನು? ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಸಮತಿ ಆಶ್ಚರ್ಯ ವ್ಯಕ್ತಪಡಿಸಿದೆ.
ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡವ ಮೊದಲು ಹೇಳಿಕೆಯ ಉದ್ದೇಶ ಏನೆಂದು ಸಾರ್ವಜನಿಕರ ಮುಂದೆ ಸ್ಪಷ್ಟ ಪಡಿಸಬೇಕು ಭಾರತದ ಸಂವಿಧಾನ ಕೇವಲ ಕಾಲ್ಪನಿಕ ಕಟ್ಟು ಕಥೆ ಯಲ್ಲ. ದೇಶದ ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಪ್ರತಿಯೊಂದು ಜಾತಿ ಧರ್ಮಗಳ ಘನತೆಯನ್ನು ಗೌರವಿಸುವ, ವಿವಿಧ ಭಾಷೆ ಗಳು, ವಿವಿಧ ಸಂಸ್ಕೃತಿಗಳನ್ನು ಆರಾಧಿಸುವ ಎಲ್ಲಾ ಜೀವರಾಶಿ ಪ್ರಾಣಿ ಸಂಕುಲವನ್ನು ಗೌರವಿಸುವ ದೇಶದ ಸಿರಿ ಸಂಪತ್ತುಗಳನ್ನು ಬೆಳಸಿ ಉಳಿಸುವ ಸುಸಂಸ್ಕೃತ ವಾದ ಭಾರತ ದೇಶದ ಘನತೆಯನ್ನು ವಿಶ್ವದೆಲ್ಲೆಡೆ ಗೌರವಿಸುವ ಸಂವಿಧಾನ ಪೇಜಾವರ ಸ್ವಾಮಿಗಳಿಗೆ ಯಾವ ಕಾರಣದಿಂದ ಅತೃಪ್ತಿ ಉಂಟುಮಾಡಿದೆ? ಎಂದು ಹೇಳಿಕೆಯಲ್ಲಿ ಪ್ರಶ್ನಿಸಲಾಗಿದೆ.
ಸಂವಿಧಾನದ ಆಶಯ ಎಲ್ಲಾ ಜಾತಿ ಧರ್ಮಗಳನ್ನು ಸಮಾನವಾಗಿ ಸಮ ಸಮಾಜವನ್ನು ಬಯಸುವ ಕಾರಣಕ್ಕಾಗಿಯೇ? ಅಥವಾ ಈ ಶತಮಾನದಲ್ಲು ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು, ಮತ್ತೆ ಮನುವಾದವನ್ನು ಶಾಸನ ಬದ್ದವಾಗಿಸುವ ಹುನ್ನಾರ ಸಾದ್ಯವಾಗಿಲ್ಲ ಎನ್ನುವ ಕಾರಣಕ್ಕಾಗಿಯೇ? ಅಥವಾ ಅಸ್ಪೃಶ್ಯತೆಯನ್ನು ಮತ್ತೆ ದೇಶದಲ್ಲಿ ಆಚರಣೆಗಿಳಿಸಬೇಕೆಂಬ ಹುನ್ನಾರ ಈಡೇರಿಲ್ಲ ಎಂಬ ಕಾರಣಕ್ಕಾಗಿಯೇ? ಈ ಎಲ್ಲಾ ಪ್ರಶ್ನೆಗಳನ್ನು ಸ್ವಾಮೀಜಿ ತಮ್ಮ ಆತ್ಮಸಾಕ್ಷಿಗೆ ಕೇಳಿಕೊಳ್ಳಲಿ.
ಒಂದು ವೇಳೆ ಅವರ ಮನಸ್ಸಿಲ್ಲಿ ಇಂತಹ ಅನಿಷ್ಟ ಪದ್ಧತಿಗಳನ್ನು ಮತ್ತೆ ದೇಶದಲ್ಲಿ ತರತ್ತೇವೆಂಬ ಯೋಚನೆ ಮತ್ತು ಯೋಜನೆ ಗಳಿದ್ದರೆ ಅದನ್ನು ಕೈ ಬಿಟ್ಟು ಭಾರತದ ಸರ್ವ ಶ್ರೇಷ್ಠ ಗ್ರಂಥವಾದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿಯಾಗಿರುವ ಸಂವಿಧಾನವನ್ನು ಗೌರವಿಸುವ ಮನಸ್ಥಿತಿಯನ್ನು ಬೆಳಸಿಕೊಂಡು, ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ದೇಶಕ್ಕೆ ಸಾರುವ ಒಬ್ಬ ಗೌರವಾನ್ವಿತ ಸ್ವಾಮೀಜಿಯಾಗಿ ಸಮಾಜಕ್ಕೆ ಮಾದರಿಯಾಗಲಿ ಎಂದು ದಸಂಸ ಕುಂದಾಪುರ ತಾಲೂಕು ಸಮಿತಿಯ ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಆಶಿಸಿದ್ದಾರೆ.
ಒಂದು ವೇಳೆ ಸಂವಿಧಾನವನ್ನು ಬದಲಾಯಿಸುವ ಅಗೌರವಿಸುವ ಸಾಹಸಕ್ಕೆ ಯಾರೇ ಮುಂದಾದರೂ ಸಂವಿಧಾನವನ್ನು ಗೌರವಿಸುವ ಪ್ರಜ್ಞಾವಂತ ನಾಗರಿಕರು ತಕ್ಕ ಉತ್ತರ ನೀಡಲು ತಯಾರಿದ್ದೇವೆಂಬ ಎಚ್ಚರಿಕೆಯ ಸಂದೇಶವನ್ನು ನಾವು ನೀಡಲು ಬಯಸಿದ್ದೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.