ಪೇಜಾವರ ಸ್ವಾಮಿ ದೇಶ ಬಿಟ್ಟು ಹೋಗಲಿ: ಜಯನ್ ಮಲ್ಪೆ

Update: 2024-11-26 16:21 GMT

ಮಲ್ಪೆ: ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವದ ತತ್ವಗಳ ಆಧಾರದ ಮೇಲೆ ರಚಿತವಾಗಿರುವ ನಮ್ಮ ಸಂವಿಧಾನವನ್ನು ಒಪ್ಪದ ಉಡುಪಿಯ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ದೇಶ ಬಿಟ್ಟು ಹೋಗಲಿ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಮಂಗಳವಾರ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ 75ನೇ ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದರು.

ಅಂಬೇಡ್ಕರ್ ಬರೆದ ಸಂವಿಧಾನ ಉಳಿದರೆ ಮಾತ್ರ ನಮ್ಮ ದೇಶದ ಸಮಗ್ರತೆ, ಸಂಸ್ಕೃತಿ ಮತ್ತು ಜನರ ಬದುಕು ಉಳಿಯು ತ್ತದೆ. ನಮ್ಮ ಸಂವಿಧಾನವು ಎಲ್ಲಿಯವರೆಗೆ ಸುರಕ್ಷಿತವಾಗಿರುತ್ತದೆಯೋ ಅಲ್ಲಿಯವರೆಗೆ ನಾವೆಲ್ಲರು ಸುರಕ್ಷಿತವಾಗಿರುತ್ತೇವೆ. ಇಲ್ಲವೇ ನಾವೆಲ್ಲರೂ ನಾಶವಾಗುತ್ತೇವೆ ಎಂಬುದನ್ನು ಪೇಜಾವರ ಸ್ವಾಮೀಜಿ ಅರ್ಥಮಾಡಿಕೊಳ್ಳಲಿ ಎಂದರು.

ಭಾರತವೆಂದರೆ ವೈದಿಕ ಹಿಂದೂ ದೇಶ ಮಾಡಲು ಹೊರಟಿರುವ ಪೇಜಾವರ ಸ್ವಾಮೀಜಿ, ಈಗಿನ ಸಂವಿಧಾನ ಹೋಗಿ, ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕಾಗಿದೆ ಎನ್ನುವ ಮೂಲಕ ನಮ್ಮ ಸಂವಿಧಾನದ ಆಶಯಕ್ಕೆ ಗುಂಡು ಹೊಡೆದು ಈ ದೇಶವನ್ನು ನಾಶಮಾಡಲು ಸಂಚು ನಡೆಸಿದ್ದಾರೆ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.

ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ ಅಂಬೇಡ್ಕರ್ ಭಾರತದಲ್ಲಿ ಜನಿಸದೇ ಇರುತ್ತಿದ್ದರೆ, ಇಂದು ಭಾರತದ ಪರಿಸ್ಥಿತಿ ಏನಾಗಿರುತ್ತಿತ್ತು ಎನ್ನುವುದನ್ನು ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ಭಾರತದ ಬೀದಿಗಳಲ್ಲಿ ಚಿನ್ನ,ರತ್ನ,ವಜ್ರ,ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವ ಇತಿಹಾಸ ಕೇಳಿದ್ದೇವೆ.ಆದರೆ ಅದೇ ಭಾರತ ದಲ್ಲಿ ಮನುಷ್ಯನನ್ನು ಮನುಷ್ಯನಂತೆ ಕಾಣಲಾಗುತ್ತಿರಲಿಲ್ಲ ಎನ್ನುವ ಸತ್ಯವನ್ನೂ ನಾವು ಒಪ್ಪಿಕೊಂಡಿದ್ದೇವೆ. ಇಂದು ಭಾರತ ದಲ್ಲಿ ಇಷ್ಟರ ಮಟ್ಟಿಗೆ ಸಮಾನತೆ, ನೆಮ್ಮದಿ ಇದೆ ಎಂದರೆ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ದಲಿತ ಹಕ್ಕುಗಳ ಹೋರಾಟ ಸುತಿಯ ಸಂಜೀವ ಬಳ್ಕೂರು ಮಾತನಾಡಿ ಸಂಧಾನದ ಆಶಯ ವನ್ನು ಉಳಿಸದೇ ಹೋದರೆ ಈ ದೇಶಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ. ನಮ್ಮನ್ನು ಆಳ್ವಿಕೆ ಮಾಡಿರುವ ಎಲ್ಲಾ ರಾಜಕೀಯ ಪಕ್ಷಗಳು ಈ ದೇಶವನ್ನು ಎಲ್ಲಿಂದ ಎಲ್ಲಿಗೆ ಕೊಂಡೊಯುತ್ತಿದ್ದಾರೆ ಎಂಬ ಸತ್ಯ ಸಂಗತಿಯನ್ನು ಪ್ರಜ್ಞಾವಂತ ಜನತೆಯ ಮುಂದಿಟ್ಟು ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮ ಮುಂದಿದೆ ಎಂದರು.

ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮೀನಗರ, ಸಾಧು ಚಿಟ್ಪಾಡಿ, ಮೋಹನ್ ಗುಜ್ಜರ ಬೆಟ್ಟು, ಬಿ.ಎನ್. ಪ್ರಶಾಂತ್, ದೀಪಕ್ ಕೊಡವೂರು, ಅರುಣ್ ಸಾಲ್ಯಾನ್, ಶಕಿಲ್ ಕಪ್ಪೆಟ್ಟು, ಪ್ರಸಾದ್ ಮಲ್ಪೆ, ಈಶ್ವರ್ ಗದಗ, ಜಯ ಸಾಲ್ಯಾನ್ ಪಾಳೆಕಟ್ಟೆ ಮುಂತಾದವರು ಭಾಗವಹಿಸಿದ್ದರು. ಭಗವನ್ ಮಲ್ಪೆ ಸ್ವಾಗತಿಸಿ, ಸತೀಶ್ ಕಪ್ಪೆಟ್ಟು ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News